ಪೊಲೀಸರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

KannadaprabhaNewsNetwork |  
Published : Feb 27, 2026, 02:30 AM IST
ಕಾರಟಗಿ ಪುರಸಭೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಕಾರಟಗಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಂಜುನಾಥ ಮೇಗೂರು ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು. ಪೊಲೀಸ್, ಜೆಸ್ಕಾಂ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕಾರಟಗಿ: ಪಟ್ಟಣದಲ್ಲಿ ಹೆಚ್ಚು ನಡೆಯುತ್ತಿರುವ ಕಳ್ಳತನ ನಿಯಂತ್ರಿಸಲು ವಿಫಲಗೊಂಡ ಪೊಲೀಸರ ಬಗ್ಗೆ, ಸಾಮಾನ್ಯ ಜನರಿಗೆ ವಿವಿಧ ನಮೂನೆಗಳ, ಕಾನೂನುಗಳ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಜೆಸ್ಕಾಂ ಅಧಿಕಾರಿಗಳ ಮೇಲೆ ಮತ್ತು ಪುರಸಭೆ ಆರೋಗ್ಯ ಅಧಿಕಾರಿಗಳ ಮೇಲೆ ಪುರಸಭೆ ಸದಸ್ಯರೂ ಒಕ್ಕೂರಲಿನಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆಗೆ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಂಜುನಾಥ ಮೇಗೂರು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಜನರು ಮತ್ತು ಪುರಸಭೆ ಸದಸ್ಯರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚಿಸಿದರು. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಳ್ಳತನ ಕುರಿತು ಮಹಿಳಾ ಸದಸ್ಯರು ಸೇರಿದಂತೆ ಎಲ್ಲರೂ ಚರ್ಚಿಸಿ, ಅಸಲಿಗೆ ಕಾರಟಗಿಯಲ್ಲಿ ಪೊಲೀಸರು ಇದ್ದಾರೋ ಇಲ್ಲವೋ ಎಂದು ಪ್ರಶ್ನೆ ಮಾಡಿದರು.

ಬ್ಯಾಂಕ್‌ಗಳಿಂದ ಗ್ರಾಹಕರು ಹಣ ತಂದು ವಾಹನದಲ್ಲಿಟ್ಟುಕೊಂಡು ಹೋಗುವ ವೇಳೆ ಬೇರೆಕಡೆ ಗಮನ ಸೆಳೆದು ದೋಚಿದ ಪ್ರಕರಣವನ್ನು ಸದಸ್ಯರು ಗಮನಕ್ಕೆ ತಂದರು. ಮಹಿಳಾ ಸದಸ್ಯರು ಧ್ವನಿಗೂಡಿಸಿ, ಇತ್ತೀಚಿಗೆ ಮಹಿಳೆಯ ಮಾಂಗಲ್ಯ ಸರ ಕಿತ್ತಿಕೊಂಡು ಹೋದ ಪ್ರಕರಣ ಪ್ರಸ್ತಾಪಿಸಿದರು.

ಎಎಸ್‌ಐ ವೆಂಕಟ ರೆಡ್ಡಿ ಸಭೆಯಲ್ಲಿ ಪ್ರಸ್ತಾಪವಾದ ವಿಷಯಗಳನ್ನು ಸಿಪಿಐ ಗಮನಕ್ಕೆ ತರುವುದಾಗಿ ಹೇಳಿದರು. ಆಗ ಸದಸ್ಯರು ಸಂಚಾರ ಸಮಸ್ಯೆಯ ಬಗ್ಗೆಯೂ ಗಮನಕ್ಕೆ ತಂದರು. ಮೊದಲು ಕಳ್ಳತನ ಪ್ರಕರಣಗಳನ್ನು ತಡೆಹಿಡಿಯಿರಿ, ಹಾಡುಹಗಲೇ ಬೃಹತ್ ಲಾರಿಗಳು, ಅಕ್ರಮ ಮರಳು, ಮರಂ ಸಾಗಾಟ ಮಾಡುತ್ತವೆ. ಅಕ್ರಮವಾಗಿ ಸಾಗಿಸುವ ಭರದಲ್ಲಿ ಅತಿ ವೇಗವಾಗಿ ಹೋಗುತ್ತವೆ. ಅವುಗಳನ್ನು ಸಾಗಿಸಲು ಹಿಂದೆ ಮತ್ತು ಮುಂದೆ ವಾಹನಗಳು ಬೇರೆ ಇರುತ್ತವೆ. ಇಂಥ ಕಳ್ಳಾಟಕ್ಕೆ ಬ್ರೇಕ್ ಬೀಳಬೇಕೆಂದು ಸದಸ್ಯರು ಹೇಳಿದರು.

