ಅರಣ್ಯಾಧಿಕಾರಿಗಳ ವಿರುದ್ದ ಭುಗಿಲೆದ್ದ ಆಕ್ರೋಶ

KannadaprabhaNewsNetwork | Published : Sep 22, 2024 1:46 AM

ಸಾರಾಂಶ

ಹೊಸನಗರ ತಾಲೂಕಿನ ಬುಕ್ಕಿವರೆ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಬಳಿಕ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಹೊಸನಗರ

ಸರ್ಕಾರದ ಅರಣ್ಯ ಒತ್ತುವರಿ ತೆರವು ಆದೇಶಕ್ಕೆ ಮಲೆನಾಡು ಭಾಗದಲ್ಲಿ ರೈತರ ಆಕ್ರೋಶದ ಜ್ವಾಲೆ ಎದ್ದಿದೆ. ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಅರಣ್ಯ ಇಲಾಖೆಗೆ ತಲೆ ನೋವು ತರಿಸಿದ್ದರೆ ಆಕ್ರೋಶದ ನಡುವೆಯೂ ತೆರವಿಗೆ ಖಡಕ್ ಸೂಚನೆ ನೀಡಲಾಗಿದ್ದು ಒತ್ತುವರಿ ತೆರವು ರಾಜಕೀಯ ಲೆಕ್ಕಾಚಾರಕ್ಕೆ ತಿರುಗಿದೆ.

ಮಲೆನಾಡಿನ ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಮಾಡುವಂತೆ ಸರ್ಕಾರ ನೀಡಿರುವ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಒತ್ತುವರಿ ತೆರವು ಆದೇಶ ಹೊರಬರುತ್ತಿದ್ದಂತೆಯೇ ಅರಣ್ಯ ಇಲಾಖೆ ಸರ್ಕಾರದ ಆದೇಶದಂತೆ ಅರಣ್ಯ ಒತ್ತುವರಿ ತೆರವಿಗೆ ಮುಂದಾಗಿದ್ದು ಅರಣ್ಯ ಇಲಾಖೆಯಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿ ಕಿರುಕುಳ ನೀಡುವುದರೊಂದಿಗೆ ಅರಣ್ಯಾಧಿಕಾರಿಗಳು ಮುಳುಗಡೆ ಸಂತ್ರಸ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬುಕ್ಕಿವರೆ ಗ್ರಾಮದಲ್ಲಿ ನಡೆದಿದೆ.

ಬುಕ್ಕಿವರೆ ಗ್ರಾಮದ ಹೆಬ್ಬಳಿ ಶಾಲೆಯಲ್ಲಿ ನಡೆದ ಅರಣ್ಯ ಸಮಿತಿ ಸಭೆಯಲ್ಲಿ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಗ್ರಾಮಸ್ಥರು ಸ್ಥಳೀಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಶಾಸಕ ಬೇಳೂರು ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಮುಳುಗಡೆ ಸಂತ್ರಸ್ಥರೊಂದಿಗೆ ಸಂಘರ್ಷಕ್ಕೆ ಇಳಿಯದೆ ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿ ,ಹಳೆಯ ಒತ್ತುವರಿಯನ್ನು ಹೊರತು ಪಡಿಸಿ ಹೊಸದಾಗಿ ಅರಣ್ಯ ನಾಶಕ್ಕೆ ಮುಂದಾಗದಂತೆ ಗ್ರಾಮಸ್ಥರಿಗೆ ಖಡಕ್ ಎಚ್ಚರಿಕೆ ನೀಡಿದರು.

ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಡೀಮ್ಡ್ ಅರಣ್ಯ ಪುನರ್ ಪರಿಶೀಲನೆ ಮಾಡಿ ನೈಜ ವರದಿ ನೀಡಲು ಅರಣ್ಯ ಇಲಾಖೆಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆಯನ್ನು ತಿರಸ್ಕರಿಸಿದ್ದು, ಈ ಬಾರಿಯೂ ಅಧಿವೇಶನದಲ್ಲಿ ತಿರಸ್ಕರಿಸಲು ಸಮ್ಮತಿ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರು ಅಹವಾಲು ಸಲ್ಲಿಸುವ ವೇಳೆಯಲ್ಲಿ ಮೂಗೂಡ್ತಿ ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿ ಪಾಂಡುರಂಗ ರವರ ಮೇಲೆ ಗ್ರಾಮಸ್ಥರು ಮುಗಿಬಿದ್ದು, ಆರೋಪ ಮಾಡುತ್ತಿರುವಾಗ ಶಾಸಕರ ಸಮ್ಮುಖದಲ್ಲಿಯೇ ಅರಣ್ಯ ಸಿಬ್ಬಂದಿ ಗ್ರಾಮಸ್ಥರಿಗೆ ಏರುಧ್ವನಿಯಲ್ಲಿ ಮಾತನಾಡಿದ್ದು, ಶಾಸಕರ ಗಮನಿಸಿ ಗ್ರಾಮಸ್ಥ ರೊಂದಿಗೆ ಸೌಮ್ಯವಾಗಿ ವರ್ತಿಸುವಂತೆ ಸಿಬ್ಬಂದಿಗೆ ವಾರ್ನಿಂಗ್ ನೀಡಿದ ಪ್ರಸಂಗ ನಡೆಯಿತು.

ಅರಣ್ಯ ಇಲಾಖೆಗೆ ನಮ್ಮ ಜೀವನಕ್ಕಿಂತ ಭೂಮಿಯೇ ಮುಖ್ಯವಾಗಿದ್ದರೆ ನಮ್ಮನೆಲ್ಲಾ ಸಾಮೂಹಿಕ ಹತ್ಯೆ ಮಾಡಿಬಿಡಿ ಎಂದು ಮುಳುಗಡೆ ಸಂತ್ರಸ್ತರೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಶಿವಮೊಗ್ಗ ವನ್ಯಜೀವಿ ವಲಯದ ಡಿಎಫ್‌ಒ ಪ್ರಸನ್ನ ಕೃಷ್ಣ ಪಟಗಾರ್ , ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ , ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ ಮುಖಂಡರಾದ ಉಮಾಕರ್ ಕಾನುಗೋಡು ,ಬೆಳ್ಳೂರು ಯೋಗೀಶ್ , ಮಹೇಂದ್ರ ಬುಕ್ಕಿವರೆ , ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ,ಪಿಎಸ್‌ಐ ಎಸ್.ಪಿ. ಪ್ರವೀಣ್ , ಕಂದಾಯ ಇಲಾಖೆಯ ಸೈಯದ್ ಅಫ಼್ರೋಜ್ ,ಸ್ಥಳೀಯ ಅರಣ್ಯಾಧಿಕಾರಿಗಳು ಇದ್ದರು.ರೈತರ ಜಾಗ ಒತ್ತುವರಿಗೆ ಬಿಡುವುದಿಲ್ಲ

ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ನಂತರ ಮಾತನಾಡಿದ ಶಾಸಕ ಬೇಳೂರು, ಭೂ ಹಕ್ಕು ಕೊಡಿಸುವ ನಿಟ್ಟಿನಲ್ಲಿ ನಾನು ಮತ್ತು ಸಚಿವ ಮಧುಬಂಗಾರಪ್ಪ ಈಗಾಗಲೇ ನಾಲ್ಕೈದು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ನ್ಯಾಯಾಲಯದಲ್ಲಿ ಖಾಸಗಿ ವಕೀಲರನ್ನು ಸಹ ನೇಮಿಸಿದ್ದೇವೆ. ಪ್ರಸ್ತುತ ನೀವು ವಾಸವಿರುವ ಜಾಗವನ್ನು ಒತ್ತುವರಿ ಮಾಡಲು ನಾವು ಅವಕಾಶ ನೀಡುವುದಿಲ್ಲ. ಹೊಸದಾಗಿ ಅರಣ್ಯ ನಾಶಕ್ಕೆ ಮುಂದಾಗಬೇಡಿ ಎಂದು ಹೇಳಿ ಅರಣ್ಯಾಧಿಕಾರಿಗಳು ಈ ಭಾಗ ದಲ್ಲಿ ಯಾವುದೇ ರೈತರಿಗೂ ಹೊಸದಾಗಿ ನೋಟಿಸ್ ಜಾರಿ ಮಾಡದಂತೆ ವನ್ಯಜೀವಿ ವಲಯದ ಡಿಎಫ್‌ಒ ರವರಿಗೆ ಸೂಚನೆ ನೀಡಿದರು.ಅರಣ್ಯ ಸಾಗುವಳಿ ರೈತರ ತಂಟೆಗೆ ಬರಬೇಡಿ: ತೀ.ನಾ.ಶ್ರೀನಿವಾಸ್ ಆಕ್ರೋಶ

