ತರೀಕೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ
ಕನ್ನಡಪ್ರಭ ವಾರ್ತೆ, ತರೀಕೆರೆಬರಗಾಲದಲ್ಲೂ ಆಸರೆಯಾದ ನಮ್ಮ ನರೇಗಾ ಯೋಜನೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಣೇಶ್ ತಿಳಿಸಿದರು. ತರೀಕೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪ್ರಸ್ತುತ ತರೀಕೆರೆ ಬರಪಿಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಿದೆ. ಕಳೆದ ವರ್ಷ ವಾಡಿಕೆ ಮಳೆಗಿಂತಲೂ ತೀರಾ ಕಡಿಮೆ ಮಳೆಯಾದ ಕಾರಣ ಬರಗಾಲ ಉಂಟಾಗಿ ಹಳ್ಳಿಯ ಜನತೆಗೆ ದುಡಿಮೆ ಇಲ್ಲದೆ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ ತಂದೊಡ್ಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಗ್ರಾಮೀಣಾ ಭಾಗದ ಜನರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಹೇಳಿದರು
ಯೋಜನೆಯ ಕೆಲಸದಿಂದ ಬಹುತೇಕ ಜನರು ನಗರಗಳಿಗೆ ಗುಳೆಹೋಗುವುದನ್ನು ತಪ್ಪಿಸಿದಂತಾಗಿದೆ. ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿಯೇ ನಿರಂತರವಾಗಿ ಕೆಲಸ ದೊರಕಿಸಿ ಕೊಡಲಾಗುತ್ತಿದ್ದು. ವಲಸೆ ತಡೆಯುವ ಉದ್ದೇಶದಿಂದ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ’ ಅಭಿಯಾನವನ್ನು ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಂಡು ಉದ್ಯೋಗ ಚೀಟಿ ಹೊಂದಿರುವವರ ಬೇಡಿಕೆಯನ್ನು ಪಡೆದು ಕೆಲಸವನ್ನು ನೀಡುತ್ತಿರುವುದರಿಂದ ಜನಸಾಮಾನ್ಯರಿಗೆ ಆಸರೆಯಾಗಿದೆ.2023-24ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 393479 ಮಾನವ ದಿನಗಳ ಸೃಜನೆ ಮಾಡಲಾಗಿದೆ ಹಾಗೂ 2024-25ನೇ ಸಾಲಿನ ಏಪ್ರೀಲ್ ಒಂದು ತಿಂಗಳಿನಲ್ಲೇ 33151 ಮಾನವದಿನಗಳ ಸೃಜನೆ ಮಾಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ.
ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳು ಆರಂಭವಾಗಿದ್ದು, ಕೆಲಸಗಳಿಗೆ ತೆರಳುವ ತಾಯಂದಿರು 3 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆ ಕೇಂದ್ರಗಳಲ್ಲಿ ಬಿಟ್ಟು ಹೋಗುವ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಪಡೆದ ಕೇರ್ ಟೇಕರ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ. ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.ಪ್ರಮುಖವಾಗಿ ನೈಸರ್ಗಿಕ ಸಂಪನ್ಮೂಲ ವೃದ್ಧಿಸುವಲ್ಲಿ ಕೆರೆ,ಕಟ್ಟೆ, ನಾಲೆ ಅಭಿವೃದ್ಧಿ, ಗೋಮಾಳ ಅಭಿವೃದ್ಧಿ, ಬದು ನಿರ್ಮಾಣ, ಚೆಕ್‌ಡ್ಯಾಮ್ ಹಾಗೂ ಕಾಲುವೆ ನಿರ್ಮಾಣ, ಕೆರೆ ಅಂಚಿನಲ್ಲಿ ಅರಣ್ಯೀಕರಣ, ಬತ್ತಿದ ಕೊಳವೆ ಬಾವಿಗಳಿಗೆ ಮಳೆ ನೀರು ಮರುಪೂರಣ ಘಟಕ ನಿರ್ಮಾಣ ಹಾಗೂ ಹಳ್ಳಿಗಳಲ್ಲಿ ಸರ್ವವೃತು ರಸ್ತೆಗಳ ನಿರ್ಮಾಣ, ಮನೆಗಳಿಂದ ಬರುವಂತಹ ಕೊಳಚೆ ನೀರಿನ ನಿರ್ವಹಣೆಗೆ ಬಾಕ್ಸ್ ಚರಂಡಿಗಳ ನಿರ್ಮಾಣಗಳಂತಹ ಅನುಮತಿಸಲ್ಪಟ್ಟ ಕಾಮಗಾರಿ ಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.ಏಪ್ರೀಲ್-1 ರಿಂದ ರೂ.349 ಗಳನ್ನು ದಿನಗೂಲಿ ನಿಗಧಿಯಾಗಿದ್ದು, ಕೆಲಸ ನಿರ್ವಹಿಸಿದ ಪ್ರತಿ ಉದ್ಯೋಗ ಚೀಟಿ ಹೊಂದಿರುವವರ ಖಾತೆಗೆ ನೆರವಾಗಿ ಹಣ ಪಾವತಿ ಮಾಡಲಾಗುತ್ತಿದೆ ಎಂದಿದ್ದಾರೆ.
7ಕೆಟಿಆರ್.ಕೆ.6ಃತರೀಕೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.