ಜೂ. 15 , 16 ರಂದು ದಕ್ಷಿಣ ಭಾರತ ಉತ್ಸವ-2024

KannadaprabhaNewsNetwork | Published : May 26, 2024 1:30 AM

ಸಾರಾಂಶ

ಐದು ರಾಜ್ಯಕ್ಕೂ ಒಂದೇ ತೆರಿಗೆಗೆ ವಿಧಿಸುವುದು ಈ ಉತ್ಸವದ ಉದ್ದೇಶ

- ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಆಯೋಜನೆ

- ಎಫ್‌.ಕೆ.ಸಿಸಿಐ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಆಯೋಜನೆ

- ಐದು ರಾಜ್ಯಕ್ಕೂ ಒಂದೇ ತೆರಿಗೆಗೆ ವಿಧಿಸುವುದು ಈ ಉತ್ಸವದ ಉದ್ದೇಶ

ಫೋಟೋ- 25ಎಂವೈಎಸ್‌ 32- ಕೆ.ಬಿ. ಲಿಂಗರಾಜು ಮತ್ತು ಸಿ. ನಾರಾಯಣಗೌಡ.

----------

ಕನ್ನಡಪ್ರಭ ವಾರ್ತೆ ಮೈಸೂರು

ಎಫ್‌.ಕೆ.ಸಿಸಿಐ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಜೂ. 15 ಮತ್ತು 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ದಕ್ಷಿಣ ಭಾರತ ಉತ್ಸವ-2024 ಆಯೋಜಿಸಿದೆ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ, ಉತ್ಸವದ ನಿರ್ದೇಶಕ ಕೆ.ಬಿ. ಲಿಂಗರಾಜು ಮತ್ತು ಮೈಸೂರು ಜಿಲ್ಲಾ ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಈ ಐದು ರಾಜ್ಯಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ದಕ್ಷಿಣ ಭಾರತ ಉತ್ಸವ ಆಯೋಜಿಸಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಈ ಮೇಳದ ಸಂಬಂಧ ಒಂದು ಲಾಂಛನ ಬಿಡುಗಡೆಗೊಳಿಸಲಾಯಿತು. ಪ್ರಾವಾಸೋದ್ಯಮ ಈ ಮೇಳಕ್ಕೆ ಹೆಚ್ಚು ಅನುದಾನ ಕೊಡುವುದಾಗಿ ಹೇಳಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಉತ್ಸವ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸದಸ್ಯರು ಮತ್ತು ಹೊಟೇಲ್‌ ಮಾಲೀಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಲಾಂಛನವನ್ನು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಬಿಡುಗಡೆಗೊಳಿಸಿದ್ದಾಗಿ ಹೇಳಿದರು.

ಹಲವು ಜಿಲ್ಲೆಗಳಲ್ಲಿ ರೋಡ್‌ ಶೋ ನಡೆಸಲಾಗಿದೆ. ಕಳೆದ ಹತ್ತು ದಿನಗಳ ಹಿಂದೆ ಮೈಸೂರಿನಲ್ಲಿ ರೋಡ್‌ ಶೋ ನಡೆಸಿ ಜಾಗೃತಿ ಮೂಡಿಸಲಾಯಿತು.

ಐದು ರಾಜ್ಯಕ್ಕೂ ಒಂದೇ ತೆರಿಗೆಗೆ ಒತ್ತಾಯ

ಈ ಮೇಳದ ಉದ್ದೇಶ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ತೆರಿಗೆ ವ್ಯವಸ್ಥೆ ಇದೆ. ಪ್ರವಾಸಿಗರ ಬಸ್‌ ಗಳಿಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಪ್ರವೇಶ ತೆರಿಗೆ ವಿಧಿಸಲಾಗುತ್ತಿದೆ. ಇದು ಐದು ರಾಜ್ಯಗಳಿಗೂ ಸೇರಿದಂತೆ ಏಕರೂಪ ತೆರಿಗೆ ವಿಧಿಸುವಂತೆ ಒತ್ತಾಯಿಸಲಾಗಿದೆ.

ಕರ್ನಾಟಕ ಮತ್ತು ಕೇರಳದಲ್ಲಿ 40 ಸಾವಿರ ಪ್ರವಾಸಿ ತೆರಿಗೆ ಇದೆ. ನಮ್ಮಲ್ಲಿ ಹೆಚ್ಚಿಸಲಾಗಿದೆ ಎಂಬ ಕಾರಣಕ್ಕೆ, ಕೇರಳದಲ್ಲಿಯೂ ಹೆಚ್ಚಿಸಿರುವುದಾಗಿ ಅವರು ಹೇಳಿದರು.

ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಅವಧಿಯಲ್ಲಿ ಪ್ರವೇಶ ತೆರಿಗೆ 3,500 ಇತ್ತು. ನಂತರ ಬಿ.ಎಸ್‌. ಯಡಿಯೂರಪ್ಪ ಅವರ ಅವಧಿಯಲ್ಲಿ 8,500 ರು.ಗೆ ಹೆಚ್ಚಿತು. 2012ರ ಅವಧಿಯಲ್ಲಿ 15 ಸಾವಿರವಾಯಿತು. ನಂತರ ವಿವಿಧ ಹಂತಗಳಲ್ಲಿ ಪ್ರವಾಸೋದ್ಯಮ ಬಸ್‌ ಗಳಿಗೆ 35 ರಿಂದ 40 ಸಾವಿರದವರೆಗೆ ಮಾಡಿದರು. ಟೆಂಪೋ ಟ್ರಾವೆಲರ್ಸ್‌ ಗೆ 15 ಸಾವಿರವಾಯಿತು. ಆದರೆ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕಡಿಮೆ ಇದೆ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ಬೆಳೆದರೆ ಸರ್ಕಾರಕ್ಕೆ ಆದಾಯ ಹೆಚ್ಚುತ್ತದೆ. ಆ ಭಾಗದಲ್ಲಿ ಹೊಟೇಲ್‌ ಉದ್ಯಮ ಬೆಳೆಯುತ್ತದೆ. ಹಲವು ಕಾರ್ಯಚಟುವಟಿಕೆ, ವಾಣಿಜ್ಯ ಚಟುವಟಿಕೆ ನಡೆಯುತ್ತದೆ. ಪ್ರವಾಸಿಗಳ ಆತಿಥ್ಯ ಬಹಳ ಮುಖ್ಯ. ಆ ನಿಟ್ಟಿನಲ್ಲಿ ದಕ್ಷಿಣ ಭಾರತ ಉತ್ಸವವನ್ನು ಸರ್ಕಾರ ಮತ್ತು ಎಫ್‌.ಕೆಸಿಸಿಐ ನೇತೃತ್ವದಲ್ಲಿ ನಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಇದೊಂದು ಬೃಹತ್‌ ಉತ್ಸವವಾಗಿದೆ. ಇದರಲ್ಲಿ ಎಲ್ಲಾ ರಾಜ್ಯದ ಪ್ರತಿನಿಧಿಗಳು, ಸಚಿವರು ಸೇರಿ ಅನೇಕರು ಪಾಲ್ಗೊಳ್ಳುತ್ತಿದ್ದಾರೆ. ಐದು ರಾಜ್ಯಗಳಲ್ಲಿಯೂ ಪ್ರವೇಶ ತೆರಿಗೆ ಒಂದೇ ಆಗಬೇಕು. ಆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಒಂದು ಟಿಕೆಟ್ ಪಡೆದು ಹಲವು ಸ್ಥಳ ನೋಡುವ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಸರ್ಕಾರ ಒಂದೇ ರೀತಿಯ ನಿಮಯ ರೂಪಿಸಬೇಕು. ಮುಂದಿನ 2025ರೊಳಗೆ ಅಂತಿಮ ತೀರ್ಮಾನಕ್ಕೆ ಬರಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಈ ಉತ್ಸವಕ್ಕೆ ಪ್ರವಾಸೋದ್ಯಮ ಇಲಾಖೆ ಸೇರಿದೆ. ಅನುದಾನ ಹೆಚ್ಚಿಗೆ ಕೊಡುವುದಾಗಿ ಸಚಿವ ಎಚ್‌.ಕೆ. ಪಾಟೀಲರು ಹೇಳಿದ್ದಾರೆ. ರಾಜ್ಯಕ್ಕೆ ಹೆಚ್ಚು ಪ್ರವಾಸಿಗರು ಬಂದಷ್ಟು ಹೊಟೇಲ್‌ ಉದ್ಯಮ ಚೆನ್ನಾಗಿ ಬೆಳೆಯುತ್ತದೆ. ಸರ್ಕಾರಿ ಕೆಲಸ ಅಥವಾ ಪ್ರವಾಸಕ್ಕೆ ಬಂದವರೂ ಕೂಡ ಒಂದು ದಿನ ಬಂದು ಹೋಗಲು ಸಾಧ್ಯವಿಲ್ಲ. ಜಿಲ್ಲೆಯ ಸುತ್ತಮುತ್ತ ಸುಮಾರು 205 ಪ್ರವಾಸಿ ಸ್ಥಳಗಳಿವೆ. ಈ ಪೈಕಿ 25 ಪ್ರಮುಖ ಸ್ಥಳಗಳನ್ನು ನೋಡಲು ಒಂದು ವಾರಬೇಕು ಎಂದರು.

