ಕನ್ನಡಪ್ರಭ ವಾರ್ತೆ ಮಧುಗಿರಿ
ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು. ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀದಂಡಿನಮಾರಮ್ಮ ಜಾತ್ರೆ ಪ್ರಯಕ್ತ ಬುಧವಾರ ರಾತ್ರಿ ದೇವಸ್ಥಾನದ ವತಿಯಿಂದ ನಡೆದ ಬೆಳ್ಳಿಪಲ್ಲಕ್ಕಿ ಉತ್ಸವ, ಆಕರ್ಷಕ ಸಿಡಿಮದ್ದು ಪ್ರದರ್ಶನ , ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಧುಗಿರಿ ಕ್ಷೇತ್ರವನ್ನು ಗುಡಿಸಲು ರಹಿತ ಕ್ಷೇತ್ರ ಮಾಡುವುದು ನನ್ನ ಗುರಿ, 2013-18ರ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ತಾಲೂಕಿನಲ್ಲಿ ಸೂರಿಲ್ಲದ ಎಲ್ಲ ಜಾತಿಯ ಬಡವರನ್ನು ಗುರುತಿಸಿ 16,400 ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದೆ, ಅದೇ ಬಿಜೆಪಿ ಸರ್ಕಾರದ ಅವದಿಯಲ್ಲಿ ಒಂದೇ ಒಂದು ಮನೆ ಕಟ್ಟಲು ಸಾಧ್ಯವಾಗಿಲ್ಲ, ಬಿಜೆಪಿಗರದ್ದು ಸುಳ್ಳಿನ ಸರ್ಕಾರ ಎಂದು ಆರೋಪಿಸಿದ ಸಚಿವರು, ಇನ್ನೂ ಒಂದು ವರ್ಷದೊಳಗೆ ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆ ನೀರು ಹರಿಸಲಾಗುವುದು. ಇಲ್ಲಿನ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸಲು ಟೆಂಡರ್ ಪ್ರಕ್ರಿಯೇ ಪ್ರಗತಿಯಲ್ಲಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲಾಕೇಂದ್ರ ಮಾಡುವತ್ತ ನಮ್ಮ ಗುರಿ ಎಂದರು.
ರಾಜಕೀಯ ಲಾಭಕ್ಕಾಗಿ, ಹೆಚ್ಚು ಮತಗಳಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾತಿ ಮತಗಳ ನಡುವೆ ಕಂದಕ ನಿರ್ಮಾಣ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕದಡಬಾರದು. ಜನರು ಧರ್ಮವನ್ನು ಜನತೆ ನಂಬಿ ಅವರವರ ಧರ್ಮ ಗ್ರಂಥಗಳನ್ನು ಆಳವಾಗಿ ಅಭ್ಯಾಸಿಸಿ ಅರ್ಥಮಾಡಿಕೊಂಡು ಅಂತರಾರ್ಥವನ್ನು ತಿಳಿದು ಯಾರಿಗೂ ನೋವುಂಟು ಮಾಡದೇ ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ, ಗೌರವಗಳಿಂದ ಬದುಕಿ, ತಾವು ಬದುಕಿ ಇತರೆ ಧರ್ಮದವರು ಬದಕಲು ಬಿಡಿ, ಪರಸ್ಪರರಲ್ಲಿ ಹೃದಯ ಶ್ರೀಮಂತಿಕೆ ಬೆಳಸಿಕೊಂಡು ಸೌಹಾರ್ದಯುತವಾಗಿ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಬೇಕು. ಮುಂದಿನ ದಿನಗಳಲ್ಲಿ ನಾಡಿನಲ್ಲಿ ಸುಭೀಕ್ಷವಾಗಿ ಮಳೆ ಸುರಿದು ಬೆಳೆ ಬೆಳೆದು ರೈತರ ಹಾಗೂ ಸಾರ್ವಜನಿಕರ ಹಿತವನ್ನು ತಾಯಿ ದಂಡಿನಮಾರಮ್ಮ ಕಾಪಾಡಲಿ ಎಂದು ಶುಭ ಹಾರೈಸಿದರು.