ನಮ್ಮ ಮೆಟ್ರೋ ಹಸಿರು ವಿಸ್ತೃತ ಮಾರ್ಗ ಸೇವೆ ಶೀಘ್ರ

KannadaprabhaNewsNetwork |  
Published : Oct 04, 2024, 01:09 AM IST
Metro 2 | Kannada Prabha

ಸಾರಾಂಶ

ನಮ್ಮ ಮೆಟ್ರೋ ಹಸಿರು ಕಾರಿಡಾರ್‌ ವಿಸ್ತರಿತ ನಾಗಸಂದ್ರ - ಮಾದವಾರ (3.7 ಕಿ.ಮೀ.) ಮಾರ್ಗದ ವರದಿ ಇನ್ನೆರಡು ವಾರದಲ್ಲಿ ಬರುವ ನಿರೀಕ್ಷೆಯಿದ್ದು, ಶೀಘ್ರವೇ ಪ್ರಯಾಣಿಕರ ಸಂಚಾರ ಪ್ರಾರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಹಸಿರು ಕಾರಿಡಾರ್‌ ವಿಸ್ತರಿತ ನಾಗಸಂದ್ರ - ಮಾದವಾರ (3.7 ಕಿ.ಮೀ.) ಮಾರ್ಗದಲ್ಲಿ ಗುರುವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್‌) ತಪಾಸಣೆ ಪೂರ್ಣಗೊಳಿಸಿದೆ. ಇನ್ನೆರಡು ವಾರದಲ್ಲಿ ವರದಿ ನೀಡುವ ನಿರೀಕ್ಷೆಯಿದ್ದು, ಶೀಘ್ರವೇ ಇಲ್ಲಿ ಪ್ರಯಾಣಿಕರ ಸಂಚಾರ ಪ್ರಾರಂಭವಾಗಲಿದೆ.

ಮೋಟಾರ್‌ ಟ್ರಾಲಿ ಮೂಲಕ ಮಾರ್ಗದಲ್ಲಿ ಸಂಚರಿಸಿದ ಸಿಎಂಆರ್‌ಎಸ್‌ ತಂಡದವರು ಪರಿಶೀಲನೆ ನಡೆಸಿದರು. ಮಾರ್ಗದ ತಿರುವು, ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ರೈಲಿನ ವೇಗ, ನಿಲ್ದಾಣಗಳಲ್ಲಿ ನಿಲ್ಲಬೇಕಾದಾಗ ನಿಧಾನಗತಿ, ಬ್ರೇಕ್‌ ಸಿಸ್ಟಂ, ವಿದ್ಯುತ್‌ ಪೂರೈಕೆ ಸೇರಿ ಇತರೆ ಅಂಕಿ ಅಂಶಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಂದ ಪಡೆದರು. ಜೊತೆಗೆ ಮಂಜುನಾಥನಗರ, ಚಿಕ್ಕಬಿದರಕಲ್ಲು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ನಿಲ್ದಾಣಗಳನ್ನು ತಪಾಸಣೆ ಮಾಡಿದರು.

ಸಿಎಂಆರ್‌ಎಸ್ ತಂಡ ಹದಿನೈದು ದಿನಗಳಲ್ಲಿ ವರದಿ ನೀಡುವ ಸಾಧ್ಯತೆಯಿದೆ. ಅವರು ಸೂಚಿಸುವ ಕೆಲ ಬದಲಾವಣೆಗಳ ಅನ್ವಯ ರೈಲು ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

2017ರಲ್ಲಿ ಹಸಿರು ಮಾರ್ಗದ ವಿಸ್ತರಿತ ಕಾಮಗಾರಿ ಆರಂಭವಾಗಿದ್ದರೂ ಕೋವಿಡ್‌, ಭೂಸ್ವಾಧೀನ ಸೇರಿ ಹಲವು ಕಾರಣದಿಂದ ಏಳು ವರ್ಷ ವಿಳಂಬವಾಗಿದೆ. ಇದೀಗ ಮಾದವಾರದವರೆಗೆ ವಾಣಿಜ್ಯ ಸೇವೆ ಲಭ್ಯವಾಗಲಿದ್ದು, ಇದರಿಂದ ನೆಲಮಂಗಲ ಸೇರಿ ಸುತ್ತಮುತ್ತಲ ಜನತೆಗೆ ಅನುಕೂಲವಾಗಲಿದೆ.

ಇನ್ನು, ಸಿಎಂಆರ್‌ಎಸ್‌ ತಪಾಸಣೆ ಹಿನ್ನೆಲೆಯಲ್ಲಿ ನಾಗಸಂದ್ರ ಹಾಗೂ ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಗುರುವಾರ ಬೆಳಗ್ಗೆ 10 ಗಂಟೆಯಿಂದ 2 ಗಂಟೆವರೆಗೆ ರೈಲ್ವೆ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಈ ಭಾಗದ ಪ್ರಯಾಣಿಕರು ತೊಂದರೆಗೆ ಒಳಗಾದರು.

-----

ಫೋಟೋ

ನಮ್ಮ ಮೆಟ್ರೋ ಹಸಿರು ಕಾರಿಡಾರ್‌ ವಿಸ್ತರಿತ ನಾಗಸಂದ್ರ - ಮಾದವಾರ ಮಾರ್ಗದಲ್ಲಿ ಸಿಎಂಆರ್‌ಎಸ್‌ ತಂಡದಿಂದ ತಪಾಸಣೆ ನಡೆಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...