ಕನ್ನಡಪ್ರಭ ವಾರ್ತೆ, ತುಮಕೂರುಮಾರಕಾಸ್ತ್ರಗಳಿಂದ ಗೋವುಗಳ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿರುವ ದುರುಳರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.ಜಿಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ಗೋವುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.ಮುಖಂಡ ಕೋರಿ ಮಂಜುನಾಥ್ ಮಾತನಾಡಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ, ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇವರಿಗೆ ಹರಕೆ ಬಿಟ್ಟಿದ್ದ ಗೂಳಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಕೃತ್ಯ ಖಂಡನೀಯ. ಗೋವುಗಳನ್ನು ಪೂಜಿಸುವ ಹಿಂದೂಗಳ ಭಾವನೆಗೆ ಈ ಪ್ರಕರಣಗಳು ನೋವು ಉಂಟು ಮಾಡಿವೆ. ದುಷ್ಕೃತ್ಯ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಮುಖಂಡ ಪ್ರದೀಪ್ ಮಾತನಾಡಿ, ನಮ್ಮ ಪೂಜ್ಯನೀಯ, ನಿರುಪದ್ರವಿ ಗೋವಿನ ಕೆಚ್ಚಲು ಕೊಯ್ದಿದ್ದಾರೆ, ಹರಕೆ ಗೂಳಿಯ ಮೇಲೆ ಅಮಾನುಷ ಹಲ್ಲೆ ಮಾಡಿದ್ದಾರೆ. ಈ ಪ್ರಕರಣಗಳು ಗೋವನ್ನು ಪೂಜಿಸುವ ಹಿಂದೂಗಳ ಭಾವನೆ ಧಕ್ಕೆ ಮಾಡಿ, ನೋವು ಉಂಟು ಮಾಡುವ ಉದ್ದೇಶದ ಪೂರ್ವಯೋಜಿತ ಕೃತ್ಯ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು, ಕೃತ್ಯದ ಹಿಂದಿರುವ ಎಲ್ಲರನ್ನೂ ಬಂಧಿಸಿ ಶಿಕ್ಷೆಗೊಳಪಡಿಸಬೇಕು, ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಮಾತನಾಡಿ, ನಾವು ಹೆತ್ತ ತಾಯಿ ಹಾಗೂ ಹಸುವಿನ ಹಾಲು ಕುಡಿದು ಬೆಳೆದವರು. ಗೋವು ನಮಗೆ ತಾಯಿ ಸಮಾನ, ಗೋವುಗಳನ್ನು ತಾಯಿಯಂತೇ ಗೌರವಿಸುವ ಸಂಸ್ಕೃತಿ ನಮ್ಮದು. ಗೋವುಗಳ ಬಗ್ಗೆ ಪೂಜ್ಯ ಭಾವನೆ ಹೊಂದಿರುವ ನಮಗೆ ಗೋವುಗಳ ಮೇಲಿನ ಹಲ್ಲೆ ಸಹಿಸಲು ಸಾಧ್ಯವಿಲ್ಲ. ಗೋವುಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ಕೊಲೆ ಯತ್ನದ ಸೆಕ್ಷನ್ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿವಿಧ ಸಂಘಟನೆಗಳ ಮುಖಂಡರಾದ ಜಿ.ಕೆ.ಶ್ರೀನಿವಾಸ್, ನಾಗೇಂದ್ರಪ್ರಸಾದ್, ಜಿ.ಎಸ್.ಬಸವರಾಜು, ಸಿದ್ದೇಶ್, ಉಮೇಶ್, ಭಾಸ್ಕರಾಚಾರ್, ಬಿಜೆಪಿ ಮುಖಂಡರಾದ ಎಸ್.ಶಿವಪ್ರಸಾದ್, ಬ್ಯಾಟರಂಗೇಗೌಡ, ಟಿ.ಹೆಚ್. ಹನುಮಂತರಾಜು, ಸಂದೀಪ್‌ಗೌಡ, ಭೈರಣ್ಣ, ವಿಷ್ಣುವರ್ಧನ್, ಸತ್ಯಮಂಗಲ ಜಗದೀಶ್, ಚೇತನ್, ಧನುಷ್, ಬನಶಂಕರಿ ಬಾಬು, ಜ್ಯೋತಿ ತಿಪ್ಪೇಸ್ವಾಮಿ, ರಾಮಚಂದ್ರರಾವ್, ವೆಂಕಟೇಶಾಚಾರ್, ಶಬ್ಬೀರ್ ಅಹ್ಮದ್, ಹನುಮಂತರಾಜು, ಪ್ರಮೋದ್‌ಗೌಡ ಮೊದಲಾದವರು ಭಾಗವಹಿಸಿದ್ದರು.