ನಂದಿಬೆಟ್ಟದಲ್ಲಿ ಕ್ರೀಡಾ ಚಟುವಟಿಕೆ ಆಯೋಜಿಸಿ

KannadaprabhaNewsNetwork |  
Published : Aug 11, 2025, 12:30 AM IST
ಸಿಕೆಬಿ-1 ತಾಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿ ಭಾನುವಾರ ದಿವ್ಯಶ್ರೀ ಮುಂಗಾರು ಓಟದ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಜನತೆ   ಸಿಕೆಬಿ-2 ತಾಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿ   ದಿವ್ಯಶ್ರೀ ಮುಂಗಾರು ಓಟದ ಸ್ಫರ್ಧೆಯ ವಿಜೇತರಿಗೆ ಸಚಿವ ಡಾ.ಎಂ.ಸಿ.ಸುಧಾಕರ್  ಬಹುಮಾನ ವಿತರಿಸಿದರು  | Kannada Prabha

ಸಾರಾಂಶ

ವಿದೇಶಗಳಲ್ಲಿರುವಂತೆ ನಂದಿಬೆಟ್ಟದಲ್ಲೂ ಇನ್ನಷ್ಟು ಮನರಂಜನಾ ಅನುಕೂಲಗಳನ್ನು ಒದಗಿಸಲು ನಮ್ಮ ಕಾನೂನಿನಲ್ಲಿ ಅವಕಾಶ ಇಲ್ಲ. ನಾನು ಬ್ರೆಜಿಲ್‌ನ ರಿಯೋ ಡಿ ಜೆನೆರಿಯೋ ಮುಂತಾದ ಕಡೆ ಭೇಟಿ ಕೊಟ್ಟಿದ್ದೇನೆ. ಅಲ್ಲಿ ಪ್ರವಾಸೋದ್ಯಮಕ್ಕಾಗಿ ಪರಿಸರವನ್ನು ಸಾಕಷ್ಟು ಪರಿವರ್ತಿಸಲಾಗಿದೆ. ಆದರೆ ನಂದಿಬೆಟ್ಟ ಪ್ರಾಕೃತಿಕವಾಗಿಯೇ ಅವೆಲ್ಲವನ್ನೂ ಮೀರಿಸುವಂತಿದೆ,

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಂದಿಬೆಟ್ಟ ಸಹಜ ಪ್ರಾಕೃತಿಕ ಸೌಂದರ್ಯದ ಪ್ರವಾಸೋದ್ಯಮ ತಾಣವಾಗಿ ವಿಶ್ವಮಟ್ಟದ ಗಿರಿಧಾಮವಾಗಿದೆ. ಈ ತಾಣದ ಪ್ರಯೋಜನ ಜನರಿಗೆ ಲಭಿಸಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮುಂಗಾರು ಓಟದಂತಹ ಇನ್ನಷ್ಟು ಚಟುವಟಿಕೆಗಳನ್ನು ಆಯೋಜಿಸಲು ಮುಂದಾಗಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಲಹೆ ನೀಡಿದರು.

ತಾಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿ ಭಾನುವಾರ ದಿವ್ಯಶ್ರೀ ಮುಂಗಾರು ಓಟದ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಮುಂಗಾರು ಓಟ, ವಾಕಥಾನ್ ನಂತಹ ಚಟುವಟಿಕೆಗಳು ವರ್ಷಪೂರ್ತಿ ಆಯೋಜಿಸುವುದರಿಂದ ಜನರು ಆರೋಗ್ಯದತ್ತ ಸ್ಫೂರ್ತಿಗೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು.

