ಕನ್ನಡಪ್ರಭ ವಾರ್ತೆ ಶೃಂಗೇರಿ
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಕೆರೆಕಟ್ಟೆ ಸೇರಿ, ನೆಮ್ಮಾರ್ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ತುಂಗಾ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.ಶೃಂಗೇರಿ-ಮಂಗಳೂರು ರಸ್ತೆ ನೆಮ್ಮಾರ್ ಬಳಿ ಜಲಾವೃತವಾಗಿದೆ, ಇಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ತುಂಗಾ ನದಿ ತಟದಲ್ಲಿದರುವ ಶ್ರೀ ಶಾರದಾಂಬೆ ದೇಗುಲ ಸೇರಿ ಮಠದ ಸುತ್ತಮುತ್ತ ಪ್ರವಾಹ ಆವರಿಸಿದೆ. ಕಪ್ಪೆ ಶಂಕರ ದೇವಾಲಯ, ಸಂಧ್ಯಾವಂದನೆ ಮಂಟಪ ಮುಳುಗಡೆಯಾಗಿದ್ದು, ಶ್ರೀಮಠದ ಭೋಜನ ಶಾಲೆ ಹಾಗೂ ಸುತ್ತಮುತ್ತಲಿನ ಕಟ್ಟಡಗಳನ್ನು ಮಂಗಳವಾರ ನೀರು ಆವರಿಸಿಕೊಂಡಿದೆ.
ಗಾಂಧಿ ಮೈದಾನ ತುಂಬಾ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ಸಮೀಪದಲ್ಲಿ ಶ್ರೀಮಠಕ್ಕೆ ಸೇರಿರುವ ಯಾತ್ರಿ ನಿವಾಸದಿಂದ ಶ್ರೀ ಶಾರದಾಂಬೆ ದೇಗುಲದ ಪ್ರವೇಶ ದ್ವಾರದ ಸಮೀಪದವರೆಗೆ ನೀರು ಬಂದಿತ್ತು. ಭಾರತೀ ಬೀದಿ, ಕೆವಿಆರ್ ವೃತ್ತವೂ ಕೂಡ ಜಲಾವ್ರತವಾಗಿತ್ತು. ಕುರುಬಗೇರಿ ಪ್ರದೇಶದಲ್ಲಿರುವ 20 ಕುಟುಂಬಗಳನ್ನು ಅಗ್ನಿಶಾಮಕ ದಳದವರು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು.ಧರೆ ಕುಸಿತ: ಕಳೆದ ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ ಸೋಮವಾರ ಸಂಜೆಯಿಂದಲೇ ಆರ್ಭಟಿಸಿದ್ದು, ತಾಲೂಕಿನಾದ್ಯಂತ ಬಿಡುವಿಲ್ಲದೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನಲ್ಲಿ ಬಹಳಷ್ಟು ಸಮಸ್ಯೆ ಎದುರಾಗಿದೆ. ಹಲವೆಡೆ ಧರೆ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಆಗಾಗ ತೊಂದರೆಯಾಗುತ್ತಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಿರು ಸೇತುವೆ ಹಾಗೂ ತೂಗು ಸೇತುವೆ ಮೇಲೆ ಓಡಾಡಲು ಜನ ಭಯಪಡುತ್ತಿದ್ದಾರೆ.ಮರಗಳು ಹಾಗೂ ವಿದ್ಯುತ್ ಕಂಬಗಳು ಬೀಳುತ್ತಿರುವುದು ಮುಂದುವರೆದಿದೆ. ಹಾಗಾಗಿ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಇದರಿಂದ ಹಲವು ದಿನಗಳಿಂದ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ವಿದ್ಯುತ್ ಇಲ್ಲದಿದ್ದರಿಂದ ಸ್ವಿಚ್ ಆಫ್ ಆಗಿವೆ. ಹಲವೆಡೆ ಜನ ಸಂಪರ್ಕಕ್ಕೆ ಸಿಗುತ್ತಿಲ್ಲ.ಎಲ್ಲೆಲ್ಲಿ ರಸ್ತೆಗಳು ಬಂದ್!* ಶೃಂಗೇರಿ- ಮಂಗಳೂರು ರಸ್ತೆ ಸಂಪರ್ಕ
* ಮಾಣಿಬೈಲು-ಕಿಗ್ಗಾ ಸಿರಿಮನೆ ರಸ್ತೆ* ಹೊಳೆ ಹೊದ್ಲು-ನೆಮ್ಮಾರ್ ರಸ್ತೆ
* ಕಪ್ಪೆ ಶಂಕರ ದೇವಾಲಯ ಸಂಧ್ಯಾವಂದನಾ ಮಂಟಪ ಮುಳುಗಡೆ* ಗಾಂಧಿ ಮೈದಾನ, ಕುರುಬಗೇರಿ, ಕೆವಿಆರ್ ವೃತ್ತ ಜಲಾವೃತ
* ಭೋಜನಾ ಶಾಲೆಗೆ ನುಗ್ಗಿದ ನೀರು* ವಿದ್ಯಾರಣ್ಯ ಪುರ ಸಂಪರ್ಕ ಸಂಪೂರ್ಣ ಕಡಿತರು.