ನಾರಾಯಣ ಹೆಗಡೆ
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ ಕೊರತೆಯ ಪರಿಣಾಮ ಬೆಳೆಗಳ ಮೇಲೆ ಗಂಭೀರವಾಗಿ ಬೀರಿದ್ದರೂ, ಜಿಲ್ಲೆಯ ಯಾವ ತಾಲೂಕು ಕೂಡ ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಲಗಳಲ್ಲಿ ಬೆಳೆ ಹಸಿರಾಗಿ ಕಾಣಿಸುತ್ತಿದ್ದರೂ, ನಿರೀಕ್ಷಿತ ಇಳುವರಿ ಬಾರದಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಬಳಿಕ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಕೆಲವೆಡೆ ಬೆಳೆಗಳು ಹಸಿರಾಗಿ ನಿಂತಿದ್ದರೂ ಕಾಳು ಕಟ್ಟುವ ಹಂತದಲ್ಲಿ ತೇವಾಂಶದ ಕೊರತೆ ಎದುರಾಗಿದೆ. ಇದರಿಂದ ಹೊರನೋಟಕ್ಕೆ ಬೆಳೆ ಉತ್ತಮವಾಗಿರುವಂತೆ ಕಂಡರೂ ವಾಸ್ತವದಲ್ಲಿ ಇಳುವರಿ ಗಣನೀಯವಾಗಿ ಕುಸಿಯುವ ಆತಂಕ ರೈತರನ್ನು ಕಾಡುತ್ತಿದೆ.ಹಸಿರು ಹೊಲ... ಖಾಲಿ ಕೈ!: ಈ ಬಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೈತರು ಮೆಕ್ಕೆಜೋಳ, ಹತ್ತಿ, ಹೆಸರು, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ ಹಾಗೂ ಕೃಷಿ ಯಂತ್ರೋಪಕರಣಗಳ ವೆಚ್ಚ ಹೆಚ್ಚಾಗಿದೆ. ಕೆಲವು ಕಡೆ ಎರಡು ಬಾರಿ ಬಿತ್ತನೆ ಮಾಡಿ ರೈತರು ಕೈಸುಟ್ಟುಕೊಂಡಿದ್ದಾರೆ. ಆದರೂ ಬೆಳೆಗಳಿಗೆ ಅಗತ್ಯ ಹಂತದಲ್ಲಿ ಮಳೆ ಸಿಗದಿರುವುದರಿಂದ ರೈತರ ನಿರೀಕ್ಷೆ ಹುಸಿಯಾಗುವಂತಾಗಿದೆ.
ಮಳೆ ಕೊರತೆ, ಮಣ್ಣಿನ ತೇವಾಂಶದ ಅಭಾವ ಹಾಗೂ ಬೆಳೆಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಎದುರಾದ ಹವಾಮಾನ ವೈಪರೀತ್ಯವನ್ನು ಸಮಗ್ರವಾಗಿ ಪರಿಗಣಿಸಿ ಬೆಳೆ ನಷ್ಟದ ವಾಸ್ತವ ಸ್ಥಿತಿಯನ್ನು ಅಂದಾಜಿಸಬೇಕಾಗಿದೆ. ಕಚೇರಿ ದಾಖಲೆಗಳಲ್ಲಿ ಬೆಳೆ ಇರುವುದಾಗಿ ನಮೂದಿಸಿ, ರೈತನ ಕೈಗೆ ಸಿಗುವ ನೈಜ ಇಳುವರಿಯನ್ನು ಪರಿಗಣಿಸದಿದ್ದರೆ ನಷ್ಟ ಅನುಭವಿಸುವವರು ರೈತರೇ.