ಕಡಿಮೆ ಬೆಲೆಗೆ ಹೊರ ರಾಜ್ಯಕ್ಕೆ ಮಾರ ಬೇಕಾಗುತ್ತದೆ

ಪ್ರವಾಸೋದ್ಯಮವನ್ನು ನಂಬಿಕೊಂಡು ಸಾವಿರಾರು ಮಂದಿ ಇದ್ದಾರೆ. ಹೋಟೆಲ್‌ ಉದ್ಯಮಕ್ಕೆ ಉತ್ತೇಜನ ದೊರಕಿದರೆ ಎಪಿಎಂಸಿಗೆ ಲಾಭ ಬರುತ್ತದೆ. ಎಪಿಎಂಸಿ ಚೆನ್ನಾಗಿ ಲಾಭ ಬಂದರೆ ರೈತರಿಗೆ ಲಾಭ ಸಿಗುತ್ತದೆ. ಇಲ್ಲವಾದರೆ ಕಡಿಮೆ ಬೆಲೆಗೆ ಹೊರ ರಾಜ್ಯಕ್ಕೆ ಮಾರ ಬೇಕಾಗುತ್ತದೆ ಎಂದು ಅವರು ಹೇಳಿದರು.

ರೈತರು ಈ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದ್ದರಿಂದ ರೈತರಿಗೆ ಉಚಿತ ಯೋಜನೆ ನೀಡದಿದ್ದರೂ ಅವರಿಗೆ ಬೇಕಾದ ಅವಕಾಶ ಕಲ್ಪಿಸಿಕೊಡಬೇಕು. ಉದಾಹರಣೆಗೆ ಕೃತಕ ಮಳೆಗೆ ಸರ್ಕಾರ ಮುಂದಾಗಬೇಕು. ಆಗ ಕೆರೆ ಕಟ್ಟೆ ತುಂಬಿ, ಬೋರ್‌ ವೆಲ್‌ ನೀರು ಬರುತ್ತದೆ. ಬೆಳೆ ನಾಶವಾಗುವುದಿಲ್ಲ. ವಿದ್ಯುತ್‌ ಸೌಲಭ್ಯವನ್ನು ಅರ್ಧಂಬರ್ಧ ಕೊಡದೆ ಸಂಪೂರ್ಣವಾಗಿ ನೀಡಬೇಕು. ಏಕೆಂದರೆ ರೈತರ ಜೀವನ ಕಷ್ಟವಿದೆ ಎಂದರು.