ನಂದಿಬೆಟ್ಟದ ಪ್ರಾಕೃತಿಕ ಸೌಂದರ್ಯ

ವಿದೇಶಗಳಲ್ಲಿರುವಂತೆ ನಂದಿಬೆಟ್ಟದಲ್ಲೂ ಇನ್ನಷ್ಟು ಮನರಂಜನಾ ಅನುಕೂಲಗಳನ್ನು ಒದಗಿಸಲು ನಮ್ಮ ಕಾನೂನಿನಲ್ಲಿ ಅವಕಾಶ ಇಲ್ಲ. ನಾನು ಬ್ರೆಜಿಲ್‌ನ ರಿಯೋ ಡಿ ಜೆನೆರಿಯೋ ಮುಂತಾದ ಕಡೆ ಭೇಟಿ ಕೊಟ್ಟಿದ್ದೇನೆ. ಅಲ್ಲಿ ಪ್ರವಾಸೋದ್ಯಮಕ್ಕಾಗಿ ಪರಿಸರವನ್ನು ಸಾಕಷ್ಟು ಪರಿವರ್ತಿಸಲಾಗಿದೆ. ಆದರೆ ನಂದಿಬೆಟ್ಟ ಪ್ರಾಕೃತಿಕವಾಗಿಯೇ ಅವೆಲ್ಲವನ್ನೂ ಮೀರಿಸುವಂತಿದೆ, ಇಂತಹ ಸ್ಥಳದಲ್ಲಿ ಮುಂಗಾರು ಓಟ ಕಾರ್ಯಕ್ರಮ ಆಯೋಜಿಸಿದ್ದು ಪ್ರಶಂಸನೀಯ ಎಂದರು.

ನಾಳೆ ಎಂಬುದೇ ಬರುತ್ತಿಲ್ಲ

ಪ್ರತಿಬಾರಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ನಾನು ಮನಸಿನಲ್ಲಿ ನಾಳೆಯಿಂದ ನಾನೂ ನಾಳೆಯಿಂದ ಆರೋಗ್ಯಕ್ಕಾಗಿ ಓಡಬೇಕು ಎಂದು ನಿರ್ಧರಿಸುತ್ತೇನೆ. ಆದರೆ ದುರದೃಷ್ಟವಶಾತ್ ಆ ನಾಳೆ ಎಂಬುದೇ ಬರುತ್ತಿಲ್ಲ. ಓಡಲು ಮನಸ್ಥಿತಿಯನ್ನು ಸಿದ್ಧಪಡಿಸಿಕೊಳ್ಳಲು ಆಗುತ್ತಿಲ್ಲ. ಆದರೂ ಇಲ್ಲಿ ನೆರೆದಿರುವವರನ್ನು ನೋಡಿ ಮುಂದಿನ ವರ್ಷ ಆ. 9 ರಂದು ನಡೆಯುವ ಮುಂಗಾರು ಓಟದಲ್ಲಿ 21 ಕಿಮೀ ಅಲ್ಲದಿದ್ದರೂ 10 ಕಿಮೀ ಆದರೂ ಓಡಬೇಕು ಎಂದು ನಿರ್ಧರಿಸಿದ್ದೇನೆ ಎಂದರು.

ಮುಂಗಾರು ಓಟಕ್ಕಾಗಿ ನಂದಿಬೆಟ್ಟದ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಚಾರ ನಿರ್ಬಂಧ ಹೇರಿದ್ದರಿಂದ ಪ್ರವಾಸಿಗರಿಗೆ ಅನನುಕೂಲವಾದರೂ ಆರೋಗ್ಯಕ್ಕಾಗಿ ಮುಂಗಾರು ಓಟದಂತಹ ಕಾರ್ಯಕ್ರಮಗಳು ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿಸಲು ಪೂರಕವಾಗಲು ಸಾಧ್ಯವಾಗಿದೆ ಎಂದರು. 3,000 ಕ್ಕೂ ಹೆಚ್ಚು ಓಟಗಾರರು ನಂದಿಬೆಟ್ಟದ ಕಠಿಣ ಏರುಗತಿಯ ಮಾರ್ಗದಲ್ಲಿ ಸಾಗಿದ ಓಟಗಾರರು ಮಂಜಿನಿಂದ ಆವರಿಸಿದ ಹಸಿರು ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸಿದರು.