ಹಸಿರಾಗಿರುವ ಬೆಳೆ ಸಂಪೂರ್ಣವಾಗಿ ಉತ್ತಮ ಇಳುವರಿ ನೀಡುತ್ತದೆ ಎಂಬ ನಿಯಮವೇನಿಲ್ಲ. ಬೆಳೆ ಕಾಳು ಕಟ್ಟುವ ಸಂದರ್ಭದಲ್ಲಿ ಮಳೆ ಕೈಕೊಟ್ಟರೆ ಇಳುವರಿ ತೀವ್ರವಾಗಿ ಕುಸಿಯಬಹುದು. ಹೀಗಾಗಿ ಬೆಳೆ ಹಾನಿ ಸಮೀಕ್ಷೆಯನ್ನು ಕೇವಲ ಕಣ್ಣಿಗೆ ಕಾಣುವ ಬೆಳೆ ಸ್ಥಿತಿಯ ಆಧಾರದ ಮೇಲೆ ನಡೆಸದೆ, ಉತ್ಪಾದನಾ ನಷ್ಟವನ್ನೂ ಪರಿಗಣಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಸರ್ಕಾರಕ್ಕೆ ರೈತರ ಆಗ್ರಹ: ಜಿಲ್ಲಾಡಳಿತವು ತಾಲೂಕುವಾರು ಮಳೆ ಪ್ರಮಾಣ, ಬಿತ್ತನೆ ಪ್ರದೇಶ, ಬೆಳೆಗಳ ಪ್ರಸ್ತುತ ಸ್ಥಿತಿ, ತೇವಾಂಶದ ಕೊರತೆ ಹಾಗೂ ನಿರೀಕ್ಷಿತ-ವಾಸ್ತವ ಇಳುವರಿಯಲ್ಲಿನ ವ್ಯತ್ಯಾಸವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು. ಅಗತ್ಯವಿದ್ದರೆ ಮರು ಬೆಳೆ ಸಮೀಕ್ಷೆ ನಡೆಸಿ ನೈಜ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ಹಸಿರು ಕಾಣುವ ಹೊಲ ರೈತನ ಬದುಕು ಹಸಿರಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಹೊಲದಿಂದ ಮನೆಗೆ ತರುವ ಫಸಲೇ ರೈತನ ಬದುಕಿನ ನಿಜವಾದ ಅಳತೆ. ಈ ವಾಸ್ತವವನ್ನು ಸರ್ಕಾರ ಅರಿತು ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಸರ್ಕಾರವೇ ಹೇಳಿದಂತೆ ಮುಂದಿನ ಬರಗಾಲ ಪೀಡಿತ ಪ್ರದೇಶ ಪಟ್ಟಿಯಲ್ಲಾದರೂ ಜಿಲ್ಲೆಯ ಎಲ್ಲ ತಾಲೂಕುಗಳು ಸೇರ್ಪಡೆಯಾಗಲಿ ಎಂಬುದು ರೈತರ ಆಗ್ರಹವಾಗಿದೆ.ಸರ್ಕಾರ ಬಿಡುಗಡೆ ಮಾಡಿರುವ ಬರಗಾಲ ಪೀಡಿತ ಪಟ್ಟಿಯಲ್ಲಿ ಜಿಲ್ಲೆಯ ಯಾವ ತಾಲೂಕು ಸೇರಿಲ್ಲ. ಇದು ಜಿಲ್ಲೆಯ ರೈತರಿಗೆ ಸರ್ಕಾರ ಮಾಡಿರುವ ದೊಡ್ಡ ಅನ್ಯಾಯ. ಯಾವ ಮಾನದಂಡದ ಆಧಾರದಲ್ಲಿ ಬರ ಘೋಷಿಸಲಾಗಿದೆ ಎಂಬುದು ತಿಳಿಯಬೇಕು. ಬರ ಘೋಷಣೆ ಮಾಡದಿದ್ದರೆ ನಾವು ಸುಮ್ಮನಿರುವುದಿಲ್ಲ. ಸೋಮವಾರದಿಂದಲೇ ಹಂತಹಂತವಾಗಿ ರೈತರ ಹೋರಾಟ ಆರಂಭಿಸಲಾಗುತ್ತಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.