ಟೂರಿಸ್ಟ್‌ ಗೈಡ್‌ ಗಳ ಕೊರತೆ ಇಲ್ಲ

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮಾರ್ಗದರ್ಶಕರ ಕೊರತೆ ಇಲ್ಲ. ಎಫ್‌.ಕೆ.ಸಿಸಿಐ ಅಡಿ ಅನೇಕ ಗೈಡ್‌ ಗಳು ಇದ್ದಾರೆ. ಇವರಿಗೆ ಪ್ರವಾಸೋದ್ಯಮ ಇಲಾಖೆ ಮೂಲಕ ತರಬೇತಿ ನೀಡಲಾಗುತ್ತಿದೆ. ಅವರಿಗೆ ಗುರುತಿನ ಚೀಟಿ ಕೂಡ ನೀಡಲಾಗುತ್ತಿದೆ. ಹೀಗೆ ಗುರುತಿನ ಚೀಟಿ ಉಳ್ಳವರ ಸೇವೆಯನ್ನು ಪ್ರವಾಸಿಗರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

---

-- ಬಾಕ್ಸ್ 1--

-- ಒಬ್ಬರಿಗೊಬ್ಬರ ಸಹಕಾರ ಬೇಕು--

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ದಕ್ಷಿಣ ಬಾರತದ ಎಲ್ಲಾ ರಾಜ್ಯ ಸೇರಿಸಿ ಈ ಉತ್ಸವ ಮಾಡಲು ಉದ್ದೇಶಿಸಿದ್ದೇವೆ. ಕರ್ನಾಟಕದಿಂದ ತಮಿಳುನಾಡಿಗೆ ಹೋಗಬೇಕಾದರೆ ತೆರಿಗೆ ಒಂದೇ ಇರಬೇಕು. ಒಂದು ಟಿಕೆಟ್‌ ನಲ್ಲಿ ಎಲ್ಲೆಡೆ ಪ್ರವೇಶ ದೊರೆಯಬೇಕು. ತಮಿಳುನಾಡಿನಿಂದ ಕರ್ನಾಟಕಕ್ಕೆ ಹೆಚ್ಚು ತೆರಿಗೆ ಇರುವುದರಿಂದ ಪ್ರವಾಸಿಗರು ಕಡಿಮೆ. ತೆರಿಗೆ ಕಡಿಮೆ ಮಾಡಿದರೆ ಅನುಕೂಲವಾಗುತ್ತದೆ. ಉತ್ತರ ಪ್ರದೇಶದಿಂದ ಕರ್ನಾಟಕಕ್ಕೆ ಬಂದವರು ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳವನ್ನು ನೋಡಿ ಹೋಗಬೇಕು. ಅಂತಹ ವ್ಯವಸ್ಥೆ ಇರಬೇಕು ಎಂದರು.

ಎಲ್ಲೆಡೆ ರೋಡ್‌ ಶೋ ಮಾಡಿದ್ದೆವೆ. ಕರ್ನಾಟಕದ ಮೈಸೂರು, ತುಮಕೂರು, ಚಿಕ್ಕಮಗಳೂರಿನಲ್ಲಿ ರೋಡ್‌ ಮಾಡಿದ್ದೇವೆ. ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಖಂಡಿತ ಫಲ ಸಿಗುತ್ತದೆ.

