ನಮ್ಮ ಸಂಸ್ಕೃತಿ ಬೃಂದಾವನ, ಸೂಟ್ಕೇಸ್‌ ಅಲ್ಲ: ಎಚ್ಡಿಕೆ

KannadaprabhaNewsNetwork |  
Published : Aug 24, 2026, 01:15 AM IST
23ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಅಕ್ಕೂರು ಗ್ರಾಮದ ಸುಮಿತ್ರಮ್ಮ ರಂಗಸ್ವಾಮಿ ಅವರ ಮನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ರಾಮನಗರ: ನಾವು ಕೈಮುಗಿಯುವುದು ಸಂಸ್ಕೃತಿಯ ಪ್ರತೀಕ, ಪೂಜನೀಯ ಬೃಂದಾವನಕ್ಕೆ. ಆದರೆ, ಕಾಂಗ್ರೆಸ್ ನಾಯಕರದ್ದು ಸೂಟ್‌ಕೇಸ್ ಸಂಸ್ಕೃತಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಬಾಲಕೃಷ್ಣ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು

ರಾಮನಗರ: ನಾವು ಕೈಮುಗಿಯುವುದು ಸಂಸ್ಕೃತಿಯ ಪ್ರತೀಕ, ಪೂಜನೀಯ ಬೃಂದಾವನಕ್ಕೆ. ಆದರೆ, ಕಾಂಗ್ರೆಸ್ ನಾಯಕರದ್ದು ಸೂಟ್‌ಕೇಸ್ ಸಂಸ್ಕೃತಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಬಾಲಕೃಷ್ಣ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಮಹಾ ನಾಯಕರು, ಅಭಿವೃದ್ಧಿಯ ಹರಿಕಾರರು ನಮ್ಮ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾವು ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅಂದಿದ್ದಾರೆ. ಹೌದು, ನಾವು ಪೂಜಿಸುವುದು ಸಂಸ್ಕೃತಿಯ ಪ್ರತೀಕವಾದ ಬೃಂದಾವನವನ್ನು. ಆದರೆ ಅವರದ್ದು ಸೂಟ್‌ಕೇಸ್ ಬೃಂದಾವನ. ಎಲ್ಲಿ ಭೂಮಿ ಸಿಗುತ್ತದೆಯೋ ಅಲ್ಲೆಲ್ಲ ಲಪಟಾಯಿಸಿ ಬೃಂದಾವನ ಕಟ್ಟುವುದು ಅವರ ಸಂಸ್ಕೃತಿ ಎಂದು ಲೇವಡಿ ಮಾಡಿದರು.

ನೈಸ್ ರಸ್ತೆಗಾಗಿ 20 ವರ್ಷದಿಂದ ರೈತರ ಭೂಮಿ ವಶಕ್ಕೆ ಪಡೆದು ಇನ್ನೂ ಪರಿಹಾರದ ದುಡ್ಡು ಕೊಟ್ಟಿಲ್ಲ. ಅವರು ಟೇಪ್ ಹಿಡಿದುಕೊಂಡು ಅಳತೆ ಮಾಡಿ ಭೂಮಿ ಲಪಟಾಯಿಸಿ ದೋಖಾ ಮಾಡುವವರು. ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿಕೊಂಡು 20 ವರ್ಷದಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಹಗರಣ. ಆ ರಸ್ತೆ ರಾಷ್ಟ್ರೀಯ ಹೆದ್ದಾರಿ ಅಲ್ಲ, ರಾಜ್ಯ ಸರ್ಕಾರಕ್ಕೆ ಸೇರಿದ್ದು. ಅಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದೇ ಅಕ್ರಮ. ಸರ್ಕಾರ ಕೂಡಲೇ ಟೋಲ್ ಸಂಗ್ರಹಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.

ನೈಸ್ ಹಗರಣದ ವಿರುದ್ಧ ಇಡೀ ರಾಜ್ಯದ ಜನರು ಎದ್ದು ನಿಲ್ಲಬೇಕು:

ನೈಸ್ ವಿರುದ್ಧ ನಾನು ಕೇವಲ ಜೆಡಿಎಸ್ ಕಾರ್ಯಕರ್ತರನ್ನು ಎತ್ತಿಕಟ್ಟುತ್ತಿಲ್ಲ, ಇಡೀ ರಾಜ್ಯದ ಜನರೇ ಎದ್ದು ನಿಲ್ಲಬೇಕಾಗಿದೆ. ಅಂತಹ ದೊಡ್ಡ ಹಗರಣ ನಡೆದಿದೆ. ಜನ ನಮ್ಮನ್ನು ಆಯ್ಕೆ ಮಾಡಿರುವುದು ಈ ದುರಾಡಳಿತವನ್ನು ಪ್ರಶ್ನೆ ಮಾಡಲು. ರೈತರ ಭೂಮಿಯನ್ನು ಲಪಟಾಯಿಸುವ ಕೆಲಸ ನಡೆದರೆ ಅದರ ಬಗ್ಗೆ ದನಿ ಎತ್ತಲು ಜನರು ನಮಗೆ ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿದರು.