ಹೊಸನಗರ: ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಮಲೆನಾಡು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಒತ್ತುವರಿ ತೆರವು ಮಾಡಲು ಅವಕಾಶ ನೀಡುವುದಿಲ್ಲ ಎಂದು ಮಲೆನಾಡ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಹೊಸನಗರದಲ್ಲಿ ಶನಿವಾರ ಅರಣ್ಯ, ಸರ್ಕಾರಿ ಭೂಮಿ ಸಾಗುವಳಿ ತೆರವು ಕಾರ್ಯ ವಿರೋಧಿಸಿ ಜನಾಂದೋಲನ ಜಾಗೃತಿ ಪ್ರತಿಭಟನಾ ಸಭೆ ಪ್ರಜಾಪ್ರಭುತ್ವ ಜಾಗೃತಿ ವೇದಿಕೆಯ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಹೊಸನಗರ ತಾಲೂಕಿನ ರೈತರು, ವಿವಿಧ ಪಕ್ಷದ ಮುಖಂಡರು ಹೋರಾಟ ನಡೆಸಿದ್ದು ,ಈ ಸಂದರ್ಭದಲ್ಲಿ ರೈತರ ಪರ ಅವರು ಮಾತನಾಡಿದರು.

ಮಲೆನಾಡಿನಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆಯನ್ನು ಬಗೆಹರಿಸದೇ ಬೆಂಗಳೂರಿನ ಅರಣ್ಯ ಭವನದಲ್ಲಿ ಕುಳಿತು ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಸ್ಥಳೀಯವಾಗಿ ವಾಸಿಸುತ್ತಿರುವ ಜನರ ಮನೆ, ಸಾಗುವಳಿ ಭೂಮಿಯನ್ನು ಸೇರಿಸಿ ಅರಣ್ಯ ಎಂದು ದಾಖಲು ಮಾಡಿಕೊಂಡು 1916 ರಿಂದ ಮಾಡಿದ ನೋಟಿಫಿಕೇಶನ್‌ಗಳನ್ನು ಈಗ ಜಾರಿಗೆ ತಂದು, ರೈತರ ಸಾಗುವಳಿ ತೆರವು ಮಾಡಲು ಅರಣ್ಯ ಇಲಾಖೆ ಮುಂದಾದರೆ ಮುಂದೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಆಳುವ ಸರ್ಕಾರಗಳು ಜನವಿರೋಧಿ ನಿಲುವುಗಳನ್ನು ತೆಗೆದುಕೊಂಡಾಗ ಅದನ್ನು ವಿರೋಧಿಸುವುದು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. ಮಲೆನಾಡಿನಲ್ಲಿ ಸರ್ಕಾರಗಳೇ ಮಾಡಿದ ಅಣೆಕಟ್ಟಿನಿಂದ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ಮತ್ತು ಜನರ ಸಾಗುವಳಿ ಭೂಮಿ, ಮನೆಗಳು ಮುಳುಗುಡೆಯಾಗಿದ್ದು, ಅದನ್ನು ಸರ್ಕಾರ ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೆಲವರು ಪರಿಸರವಾದದ ಹೆಸರಿನಲ್ಲಿ ಪದೇ ಪದೇ ಕೋರ್ಟ್‌ಗೆ ಹೋಗುತ್ತಿರುವುದನ್ನು ಎದುರಿಸಲು ಮಲೆನಾಡಿನ ಜನರು ಸಂಘಟಿತರಾಗಬೇಕಾಗಿದೆ. 3 ಎಕರೆಗಿಂತ ಹೆಚ್ಚಿನ ಒತ್ತುವರಿಯನ್ನು ತೆರವು ಮಾಡುತ್ತೇವೆ ಎನ್ನುವ ಸರ್ಕಾರದ ನಿರ್ಧಾರ ರೈತರನ್ನು ಇಭ್ಬಾಗ ಮಾಡುವ ತಂತ್ರವಾಗಿದ್ದು, ಜನಸಂಗ್ರಾಮ ಪರಿಷತ್ 3 ಎಕರೆ ಒಳಗಿನ ರೈತರನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯಕ್ಕೆ ಹೋಗಲು ಸಿದ್ಧವಾಗಿದೆ. ಇದನ್ನು ವಿರೋಧಿಸುತ್ತಾ ನಾವು ನಮ್ಮ ಬದುಕಿನ ಹಕ್ಕನ್ನು ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗಲು ಸಿದ್ಧರಾಗಬೇಕಾಗಿದೆ ಬೇಕಾಗಿದೆ ಎಂದರು.ಉಗ್ರ ಹೋರಾಟಕ್ಕೆ ರೈತರೇ ಒಟ್ಟಾಗಿ :

