ನಮ್ಮ ದೇಸಿ ಕಲೆಗಳು ಪೂರ್ವಜರ ಬೆವರಿನ ಫಲ: ಡಾ. ಮೋಹನ ಆಳ್ವ

KannadaprabhaNewsNetwork |  
Published : Feb 21, 2026, 02:30 AM IST
ಫೋಟೋ : ೨೦ಕೆಎಂಟಿ_ಎಫ್‌ಇಬಿ_ಕೆಪಿ೨ : ಪುರಸಭೆ ಮೈದಾನದಲ್ಲಿ ಆಳ್ವಾಸ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಡಾ. ಮೋಹನ ಆಳ್ವಾ, ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ, ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ರಾಜಗೋಪಾಲ ಅಡಿ, ಸುಷ್ಮಾ ರೆಡ್ಡಿ, ಭುವನ ಭಾಗ್ವತ, ಸಿ.ಜಿ.ಹೆಗಡೆ ಇತರರು ಇದ್ದರು.  | Kannada Prabha

ಸಾರಾಂಶ

ಕುಮಟಾ ಪಟ್ಟಣದ ಚಿತ್ರಗಿಯ ಹಳಕಾರ ಕ್ರಾಸ್ ಬಳಿಯ ಪುರಸಭೆಯ ಮೈದಾನದಲ್ಲಿ ಗುರುವಾರ ರಾತ್ರಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.

ಕುಮಟಾ: ನಮ್ಮ ಕಲೆಗಳು ಪೂರ್ವಜರ ಬೆವರಿನ ಫಲವಾಗಿದ್ದು, ಇಂಥ ಸಾಂಸ್ಕೃತಿಕ ಸಂಪತ್ತು ಬೇರೆ ಯಾವುದೇ ದೇಶದಲ್ಲಿ ಇಲ್ಲ ಎಂದು ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.