ಸುಮಾರು 6 ದಶಕಗಳ ಹಿಂದೆ ನಡೆದಿದ್ದ ಗ್ರಾಮ ದೇವತೆ ದಂಡಿನ ಮಾರಮ್ಮ ತೆಪ್ಪೋತ್ಸವವು ಇತ್ತಿಚೆಗೆ ನಮ್ಮ ಚೋಳೇನಹಳ್ಳಿ ಕೆರೆಯ ಅಂಗಳದಲ್ಲಿ ಪಣ್ಣೆ ರೈತರ, ಅಧಿಕಾರಿಗಳ ಹಾಗೂ ದಂಡಿಮಾರಮ್ಮ ದೇವಿಯ ಭಕ್ತ ಮಂಡಲಿಯ ಸಹಕಾರದೊಂದಿಗೆ ವೈಭವಯುತವಾಗಿ ನಡೆದು ಚರಿತ್ರೆಯಲ್ಲಿ ಉಳಿಯುವಂತೆ ಮಾಡಿದೆ. ಈ ಧಾರ್ಮಿಕ ಕಾರ್ಯಕ್ರಮ ಎಲ್ಲ ಜನಾಂಗದವರನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದರು.
ರೈತರು ಹೆಚ್ಚು ವಾಸಿಸುವ ಈ ಪ್ರದೇಶದಲ್ಲಿ ಉತ್ತಮ ರಾಸುಗಳು ಜಾತ್ರೆ ಕೊಳ್ಳುವ ಮತ್ತು ಮಾರುವ ವ್ಯವಹಾರ ಕೂಡ ಸುಸುತ್ರವಾಗಿ ನಡೆದಿದೆ. ದನಗಳಿಗೆ ಯಾವುದೇ ಸುಂಕ ವಿಧಿಸದೇ ರಾಸುಗಳಿಗೆ ಕುಡಿಯುವ ನೀರು ಉತ್ತಮ ಸೌಲಭ್ಯ ಕಲ್ಪಿಸಿದೆ. ಈ ಭಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಶಿಕ್ಷಣ ಪಡೆದು ವಿದ್ಯಾವಂತರಾಗಿ ತಮ್ಮ ಕುಟುಂಬ ನಿರ್ವಹಣೆಗೆ ನೆರವಾಗುವ ನಿಟ್ಟಿನಲ್ಲಿ ಸಮಾಜಕ್ಕೆ ಆಸ್ತಿಯಾಗಬೇಕು. ದಂಡಿನಮಾರಮ್ಮ ಜಾತ್ರೆಗೆ ಅಧಿಕ ಜನರು ಪಾಲ್ಗೊಂಡಿದ್ದು, ಅಧಿಕಾರಿಗಳು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಮುತುರ್ವಜಿ ವಹಿಸಿ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಭಕ್ತಾದಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.ಉಪವಿಭಾಗಾಧಿಕಾರಿ ಮತ್ತು ದೇವಸ್ಥಾನದ ಆಡಳಿತಾಧಿಕಾರಿ ಗೋಟೂರು ಶಿವಪ್ಪ ಶಾಂತಲಾ ರಾಜಣ್ಣ, ತಹಸೀಲ್ದಾರ್ ಶಿರಿನ್ ತಾಜ್, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಡಿವೈಎಸ್‌ಪಿ ಮಂಜುನಾಥ್, ಮುಖಂಡ ತುಂಗೋಟಿ ರಾಮಣ್ಣ, ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡರಾಜು, ಎನ್.ಗಂಗಣ್ಣ, ದೇಗುಲ ಸಮಿತಿ ಸದಸ್ಯರಾದ ರಾಮೇಗೌಡ, ನಾಗೇಂದ್ರ, ಬಾಬು, ಬಾಲಾಜಿ ಸೇರಿದಂತೆ ಅನೇಕರು ಇದ್ದರು.