ನೈಸ್ ರಸ್ತೆಗಾಗಿ 20 ವರ್ಷಗಳಿಂದ ಭೂಮಿ ನೀಡಿದ ರೈತರಿಗೆ ಪರಿಹಾರದ ಹಣ ನೀಡಿಲ್ಲ. 4 ಸಾವಿರ ಕುಟುಂಬಗಳಿಗೆ ನಿವೇಶನ ನೀಡುವುದಾಗಿ ಹೇಳಿ ಕೊಡಲಿಲ್ಲ. ಇದೆಲ್ಲವನ್ನು ನೋಡಿಯೇ ನಾನು ಧ್ವನಿ ಎತ್ತಿದ್ದೇನೆ, ಅಭಿವೃದ್ಧಿಗೆ ಅಡ್ಡಿಪಡಿಸಬೇಕು ಎಂದು ಅಲ್ಲ ಎಂದು ತಿಳಿಸಿದರು.

ರೈತರು ಇನ್ನೂ ಎಷ್ಟು ವರ್ಷ ಕಾಯಬೇಕು. ನೈಸ್ ರಸ್ತೆ ನಿರ್ಮಿಸಲು ಇನ್ನೆಷ್ಟು ವರ್ಷ ಬೇಕು. ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ನಿರ್ಮಾಣವಾಗಿದೆ. ಹಿಂದೆ ಮಾಯಗಾನಹಳ್ಳಿ ಬಳಿ ಶಾಲಾ ಬಸ್ ಅಪಘಾತದಲ್ಲಿ 8 ಮಕ್ಕಳು ಮೃತಪಟ್ಟಾಗ, ಬೆಂಗಳೂರು-ಮೈಸೂರು ನಡುವೆ ಉತ್ತಮ ರಸ್ತೆ ನಿರ್ಮಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ತೀರ್ಮಾನಿಸಿದ್ದರು. ಜನರಿಗೆ ಒಳ್ಳೆಯದು ಮಾಡಬೇಕು ಎಂದು ನಾವು ಕೆಲಸ ಮಾಡಿದವರು. 20 ವರ್ಷದಿಂದ ರೈತರಿಗೆ ಪರಿಹಾರ ಕೊಡಬೇಡಿ ಎಂದು ದೇವೇಗೌಡರು ಹೇಳಿದ್ದರೇ? ಇವರು ಮಾಡುತ್ತಿರುವ ಅಕ್ರಮದ ವಿರುದ್ಧ ಧ್ವನಿ ಎತ್ತಲು ಜನರು ನಮಗೆ ಶಕ್ತಿ ನೀಡಿದ್ದಾರೆ ಎಂದು ಹೇಳಿದರು.

ನನ್ನ ಕಾಲು ಹಿಡಿದಿದ್ದವನು ನನಗೆ ಪಾಠ ಮಾಡುತ್ತಾನಾ?:

ಪೌರಾಡಳಿತ ಸಚಿವ ಬಾಲಕೃಷ್ಣ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಪಾಪ.. ಈಗಿನ ಇಲ್ಲಿಯ ಶಾಸಕ ಹಿಂದೆ ನನ್ನ ಜೊತೆಯಲ್ಲೇ ಇದ್ದ. ಆ ಸಮಯದಲ್ಲಿ ಗುತ್ತಿಗೆದಾರರೊಬ್ಬರು 600 ಕೋಟಿ ಕೆಲಸ ಮಾಡಿ ಹಣ ಸಿಗದೇ ಇದ್ದಾಗ, ಅಯ್ಯಯ್ಯೋ ಅಣ್ಣ.. ಆ ವಿಷಯ ಎತ್ತಬೇಡಣ್ಣ ಎಂದು ಕಾಲು ಹಿಡಿದುಕೊಳ್ಳಲು ಬಂದಿದ್ದ. ಅದನ್ನು ಅವರು ನೆನಪಿಸಿಕೊಳ್ಳಬೇಕು. ಇವನಿಂದ ನಾನು ಕಲಿಯಬೇಕಾ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಪಾಪದ ಕೊಳೆಯನ್ನು ನಾವು ತೊಳೆಯುತ್ತಿದ್ದೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೊಳೆ ನಾ? ಎಲ್ಲಿದೆ ಕೊಳೆ? ನಾವು ರಾಮನಗರಕ್ಕೆ ಬಂದಾಗ ಕನಕಪುರ ಹೇಗಿತ್ತು? ಕನಕಪುರದಲ್ಲಿ ಬೀದಿ ದೀಪದ ಕಂಬ ಕೂಡ ಇರಲಿಲ್ಲ. ದೇವೇಗೌಡರು ಕನಕಪುರಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವಾಗ ಇವರು ಎಲ್ಲಿದ್ದರು? ಕೊತ್ವಾಲನಿಗೆ ಹೆಂಡ ಕೊಡಲು ಬಾರ್‌ನಲ್ಲಿ ಕೂತಿದ್ದರು ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಹೋಟೆಲ್ ಉಮೇಶ್, ಶಿವುಗೌಡ, ರಾಜಶೇಖರ್ ಮತ್ತಿತರರು ಹಾಜರಿದ್ದರು.

23ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಅಕ್ಕೂರು ಗ್ರಾಮದ ಸುಮಿತ್ರಮ್ಮ ರಂಗಸ್ವಾಮಿ ಅವರ ಮನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಬುರಗಿಯಲ್ಲಿ ಉದ್ಯಮಿ ಪಾಟೀಲ್‌ ಪುಣ್ಯಸ್ಮರಣೆ
224 ಕ್ಷೇತ್ರಗಳ ಅಂತರ್ಜಲ ಹೆಚ್ಚಳಕ್ಕೆ ಯೋಜನೆ: ಡಾ.ಅಜಯ್‌ ಧರಂಸಿಂಗ್‌