ದಾವಣಗೆರೆ: ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳು ಪ್ರಪಂಚದಲ್ಲೇ ಶ್ರೇಷ್ಠವಾಗಿದ್ದು, ನಮ್ಮ ರಾಜ್ಯದ ಸಂಸ್ಕೃತಿಯಂತೂ ಪರಮ ಶ್ರೇಷ್ಠವಾಗಿದೆ, ಇದನ್ನು ಶಾಲಾ ಶಿಕ್ಷಣದಲ್ಲಿ ಪೂರ್ತಿಯಾಗಿ ಕೊಡಲು ಸಾಧ್ಯವಿಲ್ಲ, ಮನೆಯಲ್ಲಿ ಪೋಷಕರೇ ಮಕ್ಕಳಿಗೆ ಕೊಡಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಹೇಳಿದರು. ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜೆಎಂ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭುವನೇಶ್ವರಿ ಹಾಗೂ ನೆಹರೂ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಕನ್ನಡದ ನೆಲದಲ್ಲಿ ವಾಸವಾಗಿದ್ದು, ಕನ್ನಡದ ಅನ್ನಾಹಾರಗಳನ್ನು ಸೇವಿಸುವ ಎಲ್ಲರೂ ಕರ್ನಾಟಕದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲೇಬೇಕು. ಕನ್ನಡ ಭಾಷೆಯನ್ನು ಬಳಸಲೇಬೇಕು. ಅನ್ಯ ಭಾಷೆಗಳನ್ನು ದ್ವೇಷಿಸಬಾರದು. ಆದರೆ ಕನ್ನಡವನ್ನು ಅಲಕ್ಷಿಸಬಾರದು ಎಂದರು. ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ಮನೆಯಲ್ಲಿ ತಾಯಂದಿರು ತಮ್ಮ ಬಿಡುವಿನ ವೇಳೆಯಲ್ಲಿ ಟಿವಿಯಲ್ಲಿ ಬರುವ ಧಾರಾವಾಹಿ ಮುಂತಾದವುಗಳನ್ನು ಮಿತವಾಗಿ ನೋಡುತ್ತಾ ಉಳಿದ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಕುರಿತಾಗಿ ಹೇಳುತ್ತಿರಬೇಕು ಎಂದು ಹೇಳಿದರು.
ಅಧ್ಯಾಪಕಿ ಗೀತಾಂಜಲಿ ಸ್ವಾಗತಿಸಿದರೆ, ಅರ್ಪಿತಾ, ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಆಶಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನಾಚರಣೆ ಕುರಿತು ಶಾಲಾ ಮಕ್ಕಳು ಮಾತನಾಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.