ರಾಣಿಬೆನ್ನೂರು: 12ನೇ ಶತಮಾನದ ಅಗ್ರಗಣ್ಯ ಶರಣರಲ್ಲಿ ಒಬ್ಬರಾಗಿದ್ದ ಶರಣ ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣನವರ ಕಟ್ಟಾ ಅನುಯಾಯಿಗಳಾಗಿ ಕಾಯಕ ಸಲ್ಲಿಸುವುದರ ಮೂಲಕ ಹಾಗೂ ಅವರ ಬಲಗೈ ಬಂಟನೆಂದು ಹೆಸರವಾಸಿಯಾಗಿದ್ದರು ಎಂದು ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನಮಠದ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ನುಡಿದರು.

ನಗರದ ಹಳೆ ಪಿ.ಬಿ.ರಸ್ತೆಯ ಸಾಲೇಶ್ವರ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಶ್ರೀ ಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಅಪ್ಪಣನವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು ಎಂಬ ಪ್ರತೀತಿಯಿದೆ. ಸಮಾಜ ಬಾಂಧವರು ಸೇವೆಗೆ ನಿಷ್ಠರಾಗಿ ತಮ್ಮ ಕಾಯಕದಲ್ಲಿ ತೊಡಗಬೇಕು, ಮದ್ಯಪಾನ, ಧೂಮಪಾನ, ಗುಟ್ಕಾದಿಂದ ದೂರವಿದ್ದು, ಉತ್ತಮ ಸಂಸಾರ ಮಾಡಿಕೊಂಡು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಹಡಪದ ಸಮಾಜದವರು ಸಹ ವೀರಶೈವ ಲಿಂಗಾಯತದ ಒಳಪಂಗಡದಲ್ಲಿಯೇ ಬರುತ್ತಾರೆ. ಅವರನ್ನು ಯಾರೂ ಕೀಳಾಗಿ ನೋಡಬಾರದು. ಅವರು ಪ್ರಾಮಾಣಿಕವಾಗಿ ತಮ್ಮ ವೃತ್ತಿಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ ಶಿವಣ್ಣನವರ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜದವರು ಬಡತನದಲ್ಲಿ ಬಂದವರಾಗಿದ್ದರೂ ಈಗಲೂ ಸಹ ನಿಷ್ಠೆಯಿಂದ ಕಾಯಕದಲ್ಲಿ ತೊಡಗಿದ್ದಾರೆ. ಅವರ ಸಮಾಜಕ್ಕೆ ನಗರದಲ್ಲಿ ಒಂದು ನಿವೇಶನ ನೀಡಲು ಕಳೆದ ಎರಡು ವರ್ಷಗಳಿಂದ ಭರವಸೆ ನೀಡಿದ್ದು ಅದನ್ನು ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದರು.


ಸಂಘದ ತಾಲೂಕ ಅಧ್ಯಕ್ಷ ನಾಗರಾಜ ಮೈಲಾರ ಅಧ್ಯಕ್ಷತೆ ವಹಿಸಿದ್ದರು. ಅಣ್ಣಪ್ಪ ಕ್ಷೌರದ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತರನ್ನು, ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಷಣ್ಮುಖಪ್ಪ ಕಾಯಕದ, ನ್ಯಾಯವಾದಿ ಎಂಬಿ ಚಿನ್ನಪ್ಪನವರ, ಶಿವಯೋಗಿ ಹೊಸರಿತ್ತಿ, ನಗರಸಭಾ ಮಾಜಿ ಸದಸ್ಯ ಪ್ರಕಾಶ ಪೂಜಾರ, ಶಶಿಧರ್ ಬಸಾಪುರ, ತಿರಕಪ್ಪ ಹಡಪದ, ನಾಗರಾಜ ಬೆಣ್ಣಿ, ಪ್ರಕಾಶ ಹಡಪದ ಮತ್ತಿತರರು ಇದ್ದರು.

ಇದಕ್ಕೂ ಪೂರ್ವದಲ್ಲಿ ನಗರದ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಯು ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಿ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.