ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀ ಜಯದೇವ ವೃತ್ತದಲ್ಲಿ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡಿಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪರಿಷತ್ ಪದಾಧಿಕಾರಿಗಳು, ಸಮಾಜ ಬಾಂಧವರು ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಇದಕ್ಕೂ ಮುನ್ನ ಜಯದೇವ ವೃತ್ತದಲ್ಲಿ ಮಾತನಾಡಿದ ಪರಿಷತ್ ಪದಾಧಿಕಾರಿಗಳು, ಭಾರತ ಸೌಹಾರ್ದತೆಯ ನೆರವಾಗಿದ್ದು, ಇಲ್ಲಿ ವೈದಿಕಶಾಹಿ ಸೃಷ್ಟಿಸಿದ್ದ ಅಸಮಾನತೆಯ ವಿರುದ್ಧ ಬುದ್ಧ ಗುರು ಶಾಂತಿ, ಸಹಬಾಳ್ವೆ ತತ್ವಗಳ ಮೂಲಕ ಜೀವಪರ ಆಶಯ ಬಿತ್ತರಿಸಿದ್ದರು. ಬುದ್ಧ ಗುರುವಿನ ತತ್ವ, ಚಿಂತನೆ ಇಂದಿಗೂ ಜಗತ್ತಿಗೆ ದಾರಿದೀಪವಾಗಿದೆ. ಬುದ್ಧನ ತರುವಾದ ಮಹತ್ವದ ಸಾಮಾಜಿಕ ಕ್ರಾಂತಿಗೆ ಮುಂದಾಗಿ, ಸಮ ಸಮಾಜಕ್ಕೆ ಮುನ್ನುಡಿ ಬರೆದವರು 12ನೇ ಶತಮಾನದ ಬಸವಾದಿ ಶರಣ-ಶರಣೆಯರು ಎಂದರು.ಹನ್ನೆರಡನೇ ಶತಮಾನದಲ್ಲೇ ಬಸವ ಗುರು ರೂಪಿಸಿದ ಜೀವಪರ ನೆಲೆಯ ಲಿಂಗಾಯತ ಧರ್ಮವು ತನ್ನದೇ ಆದ ಮಹತ್ವ ಪಡೆದುಕೊಂಡು ಬಂದಿದೆ. ಬವರ ಪರ ಮಠಾಧೀಶರ ಏಕತೆ ಸಹಿಸಲಾಗದ ಮತ್ತು ವೈದಿಕಶಾಹಿಯ ಗುಲಾಮರಂತೆ ವರ್ತಿಸುತ್ತಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಬಸವ ಪರವಾದ ಲಿಂಗಾಯ ಮಠಾಧೀಶರಿಗೆ ಅಸಂವಿಧಾನಿಕ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಅಕ್ಷಮ್ಯ. ಲಿಂಗಾಯತ ಮಠಾಧೀಶರಿಗೆ ನಿಂದಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಕಿಡಿಕಾರಿದರು.
ಭಾರತೀಯ ಸಮಾಜದಲ್ಲಿ ಲಿಂಗಾಯತ ಮಠಾಧೀಶರು ಗೌರವಯುತ ಸ್ಥಾನಮಾನ ಪಡೆದಿದ್ದು, ಈ ನೆಲದ ಸೌಹಾರ್ದತೆ, ಸಂವಿಧಾನ ಪಾಲಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಇಂತಹ ಗೌರವಯುತ ಸ್ಥಾನಮಾನದ ಮಠಾಧೀಶರಿಗೆ ಅವಾಚ್ಯವಾಗಿ ನಿಂದಿಸಿ, ಸಾಮಾಜಿಕ ಶಾಂತಿಗೆ ಧಕ್ಕೆ ತಂದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ದೇಶದಿಂದಲೇ ಗಡೀಪಾರು ಮಾಡಬೇಕು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.