ಕಾಲುವೆಗಳಿಗೆ ನೀರು ಹರಿಸಲು ವಿಫಲ ಅಧಿಕಾರಿಗಳ ವಿರುದ್ಧ ಆಕ್ರೋಶ

KannadaprabhaNewsNetwork | Published : Aug 9, 2024 12:34 AM

ಸಾರಾಂಶ

ಮಳವಳ್ಳಿ ತಾಲೂಕಿನ ನಾಲೆಗಳಿಗೆ ಇದುವರೆಗೂ ನೀರು ಹರಿಸಿಲ್ಲ. ಜೂನ್ ಮತ್ತು ಜುಲೈ ನಲ್ಲಿ ಭತ್ತದ ಒಟ್ಟಲು ಹಾಕುವಂತೆ ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಭತ್ತದ ಬಿತ್ತನೆ ಮಾಡಲು ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿಸುತ್ತಿಲ್ಲ ಹಾಗೂ ಜನಪ್ರತಿನಿಧಿಗಳಿಗೂ ಜವಾಬ್ದಾರಿ ಇಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಭರವಸೆ ನೀಡಿದಂತೆ ಕಾಲುವೆಗಳಿಗೆ ನೀರು ಹರಿಸಲು ವಿಫಲರಾದ ಅಧಿಕಾರಿಗಳ ಕ್ರಮ ಖಂಡಿಸಿ ರೈತರು, ಪ್ರಾಂತ ರೈತ ಸಂಘದ ಸದಸ್ಯರು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಬೀಗ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ನೇತೃತ್ವದಲ್ಲಿ ಸೇರಿದ ರೈತರು ಹಾಗೂ ಸಂಘದ ಸದಸ್ಯರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎನ್.ಎಲ್.ಭರತ್ ರಾಜ್ ಮಾತನಾಡಿ, ಕೆಆರ್ ಎಸ್ ಜಲಾಶಯ ಭರ್ತಿಯಾಗಿ ನೀರು ತಮಿಳುನಾಡಿಗೆ ಹರಿಯುತ್ತಿದ್ದರೂ ತಾಲೂಕಿನ ನಾಲೆಗಳಿಗೆ ನೀರು ಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ನಿಗಮದ ಅಧಿಕಾರಿಗಳಿಗೆ ಕಾಮಗಾರಿಗಳ ಮೇಲೆ ಇರುವ ಪ್ರೀತಿ ರೈತರ ಮೇಲಿಲ್ಲ. ತಾಲೂಕಿನ ನಾಲೆಗಳಿಗೆ ಇದುವರೆಗೂ ನೀರು ಹರಿಸಿಲ್ಲ. ಜೂನ್ ಮತ್ತು ಜುಲೈ ನಲ್ಲಿ ಭತ್ತದ ಒಟ್ಟಲು ಹಾಕುವಂತೆ ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಭತ್ತದ ಬಿತ್ತನೆ ಮಾಡಲು ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿಸುತ್ತಿಲ್ಲ ಹಾಗೂ ಜನಪ್ರತಿನಿಧಿಗಳಿಗೂ ಜವಾಬ್ದಾರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಸೋಮುವಾರ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕೆ ಬಂದ ನಿಗಮದ ಅಧಿಕಾರಿಗಳು ತಕ್ಷಣದಿಂದಲೇ ನೀರು ಹರಿಸುವ ಭರವಸೆ ನೀಡಿ ಹೋರಾಟಗಾರರನ್ನು ಧಿಕ್ಕು ತಪ್ಪಿಸಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಾಬುಕೃಷ್ಣದೇವ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಭರತೇಶ್ ಕುಮಾರ್, ತಾಪಂ.ಇಒ ಶ್ರೀನಿವಾಸ್ ರೈತರ ಸಮಸ್ಯೆ ಆಲಿಸಿ ಭಾನುವಾರದಿಂದ ನೀರು ಹರಿಸುವ ಭರವಸೆ ನೀಡಿದರು.

ಪಿಎಸ್ಐ ಶ್ರವಣ ದಾಸರಡ್ಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕಲ್ಪಿಸಿದರು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಗ್ರಾಪಂ ಸದಸ್ಯ ಸಿದ್ದರಾಜು, ಮುಖಂಡರಾದ ಆರ್.ಸತೀಶ್, ವಿಜೇಂದ್ರ, ಪ್ರಸನ್ನ, ಶಿವಕುಮಾರ್, ಮಲ್ಲೇಶ್, ನಾಗಮಣಿ, ಮರಿಲಿಂಗೇಗೌಡ, ಅನಿಲ್, ಜಗದೀಶ್ ಭಾಗವಹಿಸಿದ್ದರು.

Share this article