ಆನೇಕಲ್‌ ತಾಂಡಾ ಹುಡ್ಗ ಈಗ ಸಿವಿಲ್‌ ಜಡ್ಜ್‌!

KannadaprabhaNewsNetwork |  
Published : Feb 25, 2024, 01:50 AM IST
24ಎಚ್‌ಪಿಟಿ6- ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಂಡಾದ ನಿವಾಸಿ ವಿಜಯಕುಮಾರ ಎನ್‌. ಸಿವಿಲ್‌ ಜಡ್ಜ್‌ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದು, ಅವರ ತಾಯಿ ಮಂಜುಳಾ ಅವರು ಸಿಹಿ ತಿನಿಸಿದ ಕ್ಷಣ. | Kannada Prabha

ಸಾರಾಂಶ

ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಿಂದ 40 ಕಿಮೀ ಅಂತರದಲ್ಲಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೇಕಲ್‌ ತಾಂಡಾದ ವಿಜಯಕುಮಾರ್‌ ಎನ್‌. ಈಗ ಸಿವಿಲ್‌ ಜಡ್ಜ್‌ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಈ ತಾಂಡಾದಿಂದ ನ್ಯಾಯಾಧೀಶ ಹುದ್ದೆಗೇರಿದ ಮೊದಲ ವ್ಯಕ್ತಿ ಇವರು.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಿಂದ 40 ಕಿಮೀ ಅಂತರದಲ್ಲಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೇಕಲ್‌ ತಾಂಡಾದ ವಿಜಯಕುಮಾರ್‌ ಎನ್‌. ಈಗ ಸಿವಿಲ್‌ ಜಡ್ಜ್‌ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಈ ಮೂಲಕ ಇಡೀ ಆನೇಕಲ್‌ ತಾಂಡಾದಲ್ಲಿ ಸಂಭ್ರಮ ತಂದಿದ್ದಾರೆ.

ಹೌದು, ಭಾರತರತ್ನ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಬರೆದ ಸಂವಿಧಾನವೇ ತನಗೆ ನ್ಯಾಯಾಧೀಶರ ಪರೀಕ್ಷೆ ಬರೆಯಲು ಪ್ರೇರಣೆಯಾಗಿದೆ ಎಂದು ಹೇಳುವ ವಿಜಯಕುಮಾರ ಎನ್‌. ಅವರು, ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾರೂ ಹಸ್ತಕ್ಷೇಪ ಮಾಡದಂತೆ ಡಾ. ಅಂಬೇಡ್ಕರ್ ಅವರು ಬರೆದಿದ್ದಾರೆ. ಇದರಿಂದ ಪ್ರೇರಣೆಗೊಂಡು ಸತತ ಪರಿಶ್ರಮಪಟ್ಟು ಪರೀಕ್ಷೆ ಬರೆದು ಮೂರನೇ ಪ್ರಯತ್ನದಲ್ಲಿ ಯಶ ಕಂಡಿರುವೆ ಎಂದು ''''ಕನ್ನಡಪ್ರಭ''''ದೊಂದಿಗೆ ಸಂತಸ ಹಂಚಿಕೊಂಡರು.

ಆನೇಕಲ್‌ ತಾಂಡಾದ ದಿ. ನಾರಾಯಣ ನಾಯ್ಕ ಬಿ. ಹಾಗೂ ಮಂಜುಳಾ ದಂಪತಿ ಪುತ್ರ ವಿಜಯಕುಮಾರ ಪ್ರಾಥಮಿಕ ಶಿಕ್ಷಣವನ್ನು ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ವಲ್ಲಭಾಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದಾರೆ. ಪಿಯುಸಿ ಹಾಗೂ ಪದವಿಯನ್ನು ಹಗರಿಬೊಮ್ಮನಹಳ್ಳಿಯ ಗಂಗಾವತಿ ಭೀಮಪ್ಪ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಳ್ಳಾರಿಯ ವಿಎಸ್‌ಆರ್‌ ಲಾ ಕಾಲೇಜ್‌ನಲ್ಲಿ ಎಲ್‌ಎಲ್‌ಬಿಯಲ್ಲಿ ತೇರ್ಗಡೆ ಹೊಂದಿದ್ದು, ಬಳಿಕ ಮೂರು ಬಾರಿ ಜಡ್ಜ್‌ ಪರೀಕ್ಷೆ ಬರೆದಿದ್ದಾರೆ. ಈಗ ನ್ಯಾಯಾಧೀಶರಾಗಿಯೇ ಹೊರಹೊಮ್ಮಿದ್ದಾರೆ.

ಆನೇಕಲ್‌ ತಾಂಡಾದಲ್ಲಿ 1,200 ಮನೆಗಳಿದ್ದು, ಈ ತಾಂಡಾದಲ್ಲಿ ನಾಲ್ವರು ವಕೀಲರಿದ್ದಾರೆ. ಈಗ ವಿಜಯಕುಮಾರ ಎನ್‌. ಅವರು ಜಡ್ಜ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಹಿನ್ನೆಲೆಯಲ್ಲಿ ತಾಂಡಾ ವಾಸಿಗಳಲ್ಲೂ ಮಕ್ಕಳನ್ನು ಓದಿಸಲು ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ ಎಂದು ಅದೇ ತಾಂಡಾದ ವಾಸಿ ಪೊಲೀಸ್‌ ಪೇದೆ ಪರಶು ನಾಯ್ಕ ಅಭಿಪ್ರಾಯಪಟ್ಟರು.