-- ಬಾಕ್ಸ್‌ 2--

-- ಒಬ್ಬರಿಗೊಬ್ಬರು ಸಹಭಾಗಿತ್ವ --

ಒಬ್ಬರಿಗೊಬ್ಬರು ಸಹಭಾಗಿತ್ವದಲ್ಲಿ ಈ ಕೆಲಸ ಆಗಬೇಕು. ಆಗ ಪ್ರವಾಸೋದ್ಯಮ ವೆಚ್ಚ ಕಡಿಮೆಯಾಗುತ್ತದೆ. ಎಲ್ಲೆಡೆಗೆ ಒಂದು ಟಿಕೆಟ್‌ ತೆಗೆದುಕೊಂಡು ಹೋಗಬೇಕು. ಮೈಸೂರಿನಲ್ಲಿ ಬರಿ ದಸರಾಕ್ಕೆ ಮಾತ್ರ ಈ ವ್ಯವಸ್ಥೆ ಇದೆ. ಆದರೆ ಇತರೆ ದಿನಗಳಲ್ಲಿ ಇಲ್ಲ. ಈಗ ಬೇಸಿಗೆ ರಜೆ ಇರುವುದರಿಂದ ಹೆಚ್ಚು ಪ್ರವಾಸಿಗರು ಬಂದು ಟಿಕೆಟ್‌ ತೆಗೆದುಕೊಳ್ಳಲು ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ ಏಕರೂಪದ ಟಿಕೆಟ್‌ ಗೆ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರು ಒಪ್ಪಿದ್ದಾರೆ.

ಹೀಗೆ ಮಾಡುವುದರಿಂದ ಡೊಮೆಸ್ಟಿಕ್ ಟೂರ್‌ ಉತ್ತೇಜನ ನೀಡಿದಂತಾಗುತ್ತದೆ.

-- ಬಾಕ್ಸ್‌--- ಬ್ಯಾಂಕಾಕ್‌, ಶ್ರೀಲಂಕಾಗೆ ಹೋಗಬಹುದು--

ಇಲ್ಲಿನ ಪ್ರವೇಶ ತೆರಿಗೆ ದುಡ್ಡಿಗೆ ಬ್ಯಾಂಕಾಕ್‌, ಶ್ರೀಲಂಕಾಗೆ ಹೋಗಬಹುದು ಎಂಬ ಉದ್ದೇಶವಿದೆ. ಇಸ್ರೇಲ್‌ ನಲ್ಲಿ ಒಂದು ಸಣ್ಣ ಪ್ರತಿಮೆ ತೋರಿಸಿ 2 ಸಾವಿರ ವರ್ಷ ಎಂದು ಹೇಳುತ್ತಾರೆ. ಶ್ರೀರಂಗಪಟ್ಟಣದ ಸ್ಮಾರಕವನ್ನು ಅವು ಮೀರಿಸುವುದಿಲ್ಲ. ಕರ್ನಾಟಕ ಟೂರಿಸ್ಟ್‌ ಗೈಡ್‌ ಗಳಿಗೂ, ಮೈಸೂರು ಗೈಡ್‌ ಗಳಿಗೂ ವ್ಯತ್ಯಾಸವಿದೆ. ಅಲ್ಲಿ ಪ್ರವಾಸಿಗರಿಗೆ ಬೇಸರವಾದರೆ ಹಾಡು ಹೇಳುತ್ತಾರೆ, ಡ್ಯಾನ್ಸ್‌ ಮಾಡುತ್ತಾರೆ. ನಾವು ಅದಕ್ಕೆ ಉತ್ತೇಜನ ನೀಡಬೇಕು. ಉದಾಹರಣೆಗೆ ಶೌಚಾಲಯಗಳಲ್ಲಿ ನಿದ್ದೆ ಮಾಡಬಹುದು, ಅಷ್ಟು ವ್ಯವಸ್ಥಿತವಾಗಿದೆ. ಶ್ರೀರಂಗಪಟ್ಟಣ, ಸೋಮನಾಥಪುರ ಮುಂತಾದ ಕಡೆ ಶೌಚಾಲಯವೇ ಇಲ್ಲ ಎಂದರು.

ಶ್ರೀರಂಗಪಟ್ಟಣದಲ್ಲಿನ ಬ್ರಿಟಿಷರ ಕಾಲದ ಗೋರಿ ನೋಡಲು ಬಂದವರು ಶೌಚಾಲಯಕ್ಕೆ ಪಾಳು ಬಿದ್ದ ಜಾಗ ಹುಡುಕಬೇಕು. ಇಂತಹ ಸಮಸ್ಯೆ ಸರಿಪಪಡಿಸಲು ಈ ಉತ್ಸವ ಮಾಡುತ್ತಿದ್ದೇವೆ.

Share this article