ಬಳ್ಳಾರಿ: ಹತ್ತಾರು ಸವಾಲುಗಳ ನಡುವೆ ಭಾರತ ಬಲಿಷ್ಠ ರಾಷ್ಟ್ರವಾಗಿ ರೂಪಗೊಂಡಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಕಂಡುಕೊಂಡಿದೆ. ಕೈಗಾರಿಕೆ, ಕೃಷಿ, ಸಾಕ್ಷರತೆ, ತಂತ್ರಜ್ಞಾನ, ಆರೋಗ್ಯ, ಬಾಹ್ಯಾಕಾಶ ವಿಜ್ಞಾನ, ಅಣು ವಿಜ್ಞಾನ ಕ್ಷೇತ್ರಗಳಲ್ಲೂ ವಿಶ್ವದ ಗಮನ ಸೆಳೆಯುವಂತಹ ಪ್ರಗತಿ ಸಾಧಿಸಿದೆ ಎಂದು ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಬಿಎಂಸಿಆರ್‌ಸಿ ಮೈದಾನದಲ್ಲಿ ಶುಕ್ರವಾರ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣಾ ನೆರವೇರಿಸಿ ಅವರು ಮಾತನಾಡಿದರು. ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆಗಳು ಸಂವಿಧಾನ ನಮಗೆ ನೀಡಿರುವ ಕೊಡುಗೆಯಾಗಿವೆ. ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ದೇಶಕ್ಕಾಗಿ ವೀರಮರಣ ಹೊಂದಿದ ಹೋರಾಟಗಾರರು, ವೀರಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ದಾಸ್ಯ, ಮೌಢ್ಯ, ಕಂದಾಚಾರವನ್ನು, ಅಳಿಸಿ ಹಾಕಿ ಆಧುನಿಕ ಭಾರತ, ವೈಜ್ಞಾನಿಕ ಭಾರತ, ಸಮೃದ್ಧ ಭಾರತವನ್ನು ಕಟ್ಟಬೇಕಾಗಿದೆ ಎಂದು ಕರೆ ನೀಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆ ಕೊಡುಗೆ ಮಹತ್ವದ್ದಾಗಿದೆ. ಜಾತಿ, ಧರ್ಮ ಬಿಟ್ಟು ದೇಶಕ್ಕಾಗಿ ಈ ಜಿಲ್ಲೆಯ ನೂರಾರು ಜನರು ಸಮರ್ಪಣಾ ಮನೋಭಾವದಿಂದ ಶ್ರಮಿಸಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಬಳ್ಳಾರಿಗೆ ಎರಡು ಬಾರಿ ಭೇಟಿ ನೀಡುವ ಮೂಲಕ ಈ ಜಿಲ್ಲೆಯ ಹೋರಾಟಗಾರರಿಗೆ ಹುರಿದುಂಬಿಸಿದ್ದಾರೆ. ಇಂತಹ ಮಹತ್ವದ ಹಿನ್ನೆಲೆಯಲ್ಲಿರುವ ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಮುಂದಡಿ ಇಡುತ್ತಿದೆ. ರಾಜ್ಯ ಸರ್ಕಾರ ಈ ಜಿಲ್ಲೆಯ ಪ್ರಗತಿಗಾಗಿ ಬೇಕಾದ ನೆರವನ್ನು ನೀಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಬಳಿಕ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವ ನಿಮಿತ್ತ ಸಾಮೂಹಿಕ ನೃತ್ಯ, ದೇಶ ಭಕ್ತಿಗೀತೆ, ಗಾಯನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಂಸದ ಈ. ತುಕಾರಾಮ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ. ಸುಕುಂ, ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯುಲು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಐಜಿಪಿ ವರ್ತಿಕ ಕಟಿಯಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಡಾ. ಶೋಭಾರಾಣಿ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ, ಎಡಿಸಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪಿ. ಪ್ರಮೋದ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನೊಳಗೊಂಡ 31 ತುಕಡಿಗಳಿಂದ ಶಿಸ್ತುಬದ್ಧ ಆಕರ್ಷಕ ಪಥಸಂಚಲನ ನಡೆಯಿತು.