ಶಿವಾನಂದ ಗೊಂಬಿ
ಜಿಲ್ಲಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸದಾನಂದ ಡಂಗನವರ ಹಾಗೂ ಚಂದ್ರಶೇಖರ್ ಜುಟ್ಟಲ್ ಅವರಿಗೆ ಪಕ್ಷ ಸಂಘಟನೆಯೇ ದೊಡ್ಡ ಸವಾಲಾಗಿದೆ.
ಕಾಂಗ್ರೆಸ್ ಎಂದರೆ ಗುಂಪುಗಾರಿಕೆ, ಭಿನ್ನಮತ, ಕಾಲೆಳೆಯುವ ಸಂಸ್ಕೃತಿ ಹಾಸು ಹೊದ್ದಂತಿದೆ. ಧಾರವಾಡ ಜಿಲ್ಲೆಯಲ್ಲಿ ಎರಡು ಸಂಘಟನಾತ್ಮಕ ಜಿಲ್ಲಾ ಸಮಿತಿಗಳಿದ್ದು ಇವುಗಳ ಎದುರು ದೊಡ್ಡ ಸವಾಲಿದೆ. ಮಹಾನನಗರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕಳೆದ 30-35 ವರ್ಷಗಳಿಂದ ಮುಸ್ಲಿಮರೇ ಅಧ್ಯಕ್ಷರನ್ನಾಗಿಸಿದರೆ, ಗ್ರಾಮೀಣ ಜಿಲ್ಲಾಅಧ್ಯಕ್ಷರನ್ನಾಗಿ ಮುಸ್ಲಿಮೇತರರನ್ನು ಅಧ್ಯಕ್ಷರನ್ನಾಗಿಸುವುದು ವಾಡಿಕೆ. ಮಹಾನಗರಕ್ಕೆ ಪ್ರೊ. ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಜಬ್ಬಾರಖಾನ ಹೊನ್ನಾಳಿ ಅಧ್ಯಕ್ಷರಾಗಿದ್ದರೆ ಕಳೆದ ಒಂಬತ್ತು ವರ್ಷದಿಂದ ಅಲ್ತಾಫ್ ಹಳ್ಳೂರ ಅಧ್ಯಕ್ಷರಾಗಿದ್ದರು. ಇದು ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷ ರೂಢಿಸಿಕೊಂಡ ಬಂದಿದ್ದ ಪದ್ಧತಿ.ಈ ಸಲ ಜಿಲ್ಲಾಧ್ಯಕ್ಷರ ನೇಮಕದಲ್ಲಿ ತನ್ನ ತಂತ್ರಗಾರಿಕೆ ಬದಲಿಸಿಕೊಂಡ ಎಐಸಿಸಿಯೂ ಯಾವುದೇ ಶಿಫಾರಸು, ಲಾಬಿ ಇಲ್ಲದೇ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದೆ. ಕೆಪಿಸಿಸಿ ಪಾತ್ರವಿಲ್ಲದೇ ಜಿಲ್ಲಾಧ್ಯಕ್ಷರನ್ನು ನೇಮಿಸಿರುವುದು ಇದೇ ಮೊದಲು. ಹೀಗಾಗಿ ಮಹಾನಗರ ಜಿಲ್ಲೆಗೆ ಪ್ರಬಲ ಲಿಂಗಾಯತ ಸಮುದಾಯದ ಸದಾನಂದ ಡಂಗನವರ ಅವರನ್ನು ಅಧ್ಯಕ್ಷರನ್ನಾಗಿಸಿದೆ.
1994ರಿಂದಲೇ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷ ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡಿದವರು ಡಂಗನವರ, ಮುಂದಿನ ವರ್ಷ ಮಹಾನಗರ ಪಾಲಿಕೆ ಆಡಳಿತ ಮುಕ್ತಾಯಗೊಂಡು ಚುನಾವಣೆ ಎದುರಾಗಲಿದೆ. ಕಳೆದ 20 ವರ್ಷಗಳಿಂದ ಪಾಲಿಕೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಈ ಹಿಂದೆ ಅಧ್ಯಕ್ಷರಿಗೆ ಸಾಧ್ಯವಾಗಿಲ್ಲ. ಅಸಮಾಧಾನಗೊಂಡಿರುವ ಮುಸ್ಲಿಂ ಸಮುದಾಯದ ವಿಶ್ವಾಸ ಗಳಿಸಿಕೊಳ್ಳುವ ಜತೆಗೆ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವನ್ನಾಗಿಸುವ ಜವಾಬ್ದಾರಿ ಡಂಗನವರ ಮೇಲಿದೆ. ಇದು ಅವರಿಗೆ ದೊಡ್ಡ ಸವಾಲೇ ಸರಿ.
ಇನ್ನು ಗ್ರಾಮೀಣ ಜಿಲ್ಲಾ ಘಟಕದಲ್ಲಿ ಗುಂಪುಗಾರಿಕೆ ಸಾಕಷ್ಟಿದೆ. ಜತೆಗೆ ಜಿಪಂ, ತಾಪಂ ಚುನಾವಣೆಗಳು ಹೊಸ್ತಿಲಲ್ಲೇ ಇವೆ. ಅದರ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದಲ್ಲಿನ ಭಿನ್ನಮತ ಇಲ್ಲವಾಗಿಸಿ ಜಿಪಂ, ತಾಪಂಗಳನ್ನು ಕೈವಶ ಮಾಡಿಕೊಳ್ಳಬೇಕಿದೆ. ಆದರೆ ಅಂದುಕೊಂಡಷ್ಟು ಇದು ಸುಲಭವಲ್ಲ. ಏಕೆಂದರೆ ಧಾರವಾಡ ಜಿಲ್ಲೆ ಎಂದರೆ ಬಿಜೆಪಿ ಶಕ್ತಿ ಕೇಂದ್ರ. ಇಲ್ಲಿ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಬೇಕೆಂದರೆ ಬೇರು ಮಟ್ಟದಿಂದ ಪಕ್ಷ ಸಂಘಟಿಸಬೇಕು. ಪಕ್ಷದಲ್ಲಿನ ಗುಂಪುಗಾರಿಕೆ, ಭಿನ್ನಮತ ಕಾಲೆಳೆಯುವ ಸಂಸ್ಕೃತಿಗೆ ಬ್ರೇಕ್ ಹಾಕಬೇಕು. ಈ ಸವಾಲು ಎರಡು ಸಂಘಟನಾ ಜಿಲ್ಲೆಗಳ ಅಧ್ಯಕ್ಷರಿಗೆ ಎದುರಿಗಿದೆ. ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ ಅಷ್ಟೇ!