ಸಂಘ ಸಂಸ್ಥೆಗಳು ಸಮಾಜಮುಖಿ ಧ್ಯೇಯ ಹೊಂದಿರಬೇಕು

KannadaprabhaNewsNetwork |  
Published : Nov 09, 2024, 01:00 AM IST
ಸಾಂಸ್ಕೃತಿಕ ಉತ್ಸವ,ಕುಮದ್ವತಿ ಕಲಾ ಸಂಭ್ರಮ ಕಾರ್ಯಕ್ರಮ ವನ್ನು ಸಂಸದ ರಾಘವೇಂದ್ರ ಉದ್ಘಾಟಿಸಿದರು | Kannada Prabha

ಸಾರಾಂಶ

ಸಮಾಜಮುಖಿ ಕಾರ್ಯ ಪ್ರತಿಯೊಂದು ಸಂಘ ಸಂಸ್ಥೆಯ ಧ್ಯೇಯವಾಗಬೇಕು. ಈ ದಿಸೆಯಲ್ಲಿ ರೋಟರಿ ಕದಂಬ ಅತ್ಯಲ್ಪ ಅವಧಿಯಲ್ಲಿಯೇ ಸಮಾಜಮುಖಿ ಕಾರ್ಯದ ಮೂಲಕ ಹೆಚ್ಚು ಜನಪ್ರಿಯವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜಮುಖಿ ಕಾರ್ಯ ಪ್ರತಿಯೊಂದು ಸಂಘ ಸಂಸ್ಥೆಯ ಧ್ಯೇಯವಾಗಬೇಕು. ಈ ದಿಸೆಯಲ್ಲಿ ರೋಟರಿ ಕದಂಬ ಅತ್ಯಲ್ಪ ಅವಧಿಯಲ್ಲಿಯೇ ಸಮಾಜಮುಖಿ ಕಾರ್ಯದ ಮೂಲಕ ಹೆಚ್ಚು ಜನಪ್ರಿಯವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.

ಪಟ್ಟಣದ ಕುಮದ್ವತಿ ರೆಸಿಡೆನ್ಶಿಯಲ್ ಶಾಲೆ ಅಡಿಟೋರಿಯಂ ನಲ್ಲಿ ರೋಟರಿ ಕ್ಲಬ್ ಶಿಕಾರಿಪುರ ಕದಂಬ ವತಿಯಿಂದ ನಡೆದ ವಲಯ 10 ಸಾಂಸ್ಕೃತಿಕ ಉತ್ಸವ, ಕುಮದ್ವತಿ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಮುಖಿ ಕಾರ್ಯ ಎಲ್ಲ ಸಂಘ ಸಂಸ್ಥೆಗಳ ಧ್ಯೇಯವಾಗಬೇಕು. ಇತ್ತೀಚಿನ ದಿನದಲ್ಲಿ ಪರಿಸರ ಹೆಚ್ಚು ಕಲುಷಿತವಾಗುತ್ತಿದ್ದು, ಪರಿಸರ ಸಮತೋಲನ ಕಾಪಾಡುವ ದಿಸೆಯಲ್ಲಿ ಸಂಘ ಸಂಸ್ಥೆಗಳು ಹೆಚ್ಚಿನ ನಿಗಾವಹಿಸಬೇಕಾಗಿದೆ. ಜತೆಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಉಂಟು ಮಾಡಬೇಕಾಗಿದೆ. ಮನುಷ್ಯ ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾಗುತ್ತಿರುವ ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಸಮುದಾಯದ ಹಿತಕ್ಕಾಗಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜತೆಗೆ ಪರಿಸರ ಕಾಳಜಿ ಮೂಲಕ ಅತ್ಯಲ್ಪ ಅವಧಿಯಲ್ಲಿಯೇ ಹೆಚ್ಚು ಜನಪ್ರಿಯವಾಗಿದೆ ಎಂದು ತಿಳಿಸಿದರು.ಸಮಾಜ ಇಂದು ಹೆಚ್ಚು ಸವಾಲುಗಳನ್ನು ಎದುರಿಸುತ್ತಿದ್ದು, ಪರಿಸರ ಅಸಮತೋಲನದಿಂದ ಹೆಚ್ಚಿನ ಅನಾಹುತ ಸಂಭವಿಸುತ್ತಿದೆ. ರಾಜಧಾನಿ ದೆಹಲಿಯಲ್ಲಿ ವಾತಾವರಣದ ಮಾಲಿನ್ಯ ವಿಪರೀತವಾಗಿದೆ. ಕೃಷಿಕರು ಕೃಷಿ ತ್ಯಾಜ್ಯಕ್ಕೆ ಅಗ್ನಿಸ್ಪರ್ಶದಿಂದ ಹೆಚ್ಚಿನ ರೀತಿಯಲ್ಲಿ ಮಲಿನವಾಗುತ್ತಿದೆ. ಈ ಸಂದರ್ಬದಲ್ಲಿ ಸಂಘ ಸಂಸ್ಥೆಗಳು ಕೃಷಿಕರಿಗೆ ತೊಂದರೆಯಾದ, ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಪರ್ಯಾಯ ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಹೊಸ ಹೊಸ ನಮೂನೆಯ ಆಲೋಚನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಕದಂಬ ಅಧ್ಯಕ್ಷ ಎಚ್.ಎಸ್ ಶಿವಪ್ರಕಾಶ್ ಮಾತನಾಡಿ, ರೋಟರಿ ಸಮಾಜಮುಖಿ ಕಾರ್ಯದಲ್ಲಿ ಸದಸ್ಯರ ಸಹಕಾರ ಬಹು ಮಹತ್ವವಾಗಿದ್ದು, ಇದರೊಂದಿಗೆ ಸಂಸದರ ಸಹಕಾರ ಸ್ಮರಣೀಯವಾಗಿದೆ. ಅವರು ಸಂಸ್ಥೆಯ ಗೌರವ ಸದಸ್ಯರಾಗಿ ಸಂಸದ ರಾಘವೇಂದ್ರ ಸೇವಾ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಬಾಲ್ಯದಿಂದ ಸೇವಾ ಕಾರ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು, ತಂದೆ ಮೂಲಕ ಜನಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ. 4ನೇ ಬಾರಿ ಸಂಸದರಾಗಿರುವ ಅವರು ಅಭಿವೃದ್ದಿ ಕಾರ್ಯದ ಮೂಲಕ ಎಲ್ಲ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಶ್ಲಾಘಿಸಿದರು.

ವೇದಿಕೆಯಲ್ಲಿ ಹೆಸರಾಂತ ಕಿರುತೆರೆ ಕಲಾವಿದ ರವಿ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ಬಿ ಶಿವಕುಮಾರ, ರೋಟರಿ ಕ್ಲಬ್ ಕಾರ್ಯದರ್ಶಿ ಹರೀಶ್, ಸಂಸ್ಥಾಪಕ ಅಧ್ಯಕ್ಷ ರಘು ಎಂ.ಆರ್, ರವೀಂದ್ರನಾಥ ಐತಾಳ್, ಆದರ್ಶ, ಆನಂದಮೂರ್ತಿ, ಕೆ.ಪಿ ಶೆಟ್ಟಿ ಪದಾಧಿಕಾರಿ ಬಿ.ಎಲ್ ರಾಘವೇಂದ್ರ, ಶಿವಮೂರ್ತಿ, ಲಕ್ಷ್ಮಣ್, ಮಧುಕೇಶ್ವರ್, ಸುನೀಲ್(ಸಿದ್ದು), ಮಧು ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