ಜೀವನೋಪಾಯಕ್ಕಾಗಿ ಒತ್ತುವರಿಯೂ ನಡೆದಿದೆ. ಅರಣ್ಯವೂ ಕ್ಷೀಣಿಸಿದ್ದು, ಹಿಂದೆ ಜಿಲ್ಲಾಧಿಕಾರಿಗಳು ಘೋಷಿಸಿದ ಮೀಸಲು ಅರಣ್ಯ ಸಂಬಂಧ ರಚನೆಯಾಗಿದ್ದ ಟಾಸ್ಕ್ ಫೋರ್ಸ್ ಸಮಿತಿ ಯಾವುದೇ ವಾಸ್ತವಾಂಶವನ್ನು ಪರಿಗಣಿಸದೇ ಇರುವುದರಿಂದ ಪುನಃ ಟಾಸ್ಕ್‌ಫೋರ್ಸ್ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.ಒತ್ತುವರಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಅರಣ್ಯ ಮತ್ತು ಅರಣ್ಯೇತರ ಒತ್ತುವರಿ ವಿಂಗಡಿಸಿ ನೈಜ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅರಣ್ಯ ಇಲಾಖೆಗೆ ಸೂಚಿಸಬೇಕು ಸರ್ಕಾರದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ನಡುವೆ ಮಾಹಿತಿ ವಿನಿಮಯವಿಲ್ಲದೇ ಆಗಿರುವ ತಪ್ಪುಗಳನ್ನು ಸರಿಪಡಿಸಿ ಗ್ರಾಮವಾರು ಪುನರ್ ಸರ್ವೆ ನಡೆಸಿ ರೈತರ ಸಾಗುವಳಿಗಳನ್ನು ಬಿಟ್ಟು ಅರಣ್ಯ ಘೋಷಣೆಯಾಗಬೇಕು ಎಂದೂ ಆಗ್ರಹಿಸಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್, ದುಮ್ಮ ರೇವಣ್ಣಪ್ಪಗೌಡ, ಮಂಡಾನಿ ಮೋಹನ್, ಬಿ.ಜಿ.ನಾಗರಾಜ್, ಬಿ.ಪಿ ರಾಮಚಂದ್ರ, ಶ್ರೀಕರ ಸಂಪೆಕಟ್ಟೆ, ಬಾಷಿರ್ ಸಾಬ್, ಮಂಜುನಾಥ ಬ್ಯಾಣದ, ರೈತಸಂಘದ ಅಧ್ಯಕ್ಷ ರವೀಂದ್ರ, ಪ್ರಕಾಶ್ ಗೌಡ ಮಾಸ್ತಿಕಟ್ಟೆ, ಶುಶ್ರುತ ಅಡಗೋಡಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್, ಕುಮಾರ್ ಸೊನಲೆ, ಜೀವನ್ ಕುಮಾರ್, ನಾಗರಕೊಡಿಗೆ ಒತ್ತಾಯಿಸಿದರು.ರೈತನ ಮೇಲೆ ಅರಣ್ಯಾಧಿಕಾರಿ ದರ್ಪ

