ಹೂವಿನಹಡಗಲಿ: ವಿಶ್ವದಲ್ಲೇ ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿರುವ ಸಂವಿಧಾನ ಶ್ರೇಷ್ಠವಾದದ್ದು ಎಂದು ಆಂಗ್ಲ ವಿಷಯ ಶಿಕ್ಷಕ ಲಂಬಾಣಿ ಗಿಡ್ಡಾ ನಾಯ್ಕ ಹೇಳಿದರು.ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ದೇಶಗಳನ್ನು ಸುತ್ತಿ ಜ್ಞಾನ ಸಂಪಾದಿಸಿ ದೇಶದ ದಿಗ್ಗಜರೊಡನೆ ಚರ್ಚಿಸಿ, ಸಂವಿಧಾನ ರಚಿಸಿದ ಹೆಗ್ಗಳಿಕೆ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಸಂವಿಧಾನ ದೇಶದ ವಿವಿಧ ಸಮುದಾಯಗಳನ್ನು ಬೆಸೆಯುವ ಪರಿಕಲ್ಪನೆಯನ್ನು ನಿರಂತರವಾಗಿ ಸಾಕಾರಗೊಳಿಸಲು ಅತ್ಯಗತ್ಯ. ಡಾ.ಬಿ.ಆರ್. ಅಂಬೇಡ್ಕರ್ ಕೃತಿಗಳನ್ನು ಹೆಚ್ಚು ಓದಿರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಾಣಿ ಪೆರಿಯೋಡಿ ಅವರ ಮಕ್ಕಳಿಗಾಗಿ ಸಂವಿಧಾನ, ಪ್ರೊ.ಅಬ್ದುಲ್ ರೆಹಮಾನ್ ಪಾಷ ಅವರ ಸರಳ ಓದಿಗಾಗಿ ಭಾರತ ಸಂವಿಧಾನ ಪುಸ್ತಕಗಳನ್ನು ಪ್ರದರ್ಶಿಸಲಾಯಿತು.ವಿದ್ಯಾರ್ಥಿನಿ ಸೊಪ್ಪಿನ ಪೂರ್ವಿ ಭಾರತ ಸಂವಿಧಾನ ಪ್ರಸ್ತಾವನೆ ಪಠಿಸಿದರು.
ಮುಖ್ಯಗುರು ಸುರೇಶ ಅಂಗಡಿ, ಶಿಕ್ಷಕರಾದ ದ್ವಾರಕೀಶ್ ರೆಡ್ಡಿ, ಸ್ವಾಮಿನಾಥ ರಾಮಸ್ವಾಮಿ, ಬಸಪ್ಪ ಕೆ., ಪ್ರತಿಮಾ ಎನ್., ಗೀತಾ ಪಿ.ಎಂ., ರೇಖಾ ಎಸ್., ಸಂಗಮೇಶ ಸುಂಕದ, ಪ್ರಸಾದ್ ಸಂತೋಷಕುಮಾರ್, ಬಿಇಡಿ ಪ್ರಶಿಕ್ಷಣ ವಿದ್ಯಾರ್ಥಿಗಳಾದ ಪೂರ್ಣಿಮಾ ಎ.ಎಸ್., ರೂಪಾ, ವರಲಕ್ಷ್ಮಿ, ಜಿ.ವೀರೇಶ್, ಪ್ರದೀಪ್, ಪ್ರವೀಣ್, ಅನುಷಾ ಇತರರು ಉಪಸ್ಥಿತರಿದ್ದರು.