ಯೋಗದ ಮಹತ್ವ ಅರಿತಿದ್ದ ನಮ್ಮ ಪೂರ್ವಜರು: ಜನಾರ್ದನ

KannadaprabhaNewsNetwork |  
Published : Jun 22, 2025, 01:18 AM IST
ಫೋಟೋ ಜೂ.೨೧ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ಯೋಗ ಎಂದರೆ ಆರೋಗ್ಯದಿಂದ ಅಧ್ಯಾತ್ಮದವರೆಗಿನ ವಿಸ್ತಾರವಾದ ವ್ಯಾಪ್ತಿ ಹೊಂದಿದ ವ್ಯವಸ್ಥೆ.

ಯಲ್ಲಾಪುರ: ಯೋಗ ಎಂದರೆ ಆರೋಗ್ಯದಿಂದ ಅಧ್ಯಾತ್ಮದವರೆಗಿನ ವಿಸ್ತಾರವಾದ ವ್ಯಾಪ್ತಿ ಹೊಂದಿದ ವ್ಯವಸ್ಥೆ. ಅದರ ಮಹತ್ವ ಮತ್ತು ಅಗತ್ಯತೆಯನ್ನು ಅರಿತು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಪರಿಚಯಿಸಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಡಿ. ಜನಾರ್ದನ ಹೇಳಿದರು.ಅವರು ಜೂ.೨೧ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಜಿ.ಪಿ. ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಟ್ರಸ್ಟ್, ಸ.ಪ್ರ.ದ. ಕಾಲೇಜು, ಕ್ರಿಯೇಟಿವ್ ಕಂಪ್ಯೂಟರ್ ಅವರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಿದ್ದರು.

ಯೋಗ ಒಂದು ಧರ್ಮಕ್ಕೆ, ಪ್ರದೇಶಕ್ಕೆ, ದೇಶಕ್ಕೆ ಸೀಮಿತವಾದುದಲ್ಲ. ಇದು ವಿಶ್ವಕ್ಕೇ ಉಪಯುಕ್ತವಾದ ಜ್ಞಾನ. ಆಧುನಿಕ ವಿಜ್ಞಾನವೇ ಜ್ಞಾನವಲ್ಲ. ಯೋಗ, ಆಯುರ್ವೇದದಂತಹ ಜ್ಞಾನನಿಧಿಯನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿಮುನಿಗಳು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ವಿಶ್ವ ಮಾನ್ಯತೆ ದೊರಕುತ್ತಿದೆ. ಭಾರತೀಯರಾದ ನಾವು ಅದನ್ನು ನಿರ್ಲಕ್ಷಿಸದೇ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದರು.

ಡಾ.ಜಿ.ಪಿ.ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಟ್ರಸ್ಟ್‌ನ ಡಾ.ಸುಚೇತಾ ಮದ್ಗುಣಿ ''''''''ಯೋಗದ ಶಕ್ತಿ ರೋಗಕ್ಕೆ ಮುಕ್ತಿ'''''''' ವಿಷಯದ ಕುರಿತು ಉಪನ್ಯಾಸ ನೀಡಿ, ಯೋಗ ವಿಶಿಷ್ಟ ಸೂತ್ರಗಳನ್ನು ಹೊಂದಿದ ಶಾಸ್ತ್ರವಾಗಿದೆ. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ನೈತಿಕವಾಗಿ ಆರೋಗ್ಯ ಹೊಂದಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಯೋಗ ಸಹಾಯಕ. ಅಷ್ಟಾಂಗ ಯೋಗ ನಮ್ಮನ್ನು ಅಂತರಂಗ, ಬಹಿರಂಗ ಸಾಧನೆಯೊಂದಿಗೆ ಅಂತರಾತ್ಮವನ್ನು ಪರಮಾತ್ಮನೆಡೆಗೆ ಕೊಂಡೊಯ್ಯಬಲ್ಲದು. ಯೋಗ ದಿನಾಚರಣೆಗೆ ಮಾತ್ರ ಯೋಗ ಸೀಮಿತವಾಗದೇ ನಿತ್ಯವೂ ರೂಢಿಸಿಕೊಂಡು ರೋಗ ಮುಕ್ತರಾಗೋಣ ಎಂದರು.

ಪತಂಜಲಿ ಯೋಗ ಶಿಕ್ಷಕ ಸಂತೋಷ ಗುಡಿಗಾರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ನಾಗರಾಜ ಮದ್ಗುಣಿ ಟ್ರಸ್ಟ್ನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಜನ ಶಿಕ್ಷಣ ಸಂಸ್ಥಾನದ ಹಿರಿಯ ಅಧಿಕಾರಿ ರಮೇಶ ಭಂಡಾರಿ, ಸಂಸ್ಥೆಯ ಕಾರ್ಯಗಳ ಕುರಿತು ವಿವರಿಸಿದರು.

ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಶಶಿಕಾಂತ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕ್ರಿಯೇಟಿವ್ ಕಂಪ್ಯೂಟರ್ ಮುಖ್ಯಸ್ಥ ಶ್ರೀನಿವಾಸ ಮುರ್ಡೇಶ್ವರ, ವಿದ್ಯುತ್ ಗುತ್ತಿಗೆದಾರ ಪ್ರಶಾಂತ ಮಾಹೇಕರ್, ಪತ್ರಕರ್ತ ಶ್ರೀಧರ ಅಣಲಗಾರ ಇದ್ದರು. ನಂದಿತಾ ಭಾಗ್ವತ ಯೋಗದ ಮಹತ್ವದ ಕುರಿತಾದ ಗೀತೆ ಹಾಡಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ರವಿ ಭಟ್ಟ ಸ್ವಾಗತಿಸಿದರು. ಆಶಾ ನಾಯ್ಕ ನಿರ್ವಹಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ರವಿ ಶೇಷಗಿರಿ ವಂದಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