ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಾಲೂಕಿನಲ್ಲಿ ಯುವ ಕಾಂಗ್ರೆಸ್‌ನ್ನು ಬಲಿಷ್ಠವಾಗಿ ಕಟ್ಟುವುದು ಅಗತ್ಯವಿದ್ದು, ಈ ಸಂಬಂಧ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಹೇಳಿದರು.ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಆದರ್ಶ ಸೈಟ್ ಶ್ಯಾಮಣ್ಣ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿ ಪದಗ್ರಹಣ ಮಾಡಿ ಮಾತನಾಡಿದರು. ಯುವಜನಾಂಗಕ್ಕೆ ಕಾಂಗ್ರೆಸ್‌ನ ತತ್ವ, ಸಿದ್ದಾಂತವನ್ನು ತಿಳಿಸುವ ಮೂಲಕ ಪಕ್ಷದ ಸದಸ್ಯರನ್ನಾಗಿ ಮಾಡಲು ಪ್ರೇರೇಪಿಸಬೇಕೆಂದರು.ಚಿತ್ರದುರ್ಗ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಪಕ್ಷ ಸಂಘಟಿಸುವಲ್ಲಿನ ಉದಾಸೀನ ಹಾಗೂ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಹಿನ್ನೆಡೆಯಾಗಿದೆ. ಜಿಲ್ಲೆಯನ್ನು ಮರಳಿ ಕಾಂಗ್ರೆಸ್ ಭದ್ರ ಕೋಟೆಯನ್ನಾಗಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳ ಮಾಡಬೇಕಿದೆ. ಇದರಲ್ಲಿ ಯುವ ಕಾಂಗ್ರೆಸ್ ಪಾತ್ರ ಪ್ರಧಾನವಾಗಿದ್ದು ಜವಾಬ್ದಾರಿಗಳ ಅರಿತು ಪಕ್ಷ ಸಂಘಟಿಸಬೇಕೆಂದರು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯುವಕರ ಭೇಟಿ ಮಾಡಿ ಅವರಿಗೆ ಕಾಂಗ್ರೆಸ್ ತತ್ವ ಸಿದ್ದಾಂತವನ್ನು ತಿಳಿಸುವುದರ ಮೂಲಕ ಪಕ್ಷದ ಸದಸ್ಯರನ್ನಾಗಿ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರವೂ ಇದೆ. ಬ್ರಿಟಿಷರನ್ನು ದೇಶದಿಂದ ಹೊರದೂಡುವಲ್ಲಿ ಹಾಗೂ ಸ್ವಾತಂತ್ರ್ಯ ನಂತರ ದೇಶವನ್ನು ಮುನ್ನಡೆಸುವಲ್ಲಿ ಕಾಂಗ್ರೆಸ್ ಮಹತ್ತರವಾದ ಪಾತ್ರ ವಹಿಸಿದೆ. ಇದನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು ಗ್ಯಾರಂಟಿ ಯೋಜನೆಗಳ ಮೂಲಕ ಕಡು ಬಡವರಿಗೆ ನೆರವಾಗಿರುವುದ ಹೆಚ್ಚು ಪ್ರಚುರ ಪಡಿಸಬೇಕೆಂದರು. ಜಿಲ್ಲಾ ಪಂಚಾಯಿತಿ ಹಾೂ ತಾಲೂಕು ಪಂಚಾಯಿತಿ ಚುನಾವಣೆಗಳು ಸಮೀಪಿಸಿದ್ದು ಅಧಿಕಾರ ಹಿಡಿಯಬೇಕಿದೆ. ಚುನಾವಣೆಯಲ್ಲಿ ಯುವ ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರನ್ನು ಗೆಲ್ಲಿಸುವ ಜವಾಬ್ದಾರಿ ಹೊರಬೇಕಿದೆ ಎಂದು ಹೇಳಿದರು. ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆದರ್ಶ ಸೈಟ್ ಶ್ಯಾಮಣ್ಣ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಕ್ಕೆ ದ್ರೋಹ ಬಗೆಯಲಾರೆ. ಪಕ್ಷ ತಳಮಟ್ಟದಿಂದ ಸಂಘಟಿಸಿ ಸದೃಢಗೊಳಿಸಲಾಗುವುದು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯುವ ಪಡೆ ರಚಿಸಿ ಕಾಂಗ್ರೆಸ್ ಪಕ್ಷವ ಮುನ್ನೆಡೆಸುವುದಾಗಿ ಹೇಳಿದರು. ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದು ಜನರಿಗೆ ಸರಿಯಾಗಿ ತಲುಪಿದೆಯೇ ಇಲ್ಲವೋ, ಗ್ಯಾರಂಟಿಯಿಂದ ಇನ್ನೂ ಯಾರು ಹೊರಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡಬೇಕೆಂದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ, ಗ್ರಾಮಾಂತರ ಅಧ್ಯಕ್ಷ ಸುನೀಲ್, ವಿಷ್ಣು ಬುರುಜನಹಟ್ಟಿ, ವೇದ, ಸೈಟ್ ಶ್ಯಾಮಣ್ಣ ಇದ್ದರು.