ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಬಡ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಸಂಕಲ್ಪವಾಗಿದೆ ಎಂದು ಹಿರಿಯ ನ್ಯಾಯವಾದಿ ಟಿ.ವೈ.ಕಿವಡ ಹೇಳಿದರು.ಅವರು ಪಟ್ಟಣದ ಶ್ರೀ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ವೈ.ಬಿ.ಕಿವಡ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಎನ್.ವೈ.ಕಿವಡ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ಮಾತೃಭಾಷೆ ಕನ್ನಡ ಆಗಿದ್ದರೂ ಮಕ್ಕಳು ಕಲಿಕೆಗಾಗಿ ಯಾವುದೇ ಭಾಷೆಯಲ್ಲಿ ಅಧ್ಯಯನ ಮಾಡಬಹುದು. ಇಂದು ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಚಿಕ್ಕೋಡಿ ನಗರದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಆಂಗ್ಲ ಮಾಧ್ಯಮ ಶಾಲೆ ಸ್ಥಾಪಿಸಲಾಗಿದೆ. ನುರಿತ ಬೋಧಕ ವರ್ಗ ನೇಮಿಸಿ ಕಡಿಮೆ ಶುಲ್ಕದಲ್ಲಿ ಮಕ್ಕಳನ್ನು ದಾಖಲಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆ ಬದ್ಧವಾಗಿದೆ ಎಂದರು.
ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ನಗದು ಬಹುಮಾನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಕಳೆದ ವರ್ಷ ಹೆಚ್ಚು ಅಂಕ ಪಡೆದ ಭೂಷನ ತಾರದಾಳೆ ಅವರಿಗೆ ₹1 ಲಕ್ಷ , ದ್ವಿತೀಯ ಸ್ಥಾನ ಪಡೆದ ವಿಮಲ ಪಟೇಲಗೆ ₹51 ಸಾವಿರ ಮತ್ತು ತೃತೀಯ ಸ್ಥಾನ ಪಡೆದ ಮಹಾಲಿಂಗ ಅವರಿಗೆ ₹25 ಸಾವಿರ ಬಹುಮಾನ ನೀಡಿ ಸತ್ಕರಿಸಲಾಗಿದೆ ಎಂದರು.ಮುಖ್ಯ ಅತಿಥಿ ಡಿಡಿಪಿಐ ಕಚೇರಿ ಪತ್ರಾಂಕಿತ ಸಹಾಯಕ ನಿರ್ದೇಶಕ ಡಿ.ಜೆ.ಮಂಜುನಾಥ ಮಾತನಾಡಿ, ಒಳ್ಳೆಯ ಶಿಕ್ಷಣ ಕೊಡುವುದು ಇಂದಿನ ದಿನಗಳಲ್ಲಿ ಅವಶ್ಯಕ. ಇಂದು ಶಿಕ್ಷಣ ಸಂಸ್ಥೆ ನಡೆಸುವುದು ಲಾಭದಾಯಕ ಹುದ್ದೆಯಾಗಿದೆ. ಗುಣಮಟ್ಟದ ಶಿಕ್ಣಣ ನೀಡುವುದು ವಿರಳವಾಗಿದೆ. ಆದರೆ, ಕಿವಡ ಆಂಗ್ಲ ಮಾಧ್ಯಮ ಶಾಲೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣ ನೀಡುವುದು ಒಳ್ಳೆಯ ಉದ್ದೇಶವಾಗಿದೆ ಎಂದರು.
ಮುಖ್ಯೋಪಾಧ್ಯಾಯ ವಿವೇಕ ಹಳ್ಳೋಳ್ಳಿ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಮೂಲಾಗ್ರ ಬದಲಾವಣೆ ನೀಡುತ್ತದೆ. ಹೀಗಾಗಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಮನೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವುದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದರು.ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಕಮತೆ, ಆಡಳಿತಾಧಿಕಾರಿ ಎಚ್.ಡಿಸೋಜಾ, ಸಂಸ್ಥೆಯ ನಿರ್ದೇಶಕ ಜಯಶ್ರೀ ಕಿವಡ. ಕಲ್ಮೇಶ ಕಿವಡ. ಜಿನ್ನಪ್ಪ ಶೇಡಬಾಳೆ, ರಮೇಶ ಕಾಂಬಳೆ ಇದ್ದರು. ಸಂಸ್ಥೆಯ ಕಾರ್ಯದರ್ಶಿ ಮತ್ತು ನ್ಯಾಯವಾದಿ ನಾಗೇಶ ಕಿವಡ ಸ್ವಾಗತಿಸಿದರು.