ಕನ್ನಡಪ್ರಭ ವಾರ್ತೆ ಚನ್ನಗಿರಿ
ಎಲ್ಲಾ ವಿಧಾನ ಪರಿಷತ್ ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿರುವುದನ್ನು ಗಮನಿಸಿದರೆ ಬುದ್ಧಿವಂತ ಮತದಾರರು ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂಬುದರ ಸಂಕೇತವಾಗಿದೆ. ಈ ಉತ್ಸಾಹದಿಂದ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ಬುಧುವಾರ ಸಂಜೆ ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಜಯಗಳಿಸಿದ ಅಭ್ಯರ್ಥಿಗಳ ಅಭಿನಂಧನಾ ಸಮಾರಂಭ ಹಾಗೂ ಕೃತಜ್ಞತಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್.ಎಲ್.ಭೋಜೇಗೌಡ ಮತ್ತು ಡಾ.ಧನಂಜಯ ಸರ್ಜಿಗೆ ಹಮ್ಮಿಕೊಂಡಿದ್ದ ನಾನು ಮೊದಲ ಬಾರಿಗೆ ಶಾಸಕನಾಗಿದ್ದ ಸಂದರ್ಭದಲ್ಲಿ ಉಬ್ರಾಣಿ ಏತನೀರಾವರಿ ಯೋಜನೆ ಪೂರ್ಣಗೊಳಿಸಿ ತಾಲೂಕಿನ ಕೆರೆಗಳಿಗೆ ನೀರನ್ನು ತುಂಬಿಸಿದ್ದೆ. ಆದರೆ ನಮ್ಮ ತಾಲೂಕಿನ ಕೆರೆಗಳು ಇದುವರೆಗೂ ತುಂಬಿಲ್ಲ. ಇಂತಹ ಸಂದರ್ಭದಲ್ಲಿ ಈ ಯೋಜನೆಯ ಮುಖ್ಯ ಪೈಪ್‌ಲೈನ್‌ಗೆ ಇನ್ನೊಂದು ಸಬ್ ಪೈಪ್‌ಲೈನ್ ಮಾಡಿ, ತರಿಕೆರೆ ತಾಲೂಕಿನ ಕೆರೆಗಳಿಗೆ ನೀರನ್ನು ತೆಗೆದುಕೊಂಡು ಹೋಗುವ ಯೋಜನೆ ಸಿದ್ಧವಾಗಿದೆ. ಯಾವುದೇ ಕಾರಣಕ್ಕೂ ನಮ್ಮ ತಾಲೂಕಿನ ಕೆರೆಗಳು ತುಂಬುವ ಮೊದಲೇ ಬೇರೆ ತಾಲೂಕಿನ ಕೆರೆಗಳಿಗೆ ನೀರನ್ನು ಹರಿಸಲು ಬಿಡಬಾರದು ಎಂದರು.
ತಾಲೂಕಿನ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಎಲ್ಲಾ ಕಚೇರಿಗಳು ಒಂದೇ ಸೂರಿನಲ್ಲಿ ಇರಬೇಕು ಎಂಬ ಉದ್ದೇಶದಿಂದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ, ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಯನ್ನು ಪ್ರಾರಂಭಿಸಿದ್ದೆ.ಆದರೆ ನಾನು ಶಾಸಕನಾಗಿದ್ದಾಗ ಮಾಡಿದ ಕೆಲಸಗಳನ್ನು ಬಿಟ್ಟು ಇಲ್ಲಿಯವರೆಗೂ ಒಂದೇ ಒಂದು ಕೆಲಸ ಆಗಿಲ್ಲ. ಅಲ್ಲದೇ ನಾನು ಪ್ರಾರಂಭಿಸಿದ್ದ ಕಾಮಗಾರಿಗಳು ಈಗಲೂ ಅರ್ಧಕ್ಕೇ ನಿಂತಿವೆ. ಈಗಿನ ಶಾಸಕರು ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪಟ್ಟಣದಲ್ಲಿರುವ ಎಲ್ಲಾ 29 ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಲ್ಲಿ ತರುವ ಜವಾಬ್ದಾರಿ ಹೊರಬೇಕು ಎಂದರು.ಬಡ ವರ್ಗದ ಜನರು ಕಡಿಮೆ ವೆಚ್ಚದಲ್ಲಿ ಮದುವೆ, ಶುಭ ಸಮಾರಂಭ ಮಾಡಿಕೊಳ್ಳಲು ತಾಲೂಕಿನ ಆಯ ಕಟ್ಟಿನ ಪ್ರದೇಶಗಳಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಅನುದಾನ ತಂದು, ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿದ್ದೆ. ಆದರೆ ಇದುವರೆಗೂ ಅದಕ್ಕೆ ಚಾಲನೆ ಸಿಕ್ಕಿಲ್ಲ. ಅದಕ್ಕೆ ಕಾರಣವನ್ನೂ ಹಾಲಿ ಶಾಸಕರು ತಿಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಈ ಹಿಂದೆ ನಡೆದ ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅದರೂ ಸಹ ಲೋಕಸಭಾ ಚುನಾವಣೆಯಲ್ಲಿ ಸೋಲಾಗಿದ್ದು, ನಮ್ಮ ಜಿಲ್ಲೆಯ ಕೆಲ ಬಿಜೆಪಿ ನಾಯಕರು ತಮ್ಮ ಕ್ಷೇತ್ರದ ಹಿನ್ನಡೆ ಮುಚ್ಚಿಹಾಕಿಕೊಳ್ಳಲು ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ. ನಮ್ಮ ವಿರೋಧ ಪಕ್ಷದವರು ಹಣದ ಹೊಳೆ ಹರಿಸಿದರೂ ಸಹಾ ಮೋದಿ ಬಲದ ಮೇಲೆ ಚುನಾವಣೆ ಎದುರಿಸಿ ನಮ್ಮ ಕ್ಷೇತ್ರದಿಂದ ಅಧಿಕ ಮತಗಳನ್ನು ಬಿಜೆಪಿ ಅಭ್ಯರ್ಥಿಗೆ ಕೊಡಿಸಲಾಗಿದೆ ಎಂದರು.ನೂತನ ವಿ.ಪ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಯಿಂದ ಎರಡು ಪಕ್ಷಗಳಿಗೂ ರಾಜಕೀಯ ಲಾಭಗಳಾಗಿದ್ದು, ಈ ಮೈತ್ರಿಯಿಂದಲೇ ಡಾ.ಧನಂಜಯ ಸರ್ಜಿ ಮತ್ತು ನಾನು ಪ್ರಥಮ ಪ್ರಾಶಸ್ತ್ಯ ಮತಗಳಿಂದ ಅಭೂತ ಪೂರ್ವವಾದ ಗೆಲುವನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.
ಮತ್ತೋರ್ವ ವಿ.ಪ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಅಭಿವೃದ್ಧಿ ಶೂನ್ಯ, ಪಿಕ್ ಪಾಕೆಟ್ ಹಾಗೂ ಡೇಂಜರ್ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ರಾಜ್ಯದ ಜನತೆಗೆ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಆಯಸ್ಸು ಇಲ್ಲ ಎಂದು ಭವಿಷ್ಯ ನುಡಿದರು.ಈ ವೇಳೆ ತಾಲೂಕು ಬಿಜೆಪಿ ಮುಖಂಡರಾದ ಸಂತೆಬೆನ್ನೂರು ಬಸವರಾಜ್, ತಾಪಂ ಮಾಜಿ ಅಧ್ಯಕ್ಷ ದೇವರಹಳ್ಳಿ ಎ.ಎಸ್.ಬಸವರಾಜಪ್ಪ, ಎಂ.ಬಿ.ರಾಜಪ್ಪ, ಕೆ.ಸಿ.ಕೆಂಚಪ್ಪ, ಪಿ.ಲೋಹಿತ್, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕ ಮಲ್ಲೇಶಪ್ಪ, ಎಂ.ಯು.ಚನ್ನಬಸವಪ್ಪ, ಚ.ಮ,ಗುರುಸಿದ್ದಯ್ಯ ಸೇರಿದಂತೆ ಮೊದಲಾದವರು ಇದ್ದರು.