ಮೃದುಸ್ವಭಾವದ ವಕೀಲ: ಬಳ್ಳಾರಿಯ ವಿಎಸ್‌ಆರ್‌ ಲಾ ಕಾಲೇಜ್‌ನಲ್ಲಿ ಕಾನೂನು ಪದವಿ ಓದಿ 2020-21ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಬಳಿಕ ಕಳೆದ ಎರಡು ವರ್ಷ ಹತ್ತು ತಿಂಗಳಿನಿಂದ ಬಳ್ಳಾರಿಯಲ್ಲಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೃದು ಸ್ವಭಾವದ ವಿಜಯಕುಮಾರ ಎನ್. ಅವರು ಹೆಚ್ಚು ಮಾತನಾಡದೇ ಕಾರ್ಯ ಸಾಧಿಸಿ ತೋರಿಸಿದ್ದಾರೆ. ಮೃದು ಸ್ವಭಾವದ ವಕೀಲ ಎಂದು ಅವರ ಗೆಳೆಯರ ಬಳಗದಲ್ಲಿ ಗುರುತಿಸಲಾಗುತ್ತಿದೆ.

ವಿಜಯಕುಮಾರ ಅವರ ತಂದೆ ನಿಧನ ಹೊಂದಿದರೂ ಇವರ ತಾಯಿ ಮಂಜುಳಾ ಅವರು ಛಲ ಬಿಡದೆ ಮಗನಿಗೆ ಒತ್ತಾಸೆಯಾಗಿ ನಿಂತಿದ್ದ ಹಿನ್ನೆಲೆಯಲ್ಲಿ ಇವರು ತಮ್ಮ ಕನಸು ಈಡೇರಿಸಲು ಸಾಧ್ಯವಾಗಿದೆ ಎಂದು ಇಡೀ ತಾಂಡಾದ ಜನರು ಕೊಂಡಾಡುತ್ತಿದ್ದಾರೆ. ವಿಜಯಕುಮಾರ ಅವರಿಗೆ ಒಬ್ಬ ಸಹೋದರ ಹಾಗೂ ಸಹೋದರಿ ಇದ್ದು, ಅಣ್ಣ ಜಡ್ಜ್‌ ಆಗಿರುವುದಕ್ಕೆ ಅವರೂ ಸಂತಸಪಡುತ್ತಿದ್ದಾರೆ. ಇಡೀ ತಾಂಡಾದಲ್ಲಿ ಈಗ ಸಂಭ್ರಮ ಮನೆ ಮಾಡಿದ್ದು, ತಾಂಡಾ ಹುಡುಗ ತೀರ್ಪು ನೀಡುವ ಹುದ್ದೆಗೇರಿರುವುದನ್ನು ಕೇಳಿ ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ್‌ ನಾಯ್ಕ ಅವರು ಕೂಡ ಸಂತಸ ಹಂಚಿಕೊಂಡಿದ್ದಾರೆ.ನನ್ನ ಪುತ್ರ ನ್ಯಾಯಾಧೀಶನಾಗಿರುವುದು ನನಗೆ ಖುಷಿ ತಂದಿದೆ. ಮುಂದೆ ನ್ಯಾಯದ ಪರ ನಿಂತು ಉತ್ತಮ ತೀರ್ಪು ನೀಡುತ್ತಾನೆ ಎಂಬ ಭರವಸೆ ನನಗೆ ಇದೆ. ಪರಿಶ್ರಮಕ್ಕೆ ಯಾವತ್ತೂ ಫಲ ಇದೇ ಎಂಬುದಕ್ಕೆ ವಿಜಯಕುಮಾರ ಪರೀಕ್ಷೆಯಲ್ಲಿ ಪಾಸಾಗಿರುವುದೇ ಸಾಕ್ಷಿ ಎಂದು ತಾಯಿ ಮಂಜುಳಾ ಹೇಳಿದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ದೇಶಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ. ನ್ಯಾಯಾಂಗದಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗದ ಹಸ್ತಕ್ಷೇಪ ಇಲ್ಲದಂತೆ ನೋಡಿಕೊಂಡಿದ್ದಾರೆ. ಈ ವ್ಯವಸ್ಥೆ ನನಗೆ ಹಿಡಿಸಿತು. ಹಾಗಾಗಿ ಸತತ ಪ್ರಯತ್ನ ಮಾಡಿ ಸಿವಿಲ್ ಜಡ್ಜ್‌ ಪರೀಕ್ಷೆಯಲ್ಲಿ ಪಾಸಾಗಿರುವೆ. ಸಂವಿಧಾನ ಹಾಗೂ ಕಾನೂನು ಪ್ರಕಾರ ನಡೆದುಕೊಳ್ಳುವೆ ಎಂದು ವಿಜಯಕುಮಾರ ಎನ್‌. ಹೇಳಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು