ನುಡಿದಂತೆ ನಡೆದ ಸರ್ಕಾರ ನಮ್ಮದು: ಸತೀಶ ಜಾರಕಿಹೊಳಿ

KannadaprabhaNewsNetwork |  
Published : Jan 27, 2024, 01:21 AM IST
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ಕೆಡೆಟ್‌ಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗೌರವ ವಂದನೆ ಸ್ವೀಕರಿಸಿದರು | Kannada Prabha

ಸಾರಾಂಶ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಈ ಐದೂ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ. ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ-48 ಗಾಂಧಿ ನಗರದಿಂದ ರಾಣಿ ಚನ್ನಮ್ಮಾ ವೃತ್ತದವರೆಗೆ ಅಂದಾಜು₹ 350 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಿಸಲು ಯೋಜಿಸಲಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ವಿವಿಧ ಇಲಾಖೆಗಳ ಕಟ್ಟಡಗಳನ್ನು ತೆರವುಗೊಳಿಸಿ ಒಂದು ಸುಸಜ್ಜಿತವಾದ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡವನ್ನು ಅಂದಾಜು ₹ 200 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಕೊಳ್ಳಲಾಗುತ್ತಿದೆ ಎಂದರು.

ಹುದಲಿ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಇರುವ ಮ್ಯಾನುವಲ್ ರೈಲ್ವೆ ಗೇಟ್‌ನ್ನು, ರೈಲ್ವೆ ಮೇಲ್ಸೇತುವೆಯನ್ನಾಗಿ ಪರಿವರ್ತಿಸಲು ₹ 35 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುವುದು. ನಿಲಜಿಯಿಂದ ಸಾಂಬ್ರಾ ವಿಮಾನ ನಿಲ್ದಾಣವರೆಗೆ ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ₹ 58 ಕೋಟಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಶೀಘ್ರವಾಗಿ ಅನುಮೋದನೆ ಪಡೆದುಕೊಂಡು ಕಾರ್ಯಗತ ಗೊಳಿಸಲಾಗುವುದು. ಬೆಳಗಾವಿ ನಗದರಲ್ಲಿ ಒಂದು ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ವಿಸ್ತೃತವಾದ ಯೋಜನೆಯನ್ನು ₹ 60 ಕೋಟಿ ಅಂದಾಜು ಮೊತ್ತದ ಯೋಜನೆ ತಯಾರಿಸಲಾಗಿದ್ದು, ಪ್ರಸಕ್ತ 2023-24ನೇ ಸಾಲಿನಲ್ಲಿ ₹ 10 ಕೋಟಿಗಳಲ್ಲಿ ಕಾಮಗಾರಿಯನ್ನು ಕೈಗೊಂಡು ಮುಂಬರುವ ಸಾಲಿನಲ್ಲಿ ಹಂತ ಹಂತವಾಗಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಹಸಿವು ಮುಕ್ತ ಕರ್ನಾಟಕ ಇದು ನಮ್ಮ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 3.67 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 3.38 ಲಕ್ಷ ಹೆಕ್ಟೇರ್ ಅಂದರೆ ಶೇ.92ರಷ್ಟು ಬಿತ್ತನೆಯಾಗಿದೆ. 84 ಸಾವಿರ ರೈತರಿಗೆ ಉತ್ತಮ ಗುಣಮಟ್ಟದ 19,791 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲಾಗಿದೆ. ಜಿಲ್ಲೆಯಲ್ಲಿ 15 ತಾಲೂಕಿನಲ್ಲಿ 24 ವಾರಗಳಿಗೆ ಸಾಕಾಗುವಷ್ಟು 15 ಲಕ್ಷ ಟನ್ ಮೇವಿನ ಲಭ್ಯತೆ ಇದೆ. ಪಶು ಸಂಜೀವಿನಿ ವಾಹನದ ಮೂಲಕ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯನ್ನು ಒದಗಿಸಲು ಜಿಲ್ಲೆಯಲ್ಲಿ ಒಟ್ಟು 18 (ಸಹಾಯವಾಣಿ ಸಂಖ್ಯೆ-1962) ವಾಹನಗಳ ಮೂಲಕ ತಕ್ಷಣದ ಸೇವೆಯನ್ನು ಒದಗಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗದಿಂದ ಜಿಲ್ಲೆಯಲ್ಲಿ ಬೆಳಗಾವಿ ನಗರದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಸೇರಿ 19 ಸರ್ಕಾರಿ ಆರೋಗ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿಗಳು ಅಂದಾಜು ₹ 332 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ(ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ, ಶ್ರೀ ರಾಮೇಶ್ವರ, ವೀರಭದ್ರೇಶ್ವರ, ಸಾಲಾಪುರ ಹೀಗೆ ಒಟ್ಟು 9 ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಈ 9 ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ 6 ತಾಲೂಕುಗಳ 80,162 ಹೆಕ್ಟೇರ್, ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ 13,869 ಹೆಕ್ಟೇರ್ ಹಾಗೂ ಬಿಜಾಪೂರ ಜಿಲ್ಲೆಯ 44,375 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