ನವಲಗುಂದ: ಕರ್ನಾಟಕದಿಂದ ₹4.30 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ನೀಡಿದರೆ ನಮಗೆ ಮರಳಿ ಬರುತ್ತಿರುವುದು ಕೇವಲ ₹50,257 ಸಾವಿರ ಕೋಟಿ ಮಾತ್ರ. ನಾವು ಕೇಂದ್ರಕ್ಕೆ ₹100ಕೊಟ್ಟರೆ ನಮಗೆ ವಾಪಸ್ ಬರುವುದು ಬರೀ ₹13 ಇದು ಅನ್ಯಾಯವಲ್ಲವೇ? ಇದನ್ನು ಕೇಳಬಾರದಾ? ಈ ಕುರಿತು ಬಿಜೆಪಿ ಸಂಸದರು ಧ್ವನಿ ಎತ್ತಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯ ಕೇಳಿದರೆ ಸಿದ್ದರಾಮಯ್ಯ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆ ಎಂದು ಟೀಕಿಸುತ್ತಾರೆ. ಹಾಗಾದರೆ ಹಿಂದೆ ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಕಡಿಮೆ ತೆರಿಗೆ ಹಣ ಬಂದಿದೆ ಎಂದು ನಾವು ಭಿಕ್ಷುಕರಾ? ನಮಗೆ ತೆರಿಗೆ ಕೇಳಬೇಡಿ ಎಂದು ಹೇಳಿದರು. ಅದೇ ನಾವು ಈಗ ಕೇಳಿದರೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಇದ್ದಾಗ ಒಂದು ನಾಲಿಗೆ ಪ್ರಧಾನಿಯಾದ ಮೇಲೆ ಇನ್ನೊಂದು ನಾಲಿಗೆನಾ? ಈ ರೀತಿ ಇಬ್ಬಗೆಯ ನೀತಿ ಏಕೆ. ಎರಡೆರಡು ನಾಲಿಗೆ ಇರಬಾರದು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಸವಾದಿ ಶರಣರು ನುಡಿದಂತೆ ನಡೆದಂಥವರು. ನಮ್ಮ ಸರ್ಕಾರ ಕೂಡ ಅವರದೇ ಹಾದಿಯಲ್ಲಿ ಸಾಗುತ್ತಿದೆ. ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ನುಡಿದಂತೆ ನಡೆದ ಸರ್ಕಾರ ನಮ್ಮದು. ಶಕ್ತಿ ಯೋಜನೆಯಡಿ 160 ಕೋಟಿ ಮಹಿಳೆಯರು ಪ್ರವಾಸ ಮಾಡಿದ್ದಾರೆ. 1.20 ಕೋಟಿ ಕುಟುಂಬಗಳಿಗೆ ತಿಂಗಳಿಗೆ 4 ರಿಂದ 5 ಸಾವಿರ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ.5 ಕೆ.ಜಿ. ಅಕ್ಕಿ ಹೊರತಾಗಿ ₹170 ಹಣವನ್ನು ವಿತರಿಸಲಾಗುತ್ತಿದೆ. ಯುವ ನಿಧಿ ಯೋಜನೆಯಡಿ ಪದವೀಧರರಿಗೆ ₹3 ಸಾವಿರ ಹಾಗೂ ಡಿಪ್ಲೋಮಾ ಪಾಸಾದವರಿಗೆ ₹1500 ಹಣ ನೀಡಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಯಾವುದೇ ಬಗೆಯ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳು ಹಣ ಪಡೆಯುತ್ತಿದ್ದಾರೆ. ₹36 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
₹3,71,383 ಕೋಟಿ ಬಜೆಟ್ ನಲ್ಲಿ ₹52 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ. ಬಜೆಟ್‌ನಲ್ಲಿ ಕಳೆದ ಬಾರಿಗಿಂತ ₹43 ಸಾವಿರ ಕೋಟಿ ಹಣವನ್ನು ಹೆಚ್ಚಳ ಮಾಡಲಾಗಿದೆ ಎಂದರು. ಆದರೆ, ಬಿಜೆಪಿಗರು ಮಾತ್ರ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಅದೋಗತಿಗೆ ಸಾಗಿದೆ. ಅಭಿವೃದ್ಧಿ ಕೆಲಸಗಳಿಗೆ ದುಡ್ಡೇ ಇಲ್ಲ ಎಂದೆಲ್ಲ ಆರೋಪ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ. ಅದರೊಟ್ಟಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುವವರು ನವಲಗುಂದಕ್ಕೆ ಬಂದು ನೋಡಲಿ. ಇಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಅರಿತುಕೊಳ್ಳಲಿ ಎಂದು ಸವಾಲೆಸೆದರು.ಕೇಂದ್ರದ ಬಳಿ ಅಕ್ಕಿ ಇದ್ದರೂ ನಮಗೆ ಕೊಡಲಿಲ್ಲ. ಕೇಂದ್ರದವರಿಗೆ ನಾವೇನು ಪುಕ್ಕಟೆ ಅಕ್ಕಿ ಕೊಡಿ ಎಂದು ಕೇಳಿರಲಿಲ್ಲ. ದುಡ್ಡು ಕೊಡುತ್ತೇವೆ ಕೊಡಿ ಎಂದಿದ್ದೇವು. ಆದರೆ, ಅವರಿಗೆ ಬಡವರಿಗೆ ಅಕ್ಕಿ ಕೊಡುವುದು ಇಷ್ಟವಿರಲಿಲ್ಲ. ಹೀಗಾಗಿ, ಕೊಡಲಿಲ್ಲ. ಹಾಗಂತ ನಾವೇನು ಸುಮ್ಮನೆ ಕುಳಿತಿಲ್ಲ. ಅಕ್ಕಿ ಕೊಟ್ಟು, ಉಳಿದ 5 ಕೆಜಿ ಅಕ್ಕಿಗೆ ದುಡ್ಡು ಕೊಡುತ್ತಿದ್ದೇವೆ ಎಂದರು.
ಆರ್ಥಿಕ ಪರಿಸ್ಥಿತಿ ಬಗ್ಗೆ ನನಗೆ ಲೆಕ್ಕ ಕೇಳುತ್ತಾರೆ. ಇವರಿಗೇಕೆ ನಾನು ವರದಿ ಕೊಡಬೇಕು. ಬಿಜೆಪಿಯವರಿಗೆ ವರದಿ ಕೊಡುವ ಅವಶ್ಯಕತೆ ಇಲ್ಲ. ನನ್ನ ಮಾಲೀಕರು ನೀವು. ನಿಮಗೆ ಲೆಕ್ಕ ಕೊಡುತ್ತೇನೆ. ಮುಖ್ಯಮಂತ್ರಿಯಾಗಿ ಹೇಳುತ್ತೇನೆ. ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.