ಕುಷ್ಟಗಿ: ಬಣಜಿಗ ಸಮಾಜ ರಾಜ್ಯಕ್ಕೆ ಅನೇಕ ಜನ ಮುಖ್ಯಮಂತ್ರಿಗಳನ್ನು ನೀಡಿದ ಬುದ್ಧಿವಂತ ಸಮಾಜವಾಗಿದ್ದು, ನಮ್ಮ ಸಮಾಜದಲ್ಲಿ ಸಂಘಟನೆ ಕೊರತೆ ಕಾಡುತ್ತಿದ್ದು ಪಕ್ಷಾತೀತವಾಗಿ ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಸಂಘಟಿತರಾಗಬೇಕು ಎಂದು ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಶಶಿಧರ ಕವಲಿ ಹೇಳಿದರು.
ಶಿಕ್ಷಣ,ಉದ್ಯೋಗ, ವ್ಯಾಪಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಬಣಜಿಗ ಸಮಾಜ ಮತ್ತಷ್ಟು ಪ್ರಗತಿ ಸಾಧಿಸಲು ಪರಸ್ಪರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಯುವಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು.ಸಮಾಜದ ಪರಂಪರೆ, ಸಂಸ್ಕೃತಿ ಹಾಗೂ ಏಕತೆ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.ಸಮಾಜದ ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ಸಹಾಯ ಸಹಕಾರ ಮಾಡುವ ನಿಟ್ಟಿನಲ್ಲಿ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಎಲ್ಲ ವರ್ಗದ ಜನರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜಶೇಖರ ಹೊಕ್ರಾಣಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಬಣಜಿಗ ಸಮಾಜದಿಂದ ಸಮಾವೇಶದಂತಹ ಕಾರ್ಯಕ್ರಮ ಮಾಡಿರುವದಿಲ್ಲ, ನೂತನ ಅಧ್ಯಕ್ಷರು ಸಂಘಟನೆ ಜತೆಗೆ ಸಮಾಜದ ಸಮಾವೇಶ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿ ತಾಲೂಕು ಬಣಜಿಗ ಸಮಾಜದ ಪ್ರಧಾನ ಕಾರ್ಯದರ್ಶಿ ರವೀಂದ್ರ ಪಾಟೀಲ, ವಿರೇಶ ಕರಡಿ, ರಾಚಪ್ಪ ಮಾಟಲದಿನ್ನಿ, ಈರಣ್ಣ ಕಲಕಬಂಡಿ, ಬಸವರಾಜ್ ಸೂಡಿ ಸೇರಿದಂತೆ ಕೇಸೂರು, ದೋಟಿಹಾಳ, ಹೆಸರೂರು, ಶಿರಗುಂಪಿ ಗ್ರಾಮದ ಬಣಜಿಗ ಸಮಾಜದ ಮುಖಂಡರು ಹಾಗೂ ಯುವಕರು ಇದ್ದರು.