ಕನ್ನಡಪ್ರಭ ವಾರ್ತೆ ಮೈಸೂರು
ವೈದ್ಯರ ವೃತ್ತಿ ಪವಿತ್ರವಾದದ್ದು, ವೈದ್ಯರು ಪ್ರಾಮಾಣಿಕವಾಗಿ ವೃತ್ತಿ ಸೇವೆ ಮಾಡಿ, ಆಗ ಜನರು ನಿಮ್ಮಲ್ಲಿ ದೇವರನ್ನು ಕಾಣುತ್ತಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಲ್ಲಿ ಸ್ಥಾಪಿರುವ ರಾಜೀವ್ ನಗರ 2ನೇ ಹಂತ ಅಬ್ದುಲ್ ರೆಹಮಾನ್ ರಸ್ತೆಯಲ್ಲಿ ಸ್ಥಾಪಿಸಿರುವ ನಮ್ಮ ಕ್ಲಿನಿಕ್ ಅನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ನಾವು ಏನಾದರೂ ಮಾಡಿದರೆ ಮಾತ್ರ ಜನರ ಕಣ್ಣಿಗೆ ಕಾಣುತ್ತದೆ. ಆದರೆ, ನಿರೀಕ್ಷೆ ಎಂಬುದು ಎಲ್ಲರೂ ಕೂಡ ಕೂತು ಮಾಡುವುದಲ್ಲ, ಪ್ರಯತ್ನ ಪಡಬೇಕು. ಸರ್ಕಾರ ಮಾನದಂಡಗಳೊoದಿಗೆ ಆರೋಗ್ಯ ಕೇಂದ್ರವನ್ನು ಪಿ.ಎಚ್.ಸಿ ಮಾಡಬೇಕಾದರೆ 80 ಸಾವಿರಕ್ಕೆ ಒಂದು ಪಿ.ಎಚ್.ಸಿ ಇರುತ್ತದೆ. ಈ ಹಿಂದೆ 50 ಸಾವಿರ ಜನಸಂಖ್ಯೆಯಲ್ಲಿ ಒಂದು ಪಿ.ಎಚ್.ಸಿ ಇತ್ತು. ಜನಸಂಖ್ಯೆ ಹೆಚ್ಚಳವಾದಂತೆ 80 ಸಾವಿರಕ್ಕೆ ಒಂದು ಪಿ.ಎಚ್.ಸಿ ಮಾಡಲಾಗಿದೆ ಎಂದರು.ಆರೋಗ್ಯ ಕೇಂದ್ರದಲ್ಲಿ ಏನಾದರೂ ಬೆಳವಣಿಗೆ ಮಾಡಬೇಕೆಂಬುದು ನನ್ನ ಆಶಯವಾಗಿತ್ತು. ಅದರಂತೆ ಪ್ರಾಥಮಿಕ ಕೇಂದ್ರವನ್ನು ಪ್ರಾರಂಭ ಮಾಡಿದ್ದಾರೆ. ಜೊತೆಗೆ ಪೊಲೀಸ್ ಸಿಬ್ಬಂದಿ ಇರುವುದರಿಂದ ಅವರದೇ ಆದಂತಹ ವಿಮೆ ಚಿಕಿತ್ಸೆಯನ್ನು ಪಡೆಯುವಂತಹ ಅವಕಾಶವೂ ಇದೆ ಎಂದು ಅವರು ಹೇಳಿದರು.
ಆರೋಗ್ಯ ಕೇಂದ್ರವನ್ನು ಜನಸಂಖ್ಯೆ ಇರುವಂತಹ ಮತ್ತು ಜನ ದಟ್ಟಣೆಯನ್ನು ಹೊಂದಿರುವಂತಹ ಪ್ರದೇಶಗಳಿಗೆ ತರಬೇಕು ಎಂಬುದು ನನ್ನ ಆಸೆಯಾಗಿತ್ತು. ಇಂದು ಈ ಅವಕಾಶ ದೊರೆತಿದೆ. ಆದರೆ, ನನ್ನ ಆಸೆ ಜನ ಇರುವಂತಹ ಮಧ್ಯಪ್ರದೇಶಕ್ಕೆ ಹೋಗುವುದಾಗಿದ್ದು, ಆ ಪ್ರಯತ್ನವೂ ಮಾಡಿದ್ದೇನೆ. ಕೇವಲ ಮಾತಿನಿಂದ ಏನು ಆಗುವುದಿಲ್ಲ ಪ್ರಯತ್ನವೂ ಇರಬೇಕು ಎಂದು ಅವರು ತಿಳಿಸಿದರು.ಇಂದು ನಮಗೆ ವಿಶಾಲವಾದ ಜಾಗ ದೊರೆತಿದೆ. ಇದರಿಂದ ಉಪಯೋಗ ಪಡೆಯುವಂತಹ ಫಲಾನುಭವಿಗಳ ಜೊತೆಗೆ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬಹುದು. ನಮ್ಮ ಕ್ಲಿನಿಕ್ ನಲ್ಲಿ ಆಶಾಕರ್ತೆಯರು, ಪ್ಯಾರಾ ಮೆಡಿಕಲ್ಸ್ ಸಿಬ್ಬಂದಿ ಸೇರಿ 12 ಜನರನ್ನು ನೇಮಿಸಲಾಗಿದೆ. ಅದರಲ್ಲಿ ಒಬ್ಬ ವೈದ್ಯರನ್ನು ನೇಮಿಸಲಾಗಿದೆ. ಸರ್ಜನ್ ಗಳು ವಾರಕ್ಕೊಮ್ಮೆ ಒಂದು ಬಾರಿಯಾದರೂ ಬರುವಂತಹ ಪದ್ಧತಿಗೆ ನಾವು ಎಲ್ಲರೂ ಒಪ್ಪಿಕೊಂಡಿರುವುದರಿಂದ ವೀಕ್ಷಣೆಗೆ ನಮ್ಮ ಕ್ಲಿನಿಕ್ ಗೆ ಸರ್ಜನ್ ಗಳು ಬರುತ್ತಾರೆ ಎಂದರು.
ಜಿಲ್ಲಾ ಆರೋಗ್ಯಾಧಿಕಾ ಡಾ.ಪಿ.ಸಿ. ಕುಮಾರಸ್ವಾಮಿ, ಡಾ. ಸಿರಾಜ್ ಅಹಮ್ಮದ್, ಡಾ. ನಿಶಾಂತ್, ಡಾ. ಮಹಮ್ಮದ್ ಸಾಹೇಬ್, ಕೆಡಿಪಿ ಸದಸ್ಯ ಮಹಮ್ಮದ್ ರಫೀಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಮುನೀಂದ್ರಮ್ಮ, ಪದ್ಮಾವತಿ ಮೊದಲಾದವರು ಇದ್ದರು,