ನರಸಿಂಹರಾಜಪುರ, ಕ್ರೀಡೆಯಿಂದ ಮನೋಉಲ್ಲಾಸ, ಆರೋಗ್ಯ ವೃದ್ಧಿಸುತ್ತದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಕೇಂದ್ರೀಯ ಆಡಳಿತ ಮಂಡಳಿ ಅಧ್ಯಕ್ಷ ವಿಜಯರಂಗ ಕೋಟೆ ತೋಟ ತಿಳಿಸಿದರು.
- ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ನೇತೃತ್ವದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಕ್ರೀಡೆಯಿಂದ ಮನೋಉಲ್ಲಾಸ, ಆರೋಗ್ಯ ವೃದ್ಧಿಸುತ್ತದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಕೇಂದ್ರೀಯ ಆಡಳಿತ ಮಂಡಳಿ ಅಧ್ಯಕ್ಷ ವಿಜಯರಂಗ ಕೋಟೆ ತೋಟ ತಿಳಿಸಿದರು.
ಶನಿವಾರ ಕುದುರೆಗುಂಡಿ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ತಾಲೂಕು ಘಟಕ ಮತ್ತು ಯುವ ಬಳಗದ ಸಂಯುಕ್ತ ಆಶ್ರಯದಲ್ಲಿ ಯಡಗೆರೆ ದಿ.ಶ್ರೀಪಾದ ಅವರ ಸ್ಮರಣಾರ್ಥ ನಡೆದ ರಾಜ್ಯಮಟ್ಟದ ಹೆಬ್ಬಾರ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕಳೆದ 4 ವರ್ಷದಿಂದಲೂ ಹೆಬ್ಬಾರ ಯುವ ಬಳಗದವರು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದಾರೆ. ಹಿರಿಯರಾದ ಹೆಬ್ಬಿಗೆ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 11 ಹೆಬ್ಬಾರ ಬ್ರಾಹ್ಮಣ ಘಟಕಗಳಿವೆ. ಇಂದು 12 ಕ್ರಿಕೆಟ್ ತಂಡಗಳು ಭಾಗವಹಿಸಿದೆ. 2 ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು ಸೋಲು ಗೆಲವು ಮುಖ್ಯವಲ್ಲ ಎಂದರು.
ಮುಖ್ಯ ಅತಿಥಿಯಾಗಿದ್ದ ಕೊಪ್ಪ ಯಡಗೆರೆ ಸೌಹಾರ್ದ ಕ್ರಿಡಿಟ್ ಕೋ ಆಪರೇಟೀವ್ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ಮಾತನಾಡಿ, ಕ್ರೀಡೆ,ಧಾರ್ಮಿಕತೆ, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನೂ ಒಗ್ಗೂಡಿಸುತ್ತದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದರಿಂದ ಯುವಜನರಲ್ಲಿ ಪರಸ್ಪರ ಬಾಂಧವ್ಯ ಬೆಳೆಸುತ್ತದೆ. ಕೆಲವು ತಿಂಗಳ ಹಿಂದೆ ನಿಧನರಾದ ಸಮಾಜದ ಯುವ ಮುಖಂಡ ಯಡಗೆರೆ ಶ್ರೀಪಾದ ಅವರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಚೂಣಿಯಲ್ಲಿದ್ದರು ಎಂದು ಸ್ಮರಿಸಿದರು. ಭಾಗವಹಿಸಿದ ಎಲ್ಲಾ ತಂಡಗಳು ಗೆಲ್ಲವುದು ಸಾಧ್ಯವಿಲ್ಲ. ಆದ್ದರಿಂದ ಕ್ರೀಡಾ ಮನೋಭಾವದಿಂದ ಆಟವಾಡಬೇಕು ಎಂದು ಸಲಹೆ ನೀಡಿದರು.ಅತಿಥಿಯಾಗಿದ್ದ ಕೇಂದ್ರ ಸಮಿತಿ ಉಪಾಧ್ಯಕ್ಷ ವೈ.ಎಸ್.ರಾಮಚಂದ್ರ ಮಾತನಾಡಿ, ಕ್ರಿಕೆಟ್ ಪಂದ್ಯಾ ವಳಿಯಲ್ಲಿ ಹಿರಿಯ ಹಾಗೂ ಕಿರಿಯ ವಿಭಾಗ ಎಂದು ವಿಂಗಡಿಸಬಹುದು ಎಂದು ಸಲಹೆ ನೀಡಿದರು.
ಸಭೆ ಅಧ್ಯಕ್ಷತೆವಹಿಸಿದ್ದ ಮಲೆನಾಡ ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ ಮಾತನಾಡಿ, ಕಳೆದ 4 ವರ್ಷದಿಂದಲೂ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆದಿದೆ. ಇತ್ತೀಚೆಗೆ ಶಿವಮೊಗ್ಗ ಹಾಗೂ ಬೀದರ್ ನಲ್ಲಿ ಸಿಇಟಿ ಪರೀಕ್ಷೆಯಲ್ಲಿ ಯುವಕನ ಜನಿವಾರ ತೆಗೆಸಿ ಅವಮಾನ ಮಾಡಲಾಗಿದೆ. ಇದನ್ನು ಬ್ರಾಹ್ಮಣ ಸಮಾಜದಿಂದ ಖಂಡಿಸುತ್ತೇವೆ. ಮಂದಿನ ದಿನಗಳಲ್ಲಿ ಈ ಬಗ್ಗೆ ಪ್ರತಿಭಟನೆ ಹಮ್ಮಿ ಕೊಳ್ಳುತ್ತೇವೆ ಎಂದರು.
ಸಭೆಯಲ್ಲಿ ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಕೆ.ಆರ್.ಶಿವಕುಮಾರ್, ವೈ.ಎಂ.ಮಧು, ಹೆಬ್ಬಾರ ಬ್ರಾಹ್ಮಣ ಸಮಾಜದ ತಾಲೂಕು ಘಟಕದ ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಯುವ ಬಳಗದ ತಾಲೂಕು ಕಾರ್ಯದರ್ಶಿ ಕೆ.ಎಂ.ವಿಕಾಸ್ ಇದ್ದರು. ಇದೇ ಸಂದರ್ಭದಲ್ಲಿ ದಿ.ಶ್ರೀಪಾದ ಅವರಿಗೆ 2 ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎ.ಎಸ್.ವೆಂಕಟರಮಣ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.