- ವಿದ್ಯಾರ್ಥಿ, ಯುವಜನರು, ಸಾರ್ವಜನಿಕರು ಪಾಲ್ಗೊಳ್ಳಲು ಮನವಿ । ವಿಜೇತರಿಗೆ ಬಹುಮಾನ
- - - ಕನ್ನಡಪ್ರಭ ವಾರ್ತೆ ದಾವಣಗೆರೆನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದಡಿ ಮಾ.9ರಂದು ಪೊಲೀಸರೊಂದಿಗೆ 10ಕೆ ಮತ್ತು 5ಕೆ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಹೇಳಿದರು.
ನಗರದ ಎಸ್‌ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್‌ಮುಕ್ತ ಸಮಾಜ, ಮಹಿಳೆಯರ ಬದ್ಧತೆ, ಸುರಕ್ಷತೆ, ಸೈಬರ್ ಅಪರಾಧದ ವಿರುದ್ಧ ಅರಿವು, ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಪೂರ್ವ ವಲಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲಿ ಮ್ಯಾರಥಾನ್ ಓಟ ಹಮ್ಮಿಕೊಂಡಿದ್ದೇವೆ ಎಂದರು.ಪೊಲೀಸರೊಂದಿಗೆ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಯುವಕ-ಯುವತಿಯರು, ಕ್ರೀಡಾಪಟುಗಳು, ಪತ್ರಕರ್ತರು, ಜಿಲ್ಲೆಯ ನಾಗರೀಕರು ಸ್ವಪ್ರೇರಣೆಯಿಂದ ಪಾಲ್ಗೊಳ್ಳಬಹುದು. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಮ್ಯಾರಥಾನ್ ಓಟದ ಸ್ಪರ್ಧೆ ಇರುತ್ತದೆ. ಬೆಳಗ್ಗೆ 6 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ 10ಕೆ ಮತ್ತು 5ಕೆ ಮ್ಯಾರಥಾನ್ ಓಟದ ಸ್ಪರ್ಧೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಹತ್ತು ಸಾವಿರ ಮೀಟರ್ ಮ್ಯಾರಥಾನ್ ಓಟದ ವಿಜೇತ ಮೊದಲ ಮೂವರಿಗೆ ಕ್ರಮವಾಗಿ ₹20 ಸಾವಿರ, ₹10 ಸಾವಿರ, ₹5 ಸಾವಿರ ನಗದು ಬಹುಮಾನಗಳು, ಪ್ರಮಾಣಪತ್ರ ನೀಡಲಾಗುವುದು. 5ಕೆ ವಿಜೇತರಿಗೆ ₹10 ಸಾವಿರ, ₹5 ಸಾವಿರ, ₹3 ಸಾವಿರ ನಗದು ಬಹುಮಾನಗಳನ್ನು ನೀಡಲಾಗುವುದು. ವಿದ್ಯಾರ್ಥಿ, ಯುವಜನರು, ಸಾರ್ವಜನಿಕರು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವಂತೆ ಐಜಿಪಿ ಹೇಳಿದರು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಮ್ಯಾರಥಾನ್ ಓಟದ ಸ್ಪರ್ಧೆಗೆ ಎಲ್ಲ ಅಗತ್ಯ ಸಿದ್ಧತೆ ಮಾಡಿದ್ದು, ಸ್ಪರ್ಧಿಗಳಿಗೆ ಕುಡಿಯುವ ನೀರು, ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಮ್ಯಾರಥಾನ್ ಓಟದ ಸ್ಪರ್ಧೆ ಆಯೋಜಿಸಿದ್ದು, ಓಟದ ಮಾರ್ಗದ ನಾಲ್ಕೂ ಕಡೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಸ್ಪರ್ಧೆ ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸಮಾರೋಪದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ನಗರ ಉಪಾಧೀಕ್ಷಕ ಶರಣ ಬಸವೇಶ್ವರ, ವೃತ್ತ ನಿರೀಕ್ಷಕ ಲಕ್ಷ್ಮಣ ನಾಯ್ಕ ಇತರರು ಇದ್ದರು.- - -
ಬಾಕ್ಸ್ * ಮ್ಯಾರಥಾನ್ ಓಟದ ಮಾರ್ಗಗಳು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಿಂದ ಡೆಂಟಲ್ ಕಾಲೇಜು ರಸ್ತೆ, ಡಾ. ಎಂ.ಸಿ. ಮೋದಿ ವೃತ್ತ, ಶಾಬನೂರು ರಸ್ತೆ, ಲಕ್ಷ್ಮೀ ಫ್ಲೋರ್ ಮಿಲ್ ವೃತ್ತ, ಸಮುದಾಯ ಭವನ ವೃತ್ತ, ಶ್ರೀ ಶಾರದಾಂಬ ವೃತ್ತದ ಮಾರ್ಗವಾಗಿ ಕರ್ನಲ್ ರವೀಂದ್ರನಾಥ ವೃತ್ತಿದಿಂದ ನೇರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಮಹಾತ್ಮ ಗಾಂಧಿ ವೃತ್ತ, ಶ್ರೀ ಜಯದೇವ ವೃತ್ತ, ವಿದ್ಯಾರ್ಥಿ ಭವನ, ಬಾಪೂಜಿ ಬ್ಯಾಂಕ್ ಬಳಿ ಬಲಕ್ಕೆ ತಿರುಗಿ, ಜಿಲ್ಲಾ ಕ್ರೀಡಾಂಗಣದ ಮುಖ್ಯ ದ್ವಾರದ ಒಳಗೆ 10ಕೆ ಮ್ಯಾರಥಾನ್ ಓಟದ ಸ್ಪರ್ಧೆಯ ಸ್ಪರ್ಧಿಗಳು ತಲುಪಬೇಕು.ದಾವಣಗೆರೆ ಜಿಲ್ಲಾ ಕ್ರೀಡಾಂಗಣದಿಂದ ಹದಡಿ ರಸ್ತೆಯ ಪೂರ್ವ ಮುಖ್ಯ ದ್ವಾರದ ಮೂಲಕ ಎಆರ್‌ಜಿ ಕಾಲೇಜು, ಯುಡಿಬಿಟಿ ಕಾಲೇಜು ಬಳಿ ಡೆಂಟಲ್ ಕಾಲೇಜು ರಸ್ತೆ ಮುಖಾಂತರ ಮೆಡಿಕಲ್ ಹಾಸ್ಟೆಲ್ ರಸ್ತೆ ಮಾರ್ಗವಾಗಿ ಶ್ರೀ ಆಂಜನೇಯ ಬಡಾವಣೆಯ ಚಕ್ ದೇ ಪಕ್ಕದ ರಸ್ತೆಯಲ್ಲಿ ಸಾಗಿ, ಥೀಮ್ ಪಾರ್ಕ್ ಬಳಿ ರಸ್ತಿ ಮಾರ್ಗವಾಗಿ ನೂತನ ಕಾಲೇಜು ರಸ್ತೆಗೆ ಸೇರಿ, ವಿದ್ಯಾನಗರ ಕಾಫಿ ಡೇ ಬಳಿ ಬಲಕ್ಕೆ ತಿರುಗಿ, ವಿದ್ಯಾನಗರ 2ನೇ ಬಸ್ಸು ನಿಲ್ದಾಣದ ಬಳಿ ಎಡಕ್ಕೆ ತಿರುಗಿ, ಹದಡಿ ರಸ್ತೆಗೆ ಸೇರಿ, ಅಲ್ಲಿಂದ ನೇರವಾಗಿ ಜಿಲ್ಲಾ ಕ್ರೀಡಾಂಗಣವನ್ನು 5ಕೆ ಮ್ಯಾರಥಾನ್ ಸ್ಪರ್ಧಿಗಳು ತಲುಪುವರು.
- - - -6ಕೆಡಿವಿಜಿ5, 6.ಜೆಪಿಜಿ: ದಾವಣಗೆರೆಯಲ್ಲಿ ಗುರುವಾರ ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಪೊಲೀಸ್ ಇಲಾಖೆ ಮ್ಯಾರಥಾನ್ ಕುರಿತ ಪೋಸ್ಟರ್ ಬಿಡುಗಡೆ ಮಾಡಿದರು. -6ಕೆಡಿವಿಜಿ7.ಜೆಪಿಜಿ: ದಾವಣಗೆರೆಯಲ್ಲಿ ಗುರುವಾರ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್ ಪೊಲೀಸ್ ಇಲಾಖೆ ಮ್ಯಾರಥಾನ್ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.