ಗದಗ: ಭಾರತೀಯ ಪ್ರಜೆಗಳಾದ ನಾವು ಭಾರತ ಒಂದು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿದ್ದೇವೆ. ಸಾಮಾಜಿಕ ನ್ಯಾಯ ರಾಷ್ಟ್ರದ ಎಲ್ಲ ಪ್ರಜೆಗಳಿಗೆ ಒದಗಿಸುವ ಸಂವಿಧಾನ ನಮ್ಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಮ್ಮ ದೇಶ ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಸತ್ತಾತ್ಮಕ ಆಡಳಿತ ಹೊಂದಿದ ಗಣರಾಜ್ಯ ಜನರಿಂದ-ಜನರಿಗಾಗಿ ಆಡಳಿತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಧ್ಯೇಯ ಮಂತ್ರ. ಈ ಧ್ಯೇಯ ಮಂತ್ರ ಸಾಕಾರಗೊಳಿಸಲು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು 1950ರ ಜ.26 ರಂದು ಅಂಗೀಕರಿಸಿ ನಮ್ಮ ದೇಶವನ್ನು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ ಗಣರಾಜ್ಯವೆಂದು ಘೋಷಣೆ ಮಾಡಲಾಯಿತು ಎಂದರು.
100 ವಸಂತಗಳ ಹಿಂದೆ 1924ರಲ್ಲಿ ನಮ್ಮ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯಲ್ಲಿ ಗಾಂಧಿ ಭಾರತ ಶತಮಾನೋತ್ಸವ ವರ್ಷ ಪೂರ್ಣ ಆಚರಿಸುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಶತಮಾನದ ಶ್ರೇಷ್ಠ ಉತ್ತಮ ಮಾನವ,ಅಂತಾರಾಷ್ಟ್ರೀಯ ಭಾವೈಕೈಯ ಸಂಕೇತ. ಅವರು ಅಹಿಂಸೆಯ ಬೆಳಕು, ಸತ್ಯದ ಥಳಕು, ಸಮಾನತೆ ಬಿತ್ತಿದ ಚೇತನ, ಗಾಂಧೀಜಿ ಯುಗ ಪುರುಷ, ಗಾಂಧೀಜಿ ಚರ್ಚಿಸುವ ವಿಷಯವಲ್ಲ ಹೃದಯದಲ್ಲಿಟ್ಟು ಧ್ಯಾನಿಸುವ ಜೀವ. ಗಾಂಧೀಜಿ ಭಾರತಕ್ಕೆ ಆತ್ಮವಾದರೆ ವಿಶ್ವಕ್ಕೆ ಮಹಾತ್ಮರಾಗಿದ್ದಾರೆ. ಅವರನ್ನು ಸ್ಮರಿಸಿ ನಮಿಸಿ ಅವರ ಸನ್ಮಾರ್ಗದಲ್ಲಿ ನಡೆಯಲು ಇಂದು ಪಣತೊಡುವ ಪರ್ವಕಾಲವಾಗಿದೆ ಎಂದು ತಿಳಿಸಿದರು.ಕನ್ನಡ ನಾಡು ಕಂಡ ಬಲು ಅಪರೂಪದ ರಾಜಕಾರಣಿ, ನಾಡು ಮೆಚ್ಚಿದ ಜನನಾಯಕ, ಸಹಕಾರ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲರ ಜನ್ಮ ಶತಮಾನೋತ್ಸವ ವರ್ಷಾಚರಣೆ ನಡೆಯುತ್ತಿರುವ ಪುಣ್ಯ ಪ್ರಸಂಗದಲ್ಲಿ ನಾವು ಶೋಷಣೆಮುಕ್ತ, ಸಮಾನತೆಯ ಸಮಾಜ ಕಟ್ಟುವಲ್ಲಿ ಕ್ರೀಯಾಶೀಲ ಪೂರ್ವಕ ತೊಡಗಿಸಿಕೊಳ್ಳಲು ಸಮರ್ಪಿತರಾಗಲು ದಾಪುಗಾಲುಗಳನ್ನೀಡೋಣ ಎಂದರು.
ಸಿಎಂ ಸಿದ್ದರಾಮಯ್ಯ ಅಭಿವೃದ್ಧಿಯ ಹರಿಕಾರರು ಹಾಗೂ ಹಸಿವು ಮುಕ್ತ ಕರ್ನಾಟಕ ಮಾಡಿದ ಮುಖ್ಯಮಂತ್ರಿ, ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದು 15.12.2024 ರಂದು ಜಿಲ್ಲೆಯ ರೋಣಕ್ಕೆ ಆಗಮಿಸಿ, ರೋಣ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ₹19689.97 ಲಕ್ಷ ವೆಚ್ಚದಲ್ಲಿ 11ಶಂಕು ಸ್ಥಾಪನೆ ಹಾಗೂ 5 ಉದ್ಘಾಟನೆ ಕಾಮಗಾರಿಗಳು ಸೇರಿದಂತೆ ಒಟ್ಟು 16 ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಅಭಿವೃದ್ಧಿಯ ದಾಪುಗಲನ್ನು ಇಡಲಾಗಿದೆ ಎಂದರು.
ಈ ವೇಳೆ ವಿಪ ಸದಸ್ಯ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಪಂ ಸಿಇಒ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿಸಿಎಫ್ ಸಂತೋಷ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರು ಇದ್ದರು.