ಹಾವೇರಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಡಿಡಿಪಿಐ ಮೋಹನ್ ದಂಡಿನ್ ಹೇಳಿದರು.
ಪಿಎಂಶ್ರೀ ಶಾಲೆಯಲ್ಲಿ ಟಿಇಟಿ, ಸಿಇಟಿ ಮುಗಿಸಿದ ಶಿಕ್ಷಕರೆ ಇದ್ದು, 20 ಜನ ಸಿಬ್ಬಂದಿಗಳು ಇದ್ದಾರೆ. ಈ ಶಾಲೆಯಲ್ಲಿ ಕಲಿಯುವ ಮಗು ಉರ್ದು ಜತೆಗೆ ಆಂಗ್ಲ ಭಾಷೆಯನ್ನು ಕಲಿಯುತ್ತದೆ. ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ಕೊಡುತ್ತೇವೆ. ಜತೆಗೆ ಹಾಲು, ಮೊಟ್ಟೆ, ಪುಸ್ತಕ, ಸಮವಸ್ತ್ರ, ಶೂ ಸಾಕ್ಸ್, ಶಿಷ್ಯವೇತನ ಎಲ್ಲ ಸೌಲಭ್ಯ ಒದಗಿಸುತ್ತೇವೆ. ದ್ವಿಭಾಷಾ ಕಲಿಕೆ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.
ತಾಯಂದಿರು ಮಕ್ಕಳ ಅಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಹಿಂಸಾತ್ಮಕ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೋಷಕರು ಮಕ್ಕಳ ಬೆಳವಣಿಗೆ ಬಗ್ಗೆ ಗಮನ ಹರಿಸಬೇಕು. ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ನೂರು ಸಲ ಯೋಚಿಸಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮದುವೆ ಮಾಡದೆ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಕಾರಿ ಶ್ರೀನಿವಾಸ ಬಿ.ಮಾತನಾಡಿ, ಸರ್ಕಾರ ರಾಜ್ಯದ 15 ಜಿಲ್ಲೆಗಳಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುತ್ತಿದೆ. 490 ಮಕ್ಕಳು ಈ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಐಎಎಸ್, ಐಪಿಎಸ್, ವೈದ್ಯರು, ಎಂಜಿನಿಯರ್, ಜನನಾಯಕರನ್ನಾಗಿ ಮಾಡುವ ಶಕ್ತಿ ತಾಯಂದಿರಿಗೆ ಇದೆ. ಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆ ಬಿಡಿಸಬಾರದು. ದೊಡ್ಡ ವ್ಯಕ್ತಿಯಾಗಿ ಬೆಳೆಸಬೇಕು. ಕ್ರಿಯಾಶೀಲ ಶಿಕ್ಷಕ ವರ್ಗ ಇದ್ದು, ಶಿಕ್ಷಕರ ಸದುಪಯೋಗ ಮಕ್ಕಳು ಪಡೆದುಕೊಳ್ಳಬೇಕು ಎಂದರು.