ನಮ್ಮ ಬದುಕೇ ದತ್ತನ ಭಿಕ್ಷೆ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Mar 19, 2026, 02:15 AM IST
ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ದತ್ತಗುರು ಎಂದರೆ ಎಲ್ಲಾ ದೇವತೆಗಳ ಸನ್ನಿಧಾನ. ದತ್ತನ ಸೇವೆ ಮಾಡಿದರೆ ಎಲ್ಲ ದೇವರ ಸೇವೆ ಮಾಡಿದಂತೆ.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ದತ್ತಗುರು ಎಂದರೆ ಎಲ್ಲಾ ದೇವತೆಗಳ ಸನ್ನಿಧಾನ. ದತ್ತನ ಸೇವೆ ಮಾಡಿದರೆ ಎಲ್ಲ ದೇವರ ಸೇವೆ ಮಾಡಿದಂತೆ. ಎಲ್ಲಾ ಪುರದವರೂ ಯಲ್ಲಾಪುರಕ್ಕೆ ಬರುವಂತಹ ಕ್ಷೇತ್ರವಾಗಿ ದತ್ತ ಮಂದಿರ ಬೆಳೆಯಬೇಕು. ಭಕ್ತರು ಹೆಚ್ಚು ಬಂದಂತೆ ದೇವರ ಸಾನ್ನಿಧ್ಯವೂ ಹೆಚ್ಚುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಪಟ್ಟಣದ ನಾಯಕನಕೆರೆ ಶ್ರೀ ದತ್ತ ಮಂದಿರದ ಆವಾರದಲ್ಲಿ ಹಮ್ಮಿಕೊಂಡಿದ್ದ ಸೇವಾಶೀರ್ವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬದ್ಧತೆ ಇರುವ ಕಾರ್ಯಕರ್ತರ ಮೂಲಕ ದತ್ತಾತ್ರೇಯರ ಸೇವಾ ಕಾರ್ಯ ನಿರಂತರವಾಗಿ ನಡೆಯಬೇಕು ಎಂಬ ಆಶಯದೊಂದಿಗೆ ದೇವಸ್ಥಾನದ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ. ದತ್ತ ಮಂದಿರದ ಭಕ್ತರಿಂದಲೇ ಮಂದಿರ ಅಭಿವೃದ್ಧಿ ಹೊಂದಬೇಕು ಎಂಬ ಆಶಯ ನಮ್ಮದು. ನಮ್ಮ ಬದುಕೇ ದತ್ತನ ಭಿಕ್ಷೆ. ದತ್ತನಿಂದಲೇ ಪಡೆದ ಈ ಬದುಕು, ನಾವು ಗಳಿಸಿದ್ದರಲ್ಲಿ ದತ್ತನಿಗೆ ಸಮರ್ಪಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕು. ತಪ್ಪದೇ ದತ್ತ ಭಿಕ್ಷೆ ನೀಡಿದರೆ, ದತ್ತನ ರಕ್ಷೆ ಸದಾ ನಮ್ಮ ಮೇಲಿರುತ್ತದೆ ಎಂದರು. ದತ್ತ ಮಂದಿರದ ನಿರ್ಮಾಣ, ಪ್ರತಿಷ್ಠಾ ಮಹೋತ್ಸವದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದಲ್ಲಿ ಈವರೆಗೆ ನಡೆದ ಕಾರ್ಯಗಳ ಕುರಿತು ಸಮಿತಿಯ ಉಪಾಧ್ಯಕ್ಷ ಶ್ರೀರಂಗ ಕಟ್ಟಿ ವಿವರಿಸಿದರು. ಮಹೇಶ ಚಟ್ನಳ್ಳಿ ನಿರ್ವಹಿಸಿದರು. ಇದಕ್ಕೂ ಮುನ್ನ ವೈದಿಕರಿಂದ ದತ್ತಾತ್ರೇಯ ಮೂಲ ಮಂತ್ರ ಹವನ, ಕಲಾ ಮಂತ್ರ ಹವನ ನಡೆಯಿತು. ಕೇಂದ್ರ ಸಾಂಬಾರ ಮಂಡಳಿಯ ಸದಸ್ಯ ಪ್ರಸನ್ನ ಕೆರೆಕೈ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಮಠದ ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟಾ ಇತರರಿದ್ದರು. ನೂತನ ಕ್ರಿಯಾ ಸಮಿತಿ

ಶ್ರೀಗಳ ನಿರ್ದೇಶನದಂತೆ ರಚಿಸಲಾದ ದೇವಸ್ಥಾನದ ನೂತನ ಕ್ರಿಯಾ ಸಮಿತಿಯ ಪದಾಧಿಕಾರಿಗಳ ಯಾದಿ ಪ್ರಕಟಿಸಲಾಯಿತು. ಸಮಿತಿಯ ಮಾರ್ಗದರ್ಶಕರಾಗಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ವಿವಿಧ ವಿಭಾಗಗಳಿಗೆ ಸಂಯೋಜಕರಾಗಿ ಶ್ರೀಕಾಂತ ಭಟ್ಟ ಹುಬ್ಬಳ್ಳಿ, ಶಾಂತಾರಾಮ ಹೆಗಡೆ ಕೊಂಡದಕುಳಿ, ಪ್ರಶಾಂತ ಹೆಗಡೆ, ನಾಗೇಶ ಯಲ್ಲಾಪುರಕರ್, ಶಿವಾನಂದ ಹೆಗಡೆ, ಶಿವರಾಮ ಹೆಗಡೆ ಕಳಚೆ, ರಾಮನಾಥ ಭಟ್ಟ, ಅಶೋಕ ಹೆಗಡೆ, ಡಾ. ಕೆ.ಸಿ. ನಾಗೇಶ ಭಟ್ಟ, ವಿ.ಎಂ. ಭಟ್ಟ, ಸಿ.ಜಿ. ಹೆಗಡೆ, ರಮೇಶ ಹೆಗಡೆ, ನಿತ್ಯಾನಂದ ಬಾಂದೇಕರ್, ಸಂತೋಷ ಬಂಟ, ಶಾಂತಾರಾಮ ಭಟ್ಟ, ಮಂಜುನಾಥ ನಾಯ್ಕ, ಉಮೇಶ ಪೈ, ಸಂಧ್ಯಾ ಹೆಗಡೆ, ಸರೋಜಾ ಹೆಗಡೆ, ಶ್ರೀರಂಗ ಕಟ್ಟಿ, ನಾಗರಾಜ ಮದ್ಗುಣಿ, ಪ್ರಸಾದ ಹೆಗಡೆ, ನರಸಿಂಹ ಗಾಂವ್ಕರ ಇವರನ್ನು ನೇಮಕ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಯುಗಾದಿಯ ಸಂಭ್ರಮ: ಆದರೆ ಕೂಡ್ಲಿಗಿಯಲ್ಲಿ ಸೂತಕದ ಛಾಯೆ!
ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್