ಜೆಸ್ಕಾಂಗೆ ಶಾಕ್: ಜೆಸ್ಕಾಂ ಅಧಿಕಾರಿ ಭರತ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡ ಸಭೆ, ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ನೂರೆಂಟು ರೂಲ್ಸ್ ಹೇಳಿತ್ತೀರಿ, ಜನರನ್ನು ಸುಮ್ಮನೆ ಅಲೆದಾಡಿಸುತ್ತೀರಿ, ಮೀಟರ್ ಬೇಕಾದರೆ ಹಣ ನೀಡಬೇಕೆಂದು ರಾಜಾರೋಷವಾಗಿ ಜನರಿಂದ ಹಣ ಕೀಳುತ್ತೀರಿ ಎಂದು ಸದಸ್ಯರಾದ ರಾಜಶೇಖರ ಸಿರಿಗೇರಿ, ಹಿರೇಬಸಪ್ಪ ಸಜ್ಜನ್ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಧೀನ ಪತ್ರ, ಪೂರ್ಣ ಪ್ರಮಾಣದ ಪತ್ರ ಎಂದು ಬೇರೆ ಬೇರೆ ವಿಂಗಡಿಸಿ ಜನರನ್ನು ಅಲೆದಾಡಿಸುತ್ತೀರಿ, ಇದು ಯಾವ ಸೀಮೆ ಕಾನೂನು ಎಂದು ಹಿರಿಯ ಸದಸ್ಯ ಎಚ್. ಈಶಪ್ಪ ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷ ಮಂಜುನಾಥ ಮೇಗೂರು ಸಹ ಧ್ವನಿಗೂಡಿಸಿ, ಒಸಿ, ಸಿಸಿ, ಸರ್ಟಿಫಿಕೆಟ್ ಎಂದು ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಅಲೆದಾಡಿಸಬೇಡಿ. ಸ್ಥಳೀಯರು ಎಂದು ಪುರಸಭೆ ಪ್ರಮಾಣಪತ್ರ ನೀಡಿದರೆ, ಗ್ಯಾರೇಜ್, ಶೆಡ್‌ಗಳಲ್ಲಿ ಹೋಟೆಲ್, ಅಂಗಡಿ, ರಸ್ತೆ ಬದಿ ವ್ಯಾಪಾರಿಗಳಿಗೆ ವಿದ್ಯುತ್ ಸಂಪರ್ಕ ನೀಡಿ. ಇನ್ನು ಹೊಸ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಜಾಸ್ತಿ ಹಣಕ್ಕೆ ಡಿಮ್ಯಾಂಡ್ ಮಾಡಬೇಡಿ ಎಂದು ಎಂದರು.

ಕುಡಿಯುವ ನೀರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸದಸ್ಯರು ಹೇಳಿದರು. ಸಮಸ್ಯಾತ್ಮಕ ವಾರ್ಡ್‌ಗಳಿಗೆ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆದು ಪೂರೈಕೆ ವ್ಯವಸ್ಥೆ ಕಲ್ಪಿಸಬೇಕು. ನೀರು ಪೂರೈಕೆ ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಆಯಾ ವಾರ್ಡ್ ಸದಸ್ಯರೊಂದಿಗೆ ನಿತ್ಯ ಸಮನ್ವಯ ಸಾಧಿಸಿ, ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಸಭೆ ಸೂಚಿಸಿತು.

ಘನತ್ಯಾಜ್ಯ ವಸ್ತುಗಳ ತೂಕ ಮಾಡುವ ಯಂತ್ರ ಖರೀದಿಸಲು, ಪುರಸಭೆಗೆ ಸೇರಿದ ಸಿಎ ಸೈಟ್‌ಗಳಿಗೆ ಬೋಡ್‌ಗಳನ್ನು ಹಾಕಲು, ಅಂಗವಿಕಲರಿಗೆ ತ್ರಿಚಕ್ರ ವಾಹನ ಖರೀದಿಸಲು, ಸದಸ್ಯರಿಗೆ ವೆಬ್‌ಸೈಟ್‌ನ ಮಾಹಿತಿ ನೀಡುವ ಕುರಿತು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ-ಸದಸ್ಯರನ್ನು ಆಯ್ಕೆ ಮಾಡಲು ದಿನಾಂಕ ನಿಗದಿ ಪಡಿಸಿದ ಕುರಿತು ಸಭೆ ಒಪ್ಪಿಗೆ ನೀಡಿತು.

ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್ ವಿಷಯಗಳನ್ನು ಪ್ರಸ್ತಾಪಿಸಿದರು. ಉಪಾಧ್ಯಕ್ಷೆ ಸುಜಾತಾ ಭಜಂತ್ರಿ, ಸದಸ್ಯರಾದ ಜಿ. ಅರುಣಾ ದೇವಿ, ಸುಪ್ರಿಯಾ ಅರಳಿ, ಸೌಮ್ಯಾ ಕಂದಗಲ್, ರೇಖಾ ಆನೆಹೊಸೂರು, ಲಕ್ಷ್ಮಿ ಎತ್ತಿನಮನಿ, ಕೆ.ಎಚ್. ಸಂಗನಗೌಡ, ರಾಮಣ್ಣ, ದೊಡ್ಡಬಸವರಾಜ ಬೂದಿ, ವೀರೇಶ ಮುದುಗಲ್, ಸುರೇಶ ಭಜಂತ್ರಿ, ಆನಂದ, ಸೋಮಶೇಖರ ಬೇರಗಿ, ಸಿದ್ದಪ್ಪ ಬೇವಿನಾಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ದಾರಿಯಲ್ಲಿ ನಡೆದರೆ ಮಾತ್ರ ಸುಖಿ ಜೀವನ: ದೊಡ್ಡನಗೌಡ ಪಾಟೀಲ
ಒಂದು ಗುಂಟೆ ಜಮೀನು ಕೂಡ ಪರಭಾರೆ ಆಗಿಲ್ಲ: ದೇಸಾಯಿ