- ಕಲಾಧಾರೆ ಕಲ್ಚರಲ್ಲ್ ಟ್ರಸ್ಟ್ ನಿಂದ ವಿವಿಧ ಸ್ಪರ್ಧೆಗಳು
ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಕಲಾಧಾರೆ ಕಲ್ಚರಲ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಚಾಮರಾಜ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಲಾಧಾರೆ ಕಲ್ಚರಲ್ ಟ್ರಸ್ಟ್, ಮಾಸ್ಟರ್ ಎನ್ ಬ್ಲಾಸ್ಟರ್ ಡ್ಯಾನ್ಸ್ ಗ್ರೂಪ್ ವತಿಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ 23ನೇ ವರ್ಷದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದರು.ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮೊದಲಾದವುಗಳಿಗೆ ಹೆಸರಾದ ಮೈಸೂರಿನಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಕಲಾಧಾರೆ ಟ್ರಸ್ಟ್ ಆರಂಭಿಸಲಾಯಿತು. ಎಲ್ಲರ ಸಹಕಾರದಿಂದ ಪ್ರತಿ ವರ್ಷ ಮಕ್ಕಳಿಗೆ ಹತ್ತು ಹಲವು ವೇದಿಕೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಪಾಶ್ಚಿಮಾತ್ಯ ನೃತ್ಯ, ಚಲನಚಿತ್ರಗೀತೆಗಳ ಹಾಡುಗಾರಿಕೆ, ಚಿತ್ರಕಲೆ, ಏಕಪಾತ್ರಾಭಿನಯ, ವೇಷಭೂಷಣ ಸ್ಪರ್ಧೆಗಳು ನಡೆದವು. ವಿಜೇತರಿಗೆ ಪ್ರಮಾಣಪತ್ರ,ಗೌರವ ಪುರಸ್ಕಾರ ನೀಡಲಾಯಿತು.
ಕಲಾಧಾರೆ ಕಲ್ಚರಲ್ ಟ್ರಸ್ಟಿನ ಕಾರ್ಯದರ್ಶಿ ಜ್ಯೋತಿ ಚಾಮರಾಜ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಉಮಾಪತಿ, ನಿರ್ದೇಶಕರಾದ ಬಸಂತಕುಮಾರ್, ಬಾಲಮುರಳಿ, ಎನ್. ಚಂದ್ರಶೇಖರ್, ಶ್ರೀದೇವಿ, ಸಿ. ವಿಜಯಲಕ್ಷ್ಮಿ, ರಾಜೇಶ್ವರಿ, ಸುಷ್ಮಾ, ಗಂಗಾ, ಸಂಘಟನಾ ಕಾರ್ಯದರ್ಶಿ ಸಹನಾ ಇದ್ದರು.