ಗೋಕರ್ಣ: ಹೊಸ ಅನ್ವೇಷಣೆಗಳು ಆದಾಗ, ಹೊಸ ವಸ್ತುಗಳು ಬಂದಾಗ, ಅದಕ್ಕೆ ತಕ್ಕ ಪದಗಳನ್ನು ಸೃಷ್ಟಿಸುವ ಸಾಮರ್ಥ್ಯ ಮತ್ತು ಸಮೃದ್ಧತೆ ನಮ್ಮ ಭಾಷೆಗೆ ಇದೆ ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.
ಭಾಷೆಯಿಂದ ಮೊದಲ್ಗೊಂಡು ನಮ್ಮತನ, ನಮ್ಮ ಉಡುಗೆ- ತೊಡುಗೆ, ನಮ್ಮ ಆಹಾರ- ವಿಹಾರ, ನಮ್ಮ ಸಂಸ್ಕೃತಿ- ಪರಂಪರೆಗೆ ಮರಳುವುದು ಅಗತ್ಯ ಎಂದು ಕರೆ ನೀಡಿದರು.
ಇಂಗ್ಲಿಷ್ ಪದಗಳಿಂದ ಭಾಷೆಯನ್ನು ಕಲುಷಿತಗೊಳಿಸುವ ಬದಲು ಸಂಸ್ಕೃತ ಅಥವಾ ಇತರ ಭಾರತೀಯ ಭಾಷೆಯ ಪದಗಳನ್ನು ಆಧಾರವಾಗಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳಬಹುದು ಎಂದು ಸಲಹೆ ಮಾಡಿದರು.ಧ್ಯಾನದಿಂದ ಅಂತರಂಗದ ಶುದ್ಧಿ ಮಾಡುವಂತೆ ದೇಹದ ಕಲ್ಮಶಗಳು ಪ್ರತಿದಿನ ಶುಚಿಯಾಗಬೇಕು. ನವರಂಧ್ರಗಳು ಕಲ್ಮಶಗಳನ್ನು ಸೃಷ್ಟಿಸುತ್ತಿರುತ್ತವೆ. ಬೆಳಿಗ್ಗೆ ಮೊದಲು ಶುದ್ಧಿ ಕಾರ್ಯಗಳನ್ನು ನಡೆಸಬೇಕು. ಇಲ್ಲೂ ನಮ್ಮ ಹಿರಿಯರು ಅನುಸರಿಸುತ್ತಿದ್ದ ವಿಧಾನಕ್ಕೆ ಮರಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಒಂದೇ ಬಾರಿಗೆ ಟೂಥ್‌ಪೇಸ್ಟ್ ಬಿಡಲು ಸಾಧ್ಯವಾಗದಿದ್ದರೆ ಮರಳಿನ ಪುಡಿ, ಎಲುಬಿನ ಪುಡಿ, ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಿದ ದಂತಮಂಜನ ಬಳಸದೇ ಮಂಗಲದ್ರವ್ಯಗಳಿಂದ ತಯಾರಿಸಿದ ಉತ್ಪನ್ನಗಳ ಬಳಕೆ ಆರಂಭವಾಗಲಿ ಎಂದು ಆಶಿಸಿದರು.ಸಂಸ್ಕೃತದ ಪಿಷ್ಠ, ಕನ್ನಡದಲ್ಲಿ ಹಿಟ್ಟು ಎಂದು ಕರೆಯಲ್ಪಡುತ್ತಿದ್ದು, ಇಂಗ್ಲಿಷ್‌ನಲ್ಲಿ ಪೇಸ್ಟ್ ಆಗಿದೆ ಎಂದು ವಿಶ್ಲೇಷಿಸಿದರು. ಹೊಂಗೆ, ಬೇವಿನಕಡ್ಡಿ, ಮಾವಿನ ಕಡ್ಡಿಯನ್ನು ಅಗಿದು ದಂತದಾವನ ಮಾಡಲಾಗುತ್ತಿತ್ತು. ದಂತ ಚೂರ್ಣ ಬಳಕೆ ಇತ್ತು. ಬಳಿಕ ದಂತಮಂಜನ ಆಯಿತು. ಕನ್ನಡದಲ್ಲಿ ಟೂಥ್‌ಪೇಸ್ಟ್‌ಗೆ ಹಲ್ಸರಿ ಎಂಬ ಪದ ಇದ್ದು, ಇದರ ಬಳಕೆ ಹೆಚ್ಚಲಿ ಎಂದರು.ನೂತನ ಪದಾಧಿಕಾರಿಗಳಾಗಿ ನಿಯುಕ್ತರಾದ ಸೇವಾಬಿಂದುಗಳನ್ನು ಆಶೀರ್ವದಿಸಿ, ಸೇವೆಗೆ ಹೆಚ್ಚು ಶಕ್ತಿ ಮತ್ತು ಪ್ರೇರಣೆಯನ್ನು ಶ್ರೀರಾಮ ಅನುಗ್ರಹಿಸಲಿ ಎಂದು ಆಶಿಸಿದರು.
ಪದಾಧಿಕಾರದಿಂದ ಬಿಡುಗಡೆಯಾದವರು ಬೇರೆ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಸೇವಾ ಪ್ರಧಾನ ಕೃಷ್ಣಮೂರ್ತಿ ಮಾಡಾವು, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಹಿರಿಯ ಲೋಪಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಉಪಸ್ಥಿತರಿದ್ದರು. ಗುರುಪರಂಪರೆಗೆ ವಿಷ್ಣುಸಹಸ್ರನಾಮ ಪೂರ್ವಕವಾಗಿ ಲಕ್ಷ ತುಳಸಿ ಅರ್ಚನೆ ನಡೆಯಿತು.