ಕನ್ನಡಪ್ರಭ ವಾರ್ತೆ ಮೈಸೂರು
ಶೋಷಣೆಗೆ ಒಳಗಾದವರು, ಬದುಕಿಗೆ ಮಾರ್ಗಗಳಿಲ್ಲದೆ, ಬೆಳಕೆ ಕಾಣದೆ ಅಸಹಾಯಕತೆಯ ಜೀವನ ನಡೆಸುವಂತಹವರು ಮತ್ತು ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕುತ್ತಿರುವವರು ಸಂವಿಧಾನದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಸಮ ಸಮಾಜದತ್ತ ಸಾಗುವ ಪ್ರಯತ್ನ ಮಾಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ನಗರದ ಕಲಾಮಂದಿರದಲ್ಲಿ ಜೀವಿಕ- ಜೀತ ವಿಮುಕ್ತ ಕರ್ನಾಟ, ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟವು ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶ ಮತ್ತು ಒಕ್ಕೂಟದ ಚುನಾವಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಭಾರತದಲ್ಲಿ ಜೀತ ಪದ್ಧತಿ ವ್ಯವಸ್ಥೆ ಇರಲಿಲ್ಲ. ಚೀನಾ, ರಷ್ಯಾ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಕಂಡು ಬರುತ್ತಿತ್ತು. ಭಾರತದಲ್ಲಿ ತೆಗೆದುಕೊಂಡ ಸಾಲವನ್ನು ತೀರಿಸದೆ ಇದ್ದಾಗ ಜೀವನ ಪರ್ಯಂತ ದುಡಿಯಬೇಕಾಗಿತ್ತು. ಈ ಪದ್ಧತಿ ತಲೆ ತಲೆ ಮಾರಿಗೂ ಪರಿವರ್ತನೆಯಾಗಿ ಬಂದಿತು ಎಂದರು.ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರಕಾರ ಜೀತ ಪದ್ಧತಿ ಎನ್ನುವುದು ಅಸ್ಪೃಶ್ಯತೆ ಮತ್ತು ಜಾತಿಯತೆಯ ಆಚರಣೆಯ ಒಂದು ಭಾಗ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವ ಸಲುವಾಗಿ 1976 ರಲ್ಲಿ ಇಂದಿರಾ ಗಾಂಧಿ ಅವರು ಉಳುವವನೆ ಭೂಮಿಯ ಒಡೆಯ ಹಾಗೂ ಸಾಲ ನಿರ್ಮೂಲನೆ ಅಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡು ಜಾತಿ ಮತ್ತು ಹಣ ಬಲ ಇರತಕ್ಕಂತಹ ಹಾಗೂ ತೋಳ್ಬಲ ಜನರ ಕಪಿಮುಷ್ಟಿಯಲ್ಲಿ ಸಿಲುಕಿ ಇಡೀ ಜೀವನವನ್ನು ಗುಲಾಮಗಿರಿಯಿಂದ ದುರ್ಬಲ ವರ್ಗದ ಜನರನ್ನು ವಿಮೋಚನೆಗೊಳಿಸಿದರು. ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರು ತಂದತಹ ಕಾನೂನುಗಳನ್ನು ಕರ್ನಾಟದಲ್ಲಿ ಯಶಸ್ವಿಯಾಗಿ ಜಾರಿಗೆ ತಂದರು ಎಂದು ಅವರು ಹೇಳಿದರು.
ಬಲವಂತದ ಕೆಲಸಗಳನ್ನು ಮಾಡಲು ಹಾಗೂ ವ್ಯಕ್ತಿಗತವಾದ ಗೌರವಕ್ಕೆ ಧಕ್ಕೆ ತರಲು ಅವಕಾಶವಿಲ್ಲ ಎಂದು ಸಂವಿಧಾನ ಹೇಳುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ 20 ಸಾವಿರ ಜನ ಜೀತಪದ್ಧತಿಯಿಂದ ಮುಕ್ತರಾಗಿದ್ದಾರೆ, ದೇವದಾಸಿ ಪದ್ಧತಿಯಲ್ಲಿ 40 ರಿಂದ 50 ಸಾವಿರ ಜನ, ಸಫಾಯಿ ಕರ್ಮಚಾರಿಗಳು 30 ಸಾವಿರ ಮತ್ತು ಮ್ಯಾನುವಲ್ ಸ್ಕಾವೆಂಜರ್ಸ್ 7000 ಜನ ಇದ್ದಾರೆ. ಇವರಿಗೆ ಶಾಶ್ವತವಾದ ಪರಿಹಾರವನ್ನು ಹಾಗೂ ಪುನರ್ವಸತಿಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಭೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.ಇಂತಹ ಆದ್ಯತಾ ವಲಯಗಳನ್ನು ಗುರುತಿಸಿ ಪರಿಹಾರ ಕೊಡಬೇಕು. ಇವರಿಗೆ ಪುನರ್ವಸತಿ ಕೆಲಸವಾಗಲೇಬೇಕಿದೆ. ಮಾಸಿಕ ನಿರ್ದಿಷ್ಟ ಆದಾಯ ಇಲ್ಲದೆ ಯಾರು ಬದುಕುತ್ತಿಲ್ಲ. ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮೇಲೆ ಯಾರು ಕೂಡ ನಮಗೆ ಆದಾಯ ಇಲ್ಲ ಎಂದು ಹೇಳುವವರು ಒಬ್ಬರೂ ಇಲ್ಲ. ರಾಜ್ಯ ಸರ್ಕಾರದಿಂದ ಬರುತ್ತಿರುವ ಸಹಾಯದಿಂದ ಗೌರವಯುತವಾಗಿ ಹಾಗೂ ಸ್ವಾಭಿಮಾನದಿಂದ ಬದುಕಬಹುದು ಎಂದರು.
ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಮಹದೇವು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಜೀವಿಕ ಸಂಸ್ಥಾಪಕ ಡಾ. ಕಿರಣ್ ಕಮಲ್ ಪ್ರಸಾದ್, ನ್ಯಾಷಿನಲ್ ಲಾ ಕಾಲೇಜಿನ ಪ್ರಾಧ್ಯಾಪಕ ಬಾಬು ಮ್ಯಾಥ್ಯೂ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ಸಂಚಾಲಕರಾದ ಗುರುಪ್ರಸಾದ್ ಕರಗೋಡು, ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಮಾಜಿ ಮೇಯರ್ ಪುರುಷೋತ್ತಮ್, ತುಂಬಲಾ ರಾಮಣ್ಣ, ಹೈರಿಗೆ ಶಿವರಾಜು, ರಾಮಸ್ವಾಮಿ, ಗೋವಿಂದರಾಜು, ಮಲ್ಲಿಗಮ್ಮ, ಜೀವಿಕ ಜಿಲ್ಲಾ ಸಂಚಾಲಕ ಬಸವರಾಜು, ತಾಲೂಕು ಅಧ್ಯಕ್ಷ ಗಣೇಶ್ ಕೆ. ಎಡತೊರೆ, ಕಾರ್ಯದರ್ಶಿ ಮಂಜು ಕೊತ್ತೇಗಾಲ, ಜಿ.ಟಿ. ಸಂಜೀವಮೂರ್ತಿ, ಶೀಡ್ಲಗಟ್ಟ ಶ್ರೀನಿವಾಸ್, ಶಿಡ್ಲಗಟ್ಟ ಸರಸಿಂಹಪ್ಪ ಮೊದಲಾದವರು ಇದ್ದರು.----
ಬಾಕ್ಸ್...ವಿವಿಧ ಬೇಡಿಗಳ ಮನವಿ ಸಲ್ಲಿಕೆ
ಕರ್ನಾಟಕ ಜೀತದಾಳು ಮತ್ತು ಕಾರ್ಮಿಕರ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.1976ರ ಜೀತ ಕಾನೂನು ವಿರೋಧಿಯಾದ ಹಾಗೂ 2017ರ ಕೇಂದ್ರ ಸರ್ಕಾರ ಮತ್ತು 2022ರ ಕರ್ನಾಟಕ ರಾಜ್ಯದ ಎಸ್ಒಪಿಗಳನ್ನು ತಕ್ಷಣವೇ ರದ್ದು ಮಾಡಬೇಕು. ಜೀತ ವಿಮುಕ್ತರಿಗೆ ಸಂಪೂರ್ಣ ಪುನರ್ವಸತಿ ಸೌಲಭ್ಯಗಳನ್ನು ಶೀಘ್ರದಲ್ಲೆ ಒದಗಿಸಬೇಕು.
ಎಸ್ಸಿ, ಎಸ್ಟಿಗಳಿಗೆ ಅನ್ವಯವಾಗುವ ಎಸ್‌ಸಿಪಿ ಕಾನೂನಿನಡಿ ಜೀವಿತದಿಂದ ಬಿಡುಗಡೆಗೊಂಡ 7000 ಮಂದಿ ಜೀತ ವಿಮುಕ್ತರಿಗೆ 500 ಕೋಟಿ ರೂ. ವಿಶೇಷ ಪುನರ್ವಸತಿ ಪ್ಯಾಕೇಜ್ ಮಂಜೂರು ಮಾಡಬೇಕು. ಜೀತ ವಿಮುಕ್ತರಿಗೆ ಕಡ್ಡಾಯವಾಗಿ 5 ಎಕರೆ ಜಮೀನು ಮತ್ತು ನಿವೇಶನ/ ಮನೆಗಳು ಮಂಜೂರು ಮಾಡಬೇಕು. ಜೀತ ಮುಕ್ತ ಮಹಿಳೆಯರ ಸ್ವ-ಸಹಾಯಕ ಸಂಘಗಳಿಗೆ ಮಹಿಳೆಯರಿಗೆ ನೇರವಾಗಿ ಸಾಲ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು, ನಿಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಸಭೆ ನಡೆಸಿ, ನಿಮ್ಮ ಬೇಡಿಕೆಗಳ ಫಲಪ್ರದಾಯಕವಾಗುವಂತೆ ಪ್ರಯತ್ನಿಸುತ್ತೇವೆ. ಸಮುದಾಯಕ ಭವನಕ್ಕೆ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
----ಕೋಟ್...
ವರ್ಣಾಶ್ರಮ ನೀತಿಯಲ್ಲಿ ಬರುವ ಬ್ರಾಹ್ಮಣರು, ಕ್ಷತ್ರೀಯರು ಹಾಗೂ ವೈಶ್ಯರಲ್ಲಿ ಜೀತ ಮಾಡುವವರು ಸಿಗುವುದಿಲ್ಲ. ಹೀಗಾಗಿ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಜೀತ ಪದ್ಧತಿಯ ಒಂದು ಮುಖದ ಪ್ರದರ್ಶನ. ಇದನ್ನು ಉಗ್ರವಾಗಿ ಖಂಡಿಸಬೇಕು.- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು