ನಮ್ಮ ನೆಮ್ಮದಿ ಜೀವನ ಸೈನಿಕರ ತ್ಯಾಗದ ಫಲ: ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork | Published : Jul 31, 2024 1:05 AM

ಸಾರಾಂಶ

ನಮ್ಮ ಭಾರತ ದೇಶದ ಭೂಭಾಗದ ಮೂರು ಭಾಗಗಳು ಸಮುದ್ರದಿಂದ ಆವರಿಸಿದ್ದು, ಒಂದು ಭಾಗ ಬೆಟ್ಟ-ಗುಡ್ಡಗಳಿಂದ ಕೂಡಿರುವ ಫಲವಾಗಿ ನಮ್ಮ ನೆರೆ ರಾಷ್ಟ್ರಗಳು ನಿರಂತರ ದಾಳಿ ಮಾಡುತ್ತ ನಮ್ಮ ದೇಶದ ಸಂಪತ್ತು ಲೂಟಿ ಹಾಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿ ದೇವಾಲಯಗಳನ್ನು ದ್ವಂಸ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ .

ಕನ್ನಡಪ್ರಭ ವಾರ್ತೆ ಕನಕಪುರ

ಯೋಧರ ತ್ಯಾಗ, ಬಲಿದಾನವನ್ನು ದೇಶದ ಜನತೆ ಎಂದೂ ಮರೆಯಬಾರದು. ಅವರು ಹಗಲಿರುಳು ದೇಶದ ಗಡಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ ನಾವು ಇಂದು ದೇಶದೊಳಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕಾರ್ಗಿಲ್‌ನಲ್ಲಿ ವೀರಯೋದರ ಹೋರಾಟ ಹಾಗೂ ಬಲಿದಾನದ ಗೆಲುವಿಗೆ 25 ವರ್ಷ ತುಂಬಿದ ಹಿನ್ನೆಲೆ ಪತಂಜಲಿ ಯೋಗ ಸಮಿತಿ ಹಾಗೂ ಯುವ ಬ್ರಿಗೇಡ್ ಕನಕಪುರ ಹಾಗೂ ತಾಲೂಕು ದೇಶಭಕ್ತರು ಮತ್ತು ಸಂಘಟನೆಗಳ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ತ್ರಿವರ್ಣ ಧ್ವಜದ ಭವ್ಯ ರಥಯಾತ್ರೆಗೆ ಸ್ವಾಗತ ಕೋರಿ ಮಾತನಾಡಿದರು.

ನಮ್ಮ ಭಾರತ ದೇಶದ ಭೂಭಾಗದ ಮೂರು ಭಾಗಗಳು ಸಮುದ್ರದಿಂದ ಆವರಿಸಿದ್ದು, ಒಂದು ಭಾಗ ಬೆಟ್ಟ-ಗುಡ್ಡಗಳಿಂದ ಕೂಡಿರುವ ಫಲವಾಗಿ ನಮ್ಮ ನೆರೆ ರಾಷ್ಟ್ರಗಳು ನಿರಂತರ ದಾಳಿ ಮಾಡುತ್ತ ನಮ್ಮ ದೇಶದ ಸಂಪತ್ತು ಲೂಟಿ ಹಾಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿ ದೇವಾಲಯಗಳನ್ನು ದ್ವಂಸ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ವೀರ ಯೋಧರ ಹೋರಾಟದ ಫಲವಾಗಿ ಕಾರ್ಗಿಲ್ ಗೆಲುವು ಸಾಧಿಸಲು ಸಾಧ್ಯವಾಯಿತು ಎಂಬುದನ್ನು ಯುವ ಜನಾಂಗ ಮೊದಲು ಅರಿಯಬೇಕಾಗಿದೆ. ಸಣ್ಣ ಸಣ್ಣ ವಿಷಯಗಳಿಗೆ ಖಿನ್ನತೆಗೆ ಒಳಾಗಾಗುತ್ತಿದ್ದು ದೇಶದ ಗಡಿಯಲ್ಲಿ ನಮಗೋಸ್ಕರ ಹಗಲಿರುಳು ಎನ್ನದೆ ಎಂತದೇ ಪರಿಸ್ಥಿತಿ ಬಂದರೂ ಎದೆಗುಂದದೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ನೋಡಿ ಕಲಿಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ನೆರೆ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಲು ರಾಜಕಾರಣಿಗಳ ಬೇಜವಾಬ್ದಾರಿ, ಉದಾಸೀನತೆಯಿಂದ ಎಂಬುದು ಒಂದು ದೊಡ್ಡ ದುರಂತವೇ ಸರಿ, ಇಂದು ಪಿಒಕೆ ಪ್ರದೇಶ ನಮ್ಮದೇ ಆಗಿದ್ದು ಅಂದಿನ ರಾಜಕಾರಣಿಗಳು ಮಾಡಿದ್ದರಿಂದ ಇಂದಿಗೂ ಸೈನಿಕರು ಹೋರಾಟ ನಡೆಸಬೇಕಾದಂತಹ ಪರಿಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಭಾರತ ದೇಶದ ಗಡಿಭಾಗ ಕಾರ್ಗಿಲ್ ಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ಭಾಗಿಯಾಗಿ ವೀರ ಮರಣ ಹೊಂದಿದ ಸೈನಿಕರ ನೆನಪಿನಲ್ಲಿ ಶುಕ್ರವಾರ ಮಧ್ಯಾಹ್ನ 3,00 ಗಂಟೆಗೆ ನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯಿಂದ ಆರಂಭವಾದ ಮೆರವಣಿಗೆಯು ಮಂಗಳವಾದ್ಯ ಸಮೇತ ವಿವಿಧ ಜಾನಪದ ಕಲಾಮೇಳದೊಂದಿಗೆ, ಎನ್‌ಸಿಸಿ ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳ ಪಥಸಂಚಲನದೊಂದಿಗೆ ತ್ರಿವರ್ಣ ಧ್ವಜ ಹಿಡಿದು ಸಾಗಿದ ಸೈನಿಕರಿಗೆ ನಗರದ ಪ್ರಮುಖ ಬೀದಿ ಬದಿ ಎರಡೂ ಕಡೆ ಜನತೆ ನಿಂತು ಪುಷ್ಟ ನಮನ ಸಲ್ಲಿಸಿದರು, ನಗರದ ಚನ್ನಬಸಪ್ಪ ವೃತ್ತದಲ್ಲಿ ಶಾಲಾ ಮಕ್ಕಳು, ಸೈನಿಕರು, ಪುರಾಣ ಪುರುಷರ ವೇಷವನ್ನು ತೊಟ್ಟು ರಾಷ್ಟ್ರಧ್ವಜಕ್ಕೆ ಭಕ್ತಿಯಿಂದ ಗೌರವ ಸಮರ್ಪಿಸಿದರು.

ಸಂಜೆ 5 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಕನಕಪುರದ ವೀರ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು, ಶಿವಮೊಗ್ಗದ ವಿಕಸನ ತಂಡದಿಂದ ದೇಶ ಭಕ್ತಿಗೀತೆಗಳ ಗಾಯನ ಹಾಗೂ ವಂದೇ ಮಾತರಂ ಗುರುಕುಲದ ಮಕ್ಕಳಿಂದ ಸೈನ್ಯದ ಮಹತ್ವ ಸಾರುವ ನೃತ್ಯ ರೂಪಕ ನಡೆಸಿಕೊಟ್ಟರು,

ತಾಲೂಕಿನ ಯೋಧರಾದ ಮಹದೇವಸ್ವಾಮಿ, ರಾಜಪ್ಪ, ಲಿಂಗರಾಜುರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತಂಜಲಿ ಯೋಗ ಸಮಿತಿಯ ಬಾಲಕೃಷ್ಣ ಆರ್ಯ, ಪುಟ್ಟಸ್ವಾಮಿ, ಯುವ ಬ್ರಿಗೇಡ್ ನ ಸುಮಂತ್ ಸೇರಿದಂತೆ ತಾಲೂಕಿನ ನೂರಾರು ದೇಶಭಕ್ತರು ಭಾಗಿಯಾಗಿದ್ದರು.

Share this article