ಈಚನೂರು ಕೆರೆಗೆ ನೀರು ಹರಿಸದಿದ್ದರೆ ಪ್ರತಿಭಟನೆ

KannadaprabhaNewsNetwork |  
Published : Oct 14, 2025, 01:00 AM IST
ತಿಪಟೂರು ಮತ್ತು ಈಚನೂರು ಕೆರೆಗೆ ನೀರು ಹರಿಸದಿದ್ದರೆ ಪ್ರತಿಭಟನೆ : ಕೆ.ಟಿ. ಶಾಂತಕುಮಾರ್ | Kannada Prabha

ಸಾರಾಂಶ

ಮುಂದಿನ ಹದಿನೈದು ದಿನಗಳೊಳಗೆ ಹೇಮಾವತಿ ನೀರು ಹರಿಸಬೇಕು ಇಲ್ಲವಾದಲ್ಲಿ ಜೆಡಿಎಸ್‌ನಿಂದ ಅ.27ರ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ ತಿಪಟೂರು

ಶಾಸಕರು, ನಗರಾಡಳಿತ ಹಾಗೂ ತಾಲೂಕು ಆಡಳಿತ ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆ ಹಾಗೂ ತಾಲೂಕಿನ ಬಹುತೇಕ ಕೆರೆಗಳಿಗೆ ಹೇಮಾವತಿ ನೀರು ತುಂಬಿಸದೆ ಇರುವುದರಿಂದ ಮುಂದಿನ ಬೇಸಿಗೆಗೆ ನಗರ ಮತ್ತು ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದ್ದು, ಮುಂದಿನ ಹದಿನೈದು ದಿನಗಳೊಳಗೆ ಹೇಮಾವತಿ ನೀರು ಹರಿಸಬೇಕು ಇಲ್ಲವಾದಲ್ಲಿ ಜೆಡಿಎಸ್‌ನಿಂದ ಅ.27ರ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಚಾನೆಲ್‌ನಿಂದ ೨-೩ತಿಂಗಳಿನಿಂದಲೂ ಹರಿಯುತ್ತಿರುವ ನೀರನ್ನು ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಏಕೈಕ ಕೆರೆ ಈಚನೂರು ಕೆರೆಗೆ ತುಂಬಿಸಿಲ್ಲ. ಜೊತೆಗೆ ನಗರದ ಅಮಾನಿಕೆರೆ ಹಾಗೂ ತಾಲೂಕಿನ ಬಹುತೇಕ ಕೆರೆಗಳಿಗೂ ನೀರು ತುಂಬಿಸಿಲ್ಲ. ನಗರಕ್ಕೆ ತಾತ್ಕಾಲಿಕವಾಗಿ ಚಾನಲ್‌ನಿಂದ ಹರಿಯುತ್ತಿರುವ ನೀರನ್ನು ಮೋಟಾರ್‌ಗಳಿಂದ ಎತ್ತಿ ಮನೆಗಳ ನಲ್ಲಿಗಳಿಗೆ ಬಿಡಲಾಗುತ್ತಿದೆ. ಚಾನಲ್‌ನಲ್ಲಿ ನೀರು ಹರಿಯುವುದನ್ನು ಯಾವಾಗ ಬೇಕಾದರೂ ನಿಲ್ಲಿಸಬಹುದಾದ್ದರಿಂದ ನಗರದ ಜನತೆಗೆ ನೀರು ಸಿಗದೆ ಮುಂದಿನ ಬೇಸಿಗೆ ದಿನಗಳಲ್ಲಿ ನಗರಕ್ಕೆ ನೀರಿಗೆ ಹಾಹಾಕಾರ ಉಂಟಾಗಲಿದ್ದು ಶಾಸಕರಿಗಾಗಲಿ, ನಗರಸಭೆ ಪೌರಾಯುಕ್ತರಾಗಲಿ ಈ ಬಗ್ಗೆ ಯಾವೊಂದು ಕ್ರಮವಹಿಸದಿರುವುದು ಜನರ ಮೇಲಿನ ಕಾಳಜಿ ಅವರಿಗೆ ಎಷ್ಟಿದೆ ಎಂಬುದು ಅರ್ಥವಾಗುತ್ತಿದೆ. ಹೇಮೆ ನೀರು ಹರಿಯುವಾಗಲೇ ಕೆರೆಗಳಿಗೆ ನೀರು ತುಂಬಿಸಬೇಕಿದ್ದರೂ ಶಾಸಕರು ಕೆರೆಗಳನ್ನು ಆಧುನೀಕರಣ ಮಾಡುತ್ತೇನೆಂಬ ನೆಪವೊಡ್ಡಿ ನೀರು ತುಂಬಿಸಿಲ್ಲ. ಅಲ್ಲದೆ ನಗರಕ್ಕೆ ನೊಣವಿನಕೆರೆಯಿಂದ ನೀರು ತರುತ್ತೇನೆಂದು ಹೇಳುತ್ತಿರುವುದು ಬಿಟ್ಟರೆ ಇಲ್ಲಿಯವರೆಗೂ ಯಾವೊಂದು ಕೆಲಸಗಳು ನಡೆದಿಲ್ಲ. ಈ ಬಗ್ಗೆ ಹಲವಾರು ಬಾರಿ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರೂ ಗಮನ ನೀಡಿಲ್ಲ. ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕೇವಲ ತುಮಕೂರಿಗೆ ಮಾತ್ರ ಸೀಮಿತರಾಗಿದ್ದಾರೆ. ಆದ್ದರಿಂದ ಮುಂದಿನ ಹದಿನೈದು ದಿನಗಳೊಳಗೆ ತಿಪಟೂರು ಅಮಾನಿಕೆರೆ ಮತ್ತು ಈಚನೂರು ಕೆರೆಗೆ ನೀರು ಬಿಡದಿದ್ದರೆ ನಗರಸಭೆ ಅಥವಾ ತಿಪಟೂರು ಅಮಾನಿಕೆರೆ ಆವರಣದಲ್ಲಿ ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ತಾ. ಅಧ್ಯಕ್ಷ ನಟರಾಜು, ನಗರಾಧ್ಯಕ್ಷ ರಾಜು ಕಂಚಾಘಟ್ಟ, ರಾಜ್ಯ ಸಂಘಟನ ಕಾರ್ಯದರ್ಶಿ ನಟರಾಜು, ಮುಖಂಡರಾದ ಲೋಕೇಶ್, ಈಶ್ವರ್, ನಾಗರಾಜು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