ಪಟ್ಟಣದ ಚಿತ್ರಗಿಯ ಹಳಕಾರ ಕ್ರಾಸ್ ಬಳಿಯ ಪುರಸಭೆಯ ಮೈದಾನದಲ್ಲಿ ಗುರುವಾರ ರಾತ್ರಿ ಆಳ್ವಾಸ್‌ ಸಾಂಸ್ಕೃತಿಕ ವೈಭವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ದೇಶದ ಶಾಸ್ತ್ರೀಯ ಕಲೆಗಳು ಗುರು-ಶಿಷ್ಯ ಸಂಸ್ಕೃತಿಯಲ್ಲಿ, ರಾಜಮಹಾರಾಜರ ಆಡಳಿತದಲ್ಲಿ ಉಳಿದು ಬೆಳೆದು ಬಂದಿದೆ. ಇಂದಿನ ರಾಜಕಾರಣದ ಪ್ರಭುತ್ವದಲ್ಲಿ ಸರ್ಕಾರಗಳಿಂದ ಹೆಚ್ಚಿನ ನಿರೀಕ್ಷೆ ಅಸಾಧ್ಯ. ಕಲಾ ಪೋಷಣೆ-ಪಾಲನೆಗೆ ಖಾಸಗಿಯವರ ಮುಂಚೂಣಿ ಚಿಂತನೆಯ ಅಗತ್ಯವಿದೆ. ಕಲೆಗಳ ಸೌಂದರ್ಯಪ್ರಜ್ಞೆ ಇಲ್ಲದವರು ಎಲ್ಲೆಡೆ ಅಪಾಯಕಾರಿ. ಪಠ್ಯ ಶಿಕ್ಷಣದ ಜತೆಗೆ ನಮ್ಮ ಶಾಸ್ತ್ರೀಯ ಹಾಗೂ ಜಾನಪದ ಕಲೆಗಳ ಸೌದರ್ಯ ಪ್ರಜ್ಞೆಯನ್ನೂ ಬೆಳೆಸಬೇಕೆಂಬ ಉದ್ದೇಶದಿಂದ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯೋನ್ಮುಖವಾಗಿದೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಸಾಂಸ್ಕೃತಿಕವಾಗಿ ಸಿರಿವಂತ ಜಿಲ್ಲೆ. ಇಲ್ಲಿನ ಹಾಲಕ್ಕಿಗಳ ಸುಗ್ಗಿ ಕುಣಿತವು ರಾಜಧಾನಿ ದೆಹಲಿಯ ಅಂಗಳದಲ್ಲೂ ಮೆರೆದಿದೆ. ಯಕ್ಷಗಾನಕ್ಕಂತೂ ನಮ್ಮ ಜಿಲ್ಲೆ ವಿಶೇಷ ಪ್ರಸಿದ್ಧಿ ಹೊಂದಿದೆ. ನಮ್ಮ ಜಾನಪದ ಹಾಗೂ ಶಾಸ್ತ್ರೀಯ ಕಲೆಗಳ ಸಾರ್ವಜನಿಕ ಪ್ರಸ್ತುತಿ ಹೆಚ್ಚಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯ ಅಪ್ರತಿಮ. ಸರ್ಕಾರದಿಂದ ಕಲಾವಿದರಿಗೆ ಪ್ರೋತ್ಸಾಹ ಹಾಗೂ ಪಿಂಚಣಿ ಹೆಚ್ಚಬೇಕು ಎಂದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಗೋಪಾಲ ಅಡಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ನಮ್ಮ ಸಾಂಸ್ಕೃತಿಕ ವೈವಿಧ್ಯತೆಯ ತರಬೇತಿ ಕೊಟ್ಟು ನಾಡಿನುದ್ದಕ್ಕೂ ಪಸರಿಸುತ್ತಿರುವ ಆಳ್ವಾಸ್ ಕಾರ್ಯ ಅನುಕರಣೀಯವಾಗಿದೆ. ಕಲೆಯನ್ನು ಅವುಗಳ ಗುಣಮಟ್ಟ ಹಾಗೂ ನೈಜತೆಯೊಂದಿಗೆ ಉಳಿಸುವುದು ಮೆಚ್ಚತಕ್ಕ ಸಂಗತಿ ಎಂದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ ಮಾತನಾಡಿದರು. ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ, ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಭುವನ ಭಾಗ್ವತ, ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ, ಉದ್ಯಮಿ ರಾಮನಾಥ ಶಾನಭಾಗ, ಎಂ.ಎಂ. ಹೆಗಡೆ, ಮಹೇಶ ನಾಯಕ, ತುಳಸು ಗೌಡ ಇತರರು ಇದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಭಾರ ಎತ್ತುವ ಸಾಧನೆ ಮಾಡಿರುವ ವಿದ್ಯಾರ್ಥಿ ಧ್ರುವ ಕಿಶನ್ ವಾಳ್ಕೆ ಅವರನ್ನು ಸನ್ಮಾನಿಸಲಾಯಿತು. ನುಡಿಸಿರಿ ವಿರಾಸತ್ ಹೊನ್ನಾವರ ಘಟಕದ ಜಿ.ಯು. ಭಟ್ ಸ್ವಾಗತಿಸಿದರು. ಕುಮಟಾ ಘಟಕದ ಸಂತೋಷ ನಾಯ್ಕ ವಂದಿಸಿದರು. ವನ್ನಳ್ಳಿ ಗಿರೀಶ ನಾಯ್ಕ ನಿರ್ವಹಿಸಿದರು.

ಬಳಿಕ ೫೦೦ಕ್ಕೂ ಹೆಚ್ಚು ಮಂದಿ ಆಳ್ವಾಸ್‌ನ ತರಬೇತುಗೊಂಡ ವಿದ್ಯಾರ್ಥಿಗಳು ಕಲಾತ್ಮಕ ಯೋಗ, ಅಷ್ಟಲಕ್ಷ್ಮೀ-ಶಾಸ್ತ್ರೀಯ ನೃತ್ಯ, ಆಂಧ್ರದ ಜಾನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್‌, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಲ್ಲಕಂಬ, ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ವರ್ಷಧಾರೆ-ಕಥಕ್ ನೃತ್ಯ, ಪುರುಲಿಯಾ ಸಿಂಹ ನೃತ್ಯ, ಶ್ರೀರಾಮ ಪಟ್ಟಾಭಿಷೇಕ ತೆಂಕುತಿಟ್ಟು ಯಕ್ಷಗಾನ, ಶಂಕರಾರ್ಧ ಶರೀರಿಣಿ-ಬಡಗುತಿಟ್ಟು ಯಕ್ಷಗಾನ, ಬೊಂಬೆ ವಿನೋದಾವಳಿ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಧ ವಧುವಿಗೆ ಬಾಳುಕೊಟ್ಟ ವರ
ಸುತ್ತೋಲೆ ಇಲ್ಲದೇ ಕೈತೋಟದ ಸಸಿಗಳ ಹಣ ಪಾವತಿಗೆ ವಿರೋಧ