ಕನ್ನಡಪ್ರಭ ವಾರ್ತೆ ಹಾಸನ
ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಉದ್ದೇಶದಿಂದ ಜಾತಿವಾರು ಜನಗಣತಿ ವರದಿ ಅನುಷ್ಠಾನಕ್ಕೆ ಸರ್ಕಾರ ವಿಳಂಬ ಮಾಡುತ್ತಿದೆ. ಸಿಎಂ-ಡಿಸಿಎಂ ಎಲ್ಲವನ್ನೂ ಪರಿಶೀಲಿಸಿ ಪೂರಕವಾಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಯಾವುದೇ ಸಮಾಜಕ್ಕೂ ಅನ್ಯಾಯ ಮಾಡಲ್ಲ, ಯಾವುದೇ ಸಮುದಾಯವನ್ನು ಹೊಡೆದಾಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯವರು ರಾಜ್ಯ ಸರ್ಕಾರ ಬೀಳಿಸಲು ಹುನ್ನಾರ ಮಾಡಿದ್ದಾರೆ. ನೀವು ಹುಷಾರಾಗಿರಿ ಎಂಬ ಎಐಸಿಸಿ ಅಧ್ಯಕ್ಷರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ವಿಪಕ್ಷಗಳು ಆ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಅವರ ಕೆಲಸವೇ ಅದು, ನಾವು ಜನ ಸೇವೆ ಮಾಡಲು ಅಧಿಕಾರ ಬಯಸುತ್ತೇವೆ, ಆದರೆ ಅವರು ದುರಾಸೆ, ಆದರೂ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದರು. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಯಾವುದೇ ರೀತಿಯಲ್ಲೂ ಒಡಕಿಲ್ಲ ಎಂದರು.
ಸಿಇಟಿ ಪರೀಕ್ಷೆ ಬರೆಯುವಾಗ ಜನಿವಾರ ಬಿಚ್ಚಿಸಿದ ಪ್ರಕರಣವನ್ನು ಖಂಡಿಸಿದ ಸಂಸದರು, ಇದು ನಿಜಕ್ಕೂ ಅಪರಾಧ, ನಡೆಯಬಾರದಿತ್ತು. ಈ ಬಗ್ಗೆ ಪೂರ್ಣ ವಿಚಾರ ತಿಳಿದುಕೊಂಡು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದರು.ಬೇಲೂರಿನಲ್ಲಿ ಪುರಸಭೆ ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರ ಆರೋಪ, ಪ್ರತಿಭಟನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಅದು ಎಲ್ಲ ಕಡೆಯಲ್ಲೂ ಇದ್ದೇ ಇರುತ್ತದೆ. ಬಿ.ಶಿವರಾಂ ಅವರು ಅಧ್ಯಕ್ಷರ ವಿರುದ್ಧ ಆಡಿರುವ ಮತು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ನಮ್ಮೆಲ್ಲ ಸದಸ್ಯರ ಜೊತೆ ಸಭೆ ನಡೆಸಿ ಒಮ್ಮತದ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆ ಸಮಸ್ಯೆ ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆನೆ ಕಾರಿಡಾರ್ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಸಚಿವರಿಗೆ ಎಲ್ಲ ಮನವರಿಕೆ ಮಾಡಿದ್ದೇವೆ. ಅವರಿಂದಲೂ ಪೂರಕ ಸ್ಪಂದನೆ ಸಿಕ್ಕಿದೆ. ಇದಕ್ಕಾಗಿ ಅನುದಾನ ನೀಡುವಂತೆಯೂ ಮನವಿ ಮಾಡಿದ್ದೇವೆ. ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಲು ಜಿಲ್ಲೆಯಲ್ಲಿ ಒಂದೇ ಆನೆ ಶಿಬಿರ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಉಪಟಳ ನೀಡುವ ಆನೆ ಸೆರೆ ಸಂಬಂಧ ಸಚಿವರು ಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಅಂತಹ ಪುಂಡಾನೆಯನ್ನು ಗುರುತು ಮಾಡಿದರೆ ಸೆರೆ ಹಿಡಿಯಲು ಸರ್ಕಾರ ಅನುಮತಿ ಕೊಡಲಿದೆ ಎಂದರು.ಎತ್ತಿನಹೊಳೆ ಯೋಜನೆ ವಿಳಂಬದ ಬಗ್ಗೆ ಶೀಘ್ರವೇ ವೈಮಾನಿಕ ಸಮೀಕ್ಷೆ ನಡೆಯಲಿದೆ. ಎಲ್ಲೆಲ್ಲಿ ಕೆಲಸ ಆಗಿದೆ, ಎಲ್ಲೆಲ್ಲಿ ಅಡೆತಡೆಯಾಗಿದೆ ಎಂಬುದನ್ನು ಪರಿಶೀಲಿಸಿ ಶೀಘ್ರವೇ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಲಾಗುವುದು, ಕೆಲವು ಕಡೆ ಭೂಸ್ವಾಧೀನಕ್ಕೆ ಆಗಿರುವ ತಡೆ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.