ಕನ್ನಡಪ್ರಭ ವಾರ್ತೆ ಮೈಸೂರು
ಪೋಷಕಾಂಶಗಳಿಂದ ಸಮೃದ್ದವಾಗಿದ್ದ ಈ ತಳಿಗಳು ಆರೋಗ್ಯ ಕಾಪಾಡುತ್ತಿದ್ದವು. ಅನ್ನವೇ ಔಷಧವಾಗಿತ್ತು.ಇಂಥ ದೇಸಿ ಅಕ್ಕಿಗಳನ್ನು ಬಳಸುವ ಮೂಲಕ ಗ್ರಾಹಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಾವೇರಿಯ ಅಗಡಿ ಅಕ್ಕಿ ಮಠದ ಗುರುಲಿಂಗಸ್ವಾಮಿಜಿ ಕರೆ ನೀಡಿದರು.
ಸಹಜ ಸಮೃದ್ಧ ಹಾಗೂ ಭತ್ತ ಉಳಿಸಿ ಆಂದೋಲನದ ಆಶ್ರಯದಲ್ಲಿ ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ದೇಸಿ ಅಕ್ಕಿ ಮೇಳದ ಅಂಗವಾಗಿ ನಡೆದ ಅಕ್ಕಿ ಅಡುಗೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ನಗರದ ಗ್ರಾಹಕರಿಗೆ ಭತ್ತ ಸಂಸ್ಕ್ರೃತಿ ಮತ್ತು ವೈವಿಧ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಸಹಜ ಸಮೃದ್ಧದ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಭತ್ತದ ಲೋಕ - ನಾ ಕಂಡಂತೆ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಚಿತ್ರ ಕಲಾವಿದ ಎಸ್. ವಿಷ್ಣು ಕುಮಾರ್, ಭತ್ತದ ಕೃಷಿ ಮತ್ತು ಅನ್ನ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಚಿತ್ರಕಲಾ ಸ್ಪರ್ಧೆ ನೆರವಾಗಿದೆ. ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳು ಕೃಷಿ ವೈವಿಧ್ಯದ ಪರಿಚಯ ಮಾಡಿಕೊಳ್ಳಬೇಕು ಎಂದರು.
ದೇಸಿ ಅಡುಗೆ ಸ್ಪರ್ಧೆಯಲ್ಲಿ ಕುಸುಮ ಕೃಷ್ಣಮೂರ್ತಿ ಪ್ರಥಮ ಬಹುಮಾನ, ಮಣಿ ವಿರೂಪಾಕ್ಷ ದ್ವಿತೀಯ ಬಹುಮಾನ, ಸುನೀತಾ ಕುಮಾರಿ ತೃತೀಯ ಬಹುಮಾನ ಹಾಗೂ ಕೆ. ಚಂದ್ರಬೇನ್ ಸಮಾಧಾನಕರ ಬಹುಮಾನ ಗಳಿಸಿದರು. ತೀರ್ಪುಗಾರರಾಗಿ ಕೃಷ್ಣಿ ಶಿರೂರ, ಲೀಲಾ ಶಿವಕುಮಾರ್ ಮತ್ತು ಶೈಲಜೇಶ್ ಇದ್ದರು.
11 ರಿಂದ 15 ವರ್ಷದ ಒಳಗಿನ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಆದ್ಯ ಪ್ರಥಮ. ಎನ್. ಮಾನ್ವಿ ದ್ವಿತೀಯ ಬಹುಮಾನ ಹಾಗೂ ಹೊಯ್ಸಳ ತೃತೀಯ ಬಹುಮಾನ ಪಡೆದರು.
ಹೆಚ್ಚಿನ ಮಾಹಿತಿಗೆ ಕೇಶವ್ ಅವರ ಮೊ. 63615 52588 ಸಂಪರ್ಕಿಸಬಹುದು.