ಹುಬ್ಬಳ್ಳಿ: ತಮಿಳಿನಿಂದಲೇ ಕನ್ನಡ ಭಾಷೆ ಹುಟ್ಟಿರುವುದು ಎಂದು ಚಿತ್ರನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಖಂಡಿಸಿ ನಗರದಲ್ಲಿ ಬುಧವಾರ ಡಾ. ರಾಜಕುಮಾರ ಅಭಿಮಾನಿಗಳ ಬಳಗ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಬಳಗದ ಉಪಾಧ್ಯಕ್ಷ ಶಿವಾನಂದ ಮುತ್ತಣ್ಣವರ, ಕನ್ನಡ ಭಾಷೆಯ ಬಗ್ಗೆ ಅರಿವಿಲ್ಲದೇ ಏನೇನೋ ಹೇಳಿಕೆಯನ್ನು ಚಿತ್ರನಟ ಕಮಲ್ ಹಾಸನ್ ನೀಡಿರುವುದು ಖಂಡನೀಯ. ಕನ್ನಡದ ಇತಿಹಾಸವನ್ನು ಮೊದಲು ಅರಿತುಕೊಳ್ಳಬೇಕು. ಕಮಲ್ ಹಾಸನ್ ಅವರ ಬಗ್ಗೆ ಅಪಾರ ಗೌರವವಿದೆ. ಆದಕಾರಣ ಇಂಥ ಹೇಳಿಕೆ ನೀಡಬಾರದು ಎಂದರು.
ಕನ್ನಡಿಗರ ಭಾವನೆಗೆ ಧಕ್ಕೆಯುಂಟು ಮಾಡಿರುವುದಕ್ಕೆ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ತಮಿಳು ಚಿತ್ರಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ನಡುವೆ ಚಿತ್ರ ನಟ ಶಿವರಾಜಕುಮಾರ, ದ್ರುವ ಸರ್ಜಾ ಸೇರಿದಂತೆ ವಿವಿಧ ಹಿರಿಯ ನಟರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಿರುತೆರೆ ನಟ ಮಡೆನೂರ ಮನು ಎಂಬಾತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಜತೆಗೆ ಉಪನಗರ ಠಾಣೆಯಲ್ಲಿ ಮಡೆನೂರ ಮನು ವಿರುದ್ಧ ದೂರು ಸಲ್ಲಿಸಲಾಗಿದೆ.