ಫರ್ದೋಸ್‌ಗೆ ಪ್ರಥಮ ಬಹುಮಾನದಿವ್ಯಶ್ರೀ ವಿಸ್ಪರ್ ಆಫ್ ವಿಂಡ್ಸ್ ರೆಸಾರ್ಟ್‌ನಿಂದ ನಂದಿಬೆಟ್ಟದ ಗಿರಿಧಾಮದಲ್ಲಿನ ಮಿರ್ಜಾ ಇಸ್ಮಾಯಿಲ್ ಸರ್ಕಲ್ ವರೆಗಿನ ಗುರಿ ತಲುಪಿ ವಾಪಸ್ ಮತ್ತೆ ಆರಂಭದ ಸ್ಥಳಕ್ಕೆ ತಲುಪುವ ಹಾಫ್ ಮ್ಯಾರಥಾನ್ (21.1 ಕಿ.ಮೀ.) ಮಹಿಳೆಯರ ವಿಭಾಗದಲ್ಲಿ ರ‍್ಹೀನ್ ಫಿರ್ದೋಸ್ 1 ಗಂಟೆ 45 ನಿಮಿಷ 26 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲಿಗರಾದರು. ವಿದ್ಯಾ ಸುಂದರೇಶ್ವರ ಮತ್ತು ರೀಟಾ ಸತೀಶ್ ಪಾಟ್ಕರ್ ಎರಡು ಮತ್ತು ಮೂರನೇ ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ಶೈಲೇಶ್ ಕುಶುವಾಹ 1ಗಂಟೆ 14 ನಿಮಿಷ 28 ಸೆಕೆಂಡ್ ಅವಧಿಯಲ್ಲಿ ಗುರಿ ತಲುಪಿ ಪ್ರಥಮ ಬಹುಮಾನ ಪಡೆದರು. ಶಿವಾನಂದ ಚಿಗಾರಿ ಎರಡನೇ ಮತ್ತು ಮೊಹಮ್ಮದ್ ಸಾಹಿಲ್ ಅಣ್ಣಿಗೇರಿ ಮೂರನೇ ಬಹುಮಾನ ಪಡೆದರು. 10 ಕಿಮೀ ಓಟದ ಸ್ಫರ್ಧೆಯ ಮಹಿಳೆಯರ ವಿಭಾಗದಲ್ಲಿ ಶರಣ್ಯವಿಜಯರಾಘವನ್ ಮೊದಲ ಬಹುಮಾನ, ಯುವರಾಣಿ ಎರಡನೇ ಬಹುಮಾನ , ಹರ್ಷಿತ ಎಚ್.ಎಂ. ಮೂರನೇ ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ಗೋಪಿಚಂದ್ ಚಂದ್ ಮೊದಲ ಬಹುಮಾನ ಪಡೆದರು.ಅನುಭವ್ ಕರ್ಮಾಕರ್ ಎರಡನೇ ಬಹುಮಾನ, ಆಕಾಶ್ ಮೂರನೇ ಬಹುಮಾನ ಪಡೆದರು.

ಈ ಸಂದರ್ಭದಲ್ಲಿ ಯುವಜನ ಶಕ್ತಿ ಮತ್ತು ಕ್ರೀಡಾ ಇಲಾಖೆ ಮುಖ್ಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ , ದಿವ್ಯಶ್ರೀ ಡೆವಲಪರ್ಸ್ ಸಂಸ್ಥಾಪಕ ಅಧ್ಯಕ್ಷ ಡಾ. ಪಿ. ಶ್ಯಾಮರಾಜು, ದಿವ್ಯಶ್ರೀ ಡೆವಲಪರ್ಸ್ ಸಿಇಒ ಭಾಸ್ಕರ್ ಎನ್ ರಾಜು, ಹಾಗೂ ಜೆಜೆ ಆಕ್ಟೀವ್ ಸಂಸ್ಥೆಯ ಮುಖ್ಯ ತರಬೇತುದಾರ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಮೊದ್ ದೇಶಪಾಂಡೆ , ಮತ್ತಿತರರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