ಹೊಳೆಹೊನ್ನೂರು: ಸಮೀಪದ ಗುಡುಮಘಟ್ಟೆಯಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ರೈತನ ಮೇಲೆ ಹಲ್ಲೆ ಮಾಡಿ ಅರಣ್ಯಾಧಿಕಾರಿ ದರ್ಪ ತೋರಿದ ಘಟನೆ ಶನಿವಾರ ನಡೆದಿದೆ.

ಕಳೆದ 3-4 ದಿನಗಳಿಂದ ಒತ್ತುವರಿ ತೆರವು ನಡೆಯುತ್ತಿದೆ. ಭದ್ರಾವತಿ ಆರ್‌ಎಫ್‌ಓ ದುಗ್ಗಪ್ಪ ಗುಡುಮಗಟ್ಟೆಯ ಭೋವಿ ಹನುಮಂತಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ ರೈತನ ಮೇಲೆ ಹಲ್ಲೆ ಮಾಡಿದ ಸುದ್ದಿ ಹರಡುತ್ತಿದ್ದಂತೆ 2-3 ಗ್ರಾಮಗಳ ಗ್ರಾಮಸ್ಥರು ಗುಂಪಾಗಿ ಒತ್ತುವರಿ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ಅರಣ್ಯಾಧಿಕಾರಿ ದುಗ್ಗಪ್ಪನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.ರೈತರು ಅರಣ್ಯಾಧಿಕಾರಿಗಳ ಮಧ್ಯೆ ನಡೆದ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ರೈತ ಹನುಮಂತಪ್ಪ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಹನುಮಂತಪ್ಪ ಸಂಬಂಧಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅರಣ್ಯಾಧಿಕಾರಿ ಪಲಾಯನ ಮಾಡಿದ್ದಾರೆ.

ಕೆಲ ಮಹಿಳೆಯರು ಮಣ್ಣು ತೂರಿ ಆಕ್ರೋಶ ವ್ಯಕ್ತ ಪಡಿಸಿದರು ಎನ್ನಲಾಗುತ್ತಿದೆ. ಸ್ಥಳದಲ್ಲಿದ್ದ ಕೆಲ ನಾಯಕರು ಮಾತನಾಡಿ, ಸಮಸ್ಯೆ ಬಗೆಹರಿಸಿದರು. ಪ್ರಭಾವಿ ಕುಟುಂಬವೊಂದು ಮಾಡಿಕೊಂಡಿರುವ 30 ರಿಂದ 40 ಎಕರೆ ಒತ್ತುವರಿಯನ್ನು ಪ್ರದೇಶವನ್ನು ತೆರವು ಮಾಡುವುದು ಬಿಟ್ಟು ಸಣ್ಣಪುಟ್ಟ ರೈತರ ಪಹಣಿ, ಸಾಗುವಳಿ ಚೀಟಿ ಹೊಂದಿರುವ ಜಮೀನುಗಳನ್ನು ತೆರವು ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.ಸಣ್ಣಪುಟ್ಟ ರೈತರಿಂದ ಕೆಲ ಅರಣ್ಯಾಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಪಡೆದು ಸಾಗುವಳಿ ಮಾಡಿಕೊಳ್ಳುವುದಕ್ಕೆ ಬಿಟ್ಟು ಇಂದು ಬಂದು ಏಕಾಏಕಿ ಕಾಲುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ಎಂದು ಆರೋಪಿಸಲಾಗಿದೆ. ಶನಿವಾರ ಬೆಳಗ್ಗಿನಿಂದ ಸಂಜೆಯ ವರೆಗೂ ಕೋಣನಸರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

Share this article