ಯಲಬುರ್ಗಾ: ಯಲಬುರ್ಗಾದ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಆಸ್ತಿ ಪರಭಾರೆ ಮಾಡಲಾಗಿದೆ ಎಂಬ ಕೆಲವು ಭಕ್ತರ ಆರೋಪಕ್ಕೆ ಮಠದ ಪದಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆಸ್ತಿಯ ದಾಖಲೆಗಳು ನಮ್ಮಲ್ಲಿವೆ. ಕೆಲವು ಭಕ್ತರಿಗೆ ಈ ಬಗ್ಗೆ ಸಂಶಯವಿದ್ದರೆ ಸಂಬಂಧಿಸಿದ ದಾಖಲೆಗಳನ್ನು ಕೊಡುತ್ತೇವೆ. ಮಠದ ಎಲ್ಲ ಭಕ್ತರು ಒಂದೇ. ಮಠದ ಪರಂಪರೆ ಮತ್ತು ಸ್ವಾಮೀಜಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಬಿಡಬೇಕು ಎಂದರು.
ಅಂದಯ್ಯ ಕಳ್ಳಿಮಠ ಮಾತನಾಡಿ, ಮಠಕ್ಕೆ ಭಕ್ತರು ಆಸ್ತಿ ದಾನ ಮಾಡಲು ಬಂದಾಗ, ಮಠಕ್ಕೆ ಆಸ್ತಿ ದಾನ ಮಾಡಬೇಡಿ ಎಂದು ಶ್ರೀಗಳು ಅವರಿಗೆ ಬುದ್ಧಿವಾದ ಹೇಳಿ ಕಳುಹಿಸಿದ ಉದಾಹರಣೆ ಸಾಕಷ್ಟಿವೆ. ಇದನ್ನು ತಿಳಿದುಕೊಳ್ಳಬೇಕು ಎಂದರು.ಮಲ್ಲೇಶಗೌಡ ಮಾಲಿಪಾಟೀಲ್ ಮಾತನಾಡಿ, ಮಠದ ಸ್ವಾಮೀಜಿಗಳ ವಿರುದ್ಧವಾಗಿ ಮಾತನಾಡುವ ಅವರೆಲ್ಲರೂ ಮಠದ ಭಕ್ತರೇ. ಮುನಿಸು ಬಿಟ್ಟು ಎಲ್ಲರೂ ಒಂದಾಗಿ ಹೋಗಬೇಕು. ಸ್ವಾಮೀಜಿಗಳ ಬಗ್ಗೆ ಮನಬಂದಂತೆ ಮಾತನಾಡುವುದು ಸರಿಯಲ್ಲ. ಸ್ವಾಮೀಜಿಗಳು ಮಠದ ಅಭಿವೃದ್ಧಿ, ಶಿಕ್ಷಣ ಸಂಸ್ಥೆಗಳ ನಿರ್ಮಾಣ ಸೇರಿ ಹಲವು ಕಾರ್ಯಗಳನ್ನು ಮಾಡಿದ್ದಾರೆ ಎಂದರು.ಕೆಲವರು ಮಠದ ಶ್ರೀಗಳ ವಿರುದ್ಧ ರಾತ್ರೋರಾತ್ರಿ ಸಭೆ ನಡೆಸಿದಾಗ, ಎಸಿ, ತಹಸೀಲ್ದಾರ್ ಅವರು ಖಾಸಗಿ ಸಭೆಗೆ ಆಗಮಿಸಿ ಅಹವಾಲು ಸ್ವೀಕರಿಸಲು ಬಂದಿರುವುದು ನೋಡಿದರೆ, ಇದರ ಹಿಂದೆ ಕಾಣದ ಕೈಗಳ ಪ್ರಾಬಲ್ಯವಿದೆ ಎಂದು ಗೋಷ್ಠಿಯಲ್ಲಿ ಭಕ್ತರು ಆರೋಪಿಸಿದರು.ಈ ಸಂದರ್ಭ ಪ್ರಮುಖರಾದ ಸಂಗಪ್ಪ ಕರಂಡಿ, ಅಮರಪ್ಪ ಕಲಬುರ್ಗಿ, ಶಿವು ರಾಜೂರ, ವೀರಣ್ಣ ಉಳ್ಳಾಗಡ್ಡಿ, ಮುತ್ತಪ್ಪ ಸಾದರ, ಶರಣಪ್ಪ ಓಜನಹಳ್ಳಿ ಇದ್ದರು.ಭಕ್ತರಿಗೆ ಜೀವ ಬೆದರಿಕೆ ಬಗ್ಗೆ ಸಾಬೀತಾಗಲಿ: ಪ್ರಸನ್ನರೇಣುಕ
ಮಠ ಮತ್ತು ಸ್ವಾಮೀಜಿಗಳ ವಿರುದ್ಧ ಕೆಲವು ಭಕ್ತರು ಮಾಡುತ್ತಿರುವ ಷಡ್ಯಂತ್ರದ ಬಗ್ಗೆ ದಾಖಲೆ ಸಮೇತ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಅಧಿಕೃತ ದಾಖಲೆಗಳಿದ್ದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಯಾಕೆ? ಚೌಕಿಮಠದ ಜಮೀನಿನಲ್ಲಿ ಸ್ವಾಮೀಜಿಗಳಿಗೆ ತಿಳಿಸದೇ ಅಸಹಜವಾಗಿ ಮೃತಪಟ್ಟಿದ್ದ ಶವ ಹೂಳುವುದು ಕಾನೂನುಬಾಹಿರ. ಇದನ್ನು ವಿರೋಧ ಮಾಡಿದರೆ, ಅದನ್ನು ಕೇಳಬೇಡಿ ಅನ್ನುತ್ತಾರೆ. ಇದಕ್ಕೆಲ್ಲ ಯಾರ ಹೊಣೆ? ಶ್ರೀಮಠದ ವಂಶಪಾರಂಪರ್ಯವುಳ್ಳ ಪೀಠಾಧಿಪತಿಗಳ ಹೆಸರಿನಲ್ಲಿ ಮಠದ ಆಸ್ತಿ ಇರುತ್ತದೆ. ಈ ವಿಷಯ ಗೊತ್ತಿದ್ದೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸ್ವಯಂಘೋಷಿತ ಟ್ರಸ್ಟ್ ಮಾಡಿಕೊಂಡು ಮಠಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದರು.