ರಾಮನಗರ: ವಿಪ್ರ ಬಾಂಧವರು ವಿವಿಧ ದೇವರ ಸೇವೆ ಮಾಡುವ ಮೂಲಕ ಸಂಘಟಿತರಾಗಬೇಕು ಎಂದು ವಿಪ್ರ ಯುವ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ಎಸ್.ಬಾಲಸುಬ್ರಮಣ್ಯ ಅಯ್ಯರ್ ಹೇಳಿದರು.
ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, 500 ವರ್ಷಗಳಿಂದಲೂ ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ಈಗ ನನಸಾಗುತ್ತಿದ್ದು ಇನ್ನೂ 22 ದಿನಗಳ ನಂತರ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ರಾಮನ ಪಾದರಕ್ಷ ಮಾಡಿದ ರಾಮನಗರದವರಿಗೆ ಇದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದ್ದು ಹನುಮ ಜಯಂತಿ ಮಾಡುವ ಮೂಲಕ ರಾಮನನ್ನು ಎಲ್ಲರೂ ನೆನೆಸಿಕೊಂಡಿರುವುದು ಸಂತೋಷವಾಗಿದ್ದು 2024 ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.ಹನುಮ ಜಯಂತಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀ ರಾಮ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ರಾಮದೇವರು, ಶ್ರೀ ಶ್ರೀನಿವಾಸ ದೇವರ ಉತ್ಸವಮೂರ್ತಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪಿ.ವೈ.ರವೀಂದ್ರ ಹೇರ್ಳೆ, ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷರಾದ ಸರಸ್ವತಿ ರಾಮಗೋಪಾಲ್, ಕಾರ್ಯದರ್ಶಿ ಶಾಂತಬಾಯಿ, ಶ್ರೀ ಶಂಕರ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಶೇಷಾದ್ರಿ ಅಯ್ಯರ್, ಚಂದ್ರಶೇಖರ್ ಭಟ್ ಹಾಜರಿದ್ದರು.
ರಾಮನಗರದಲ್ಲಿ ವಿಪ್ರ ಯುವ ಸೇವಾ ಟ್ರಸ್ಟ್ ವತಿಯಿಂದ 11ನೇ ವರ್ಷದ ಹನುಮ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.