ಕನ್ನಡಪ್ರಭ ವಾರ್ತೆ ಬೆಂಗಳೂರು:
ಕಲಬುರಗಿಯ ಜಗತ್ ಸರ್ಕಲ್ನಲ್ಲಿ ಮಾನವ ಸರಪಳಿ ರಚಿಸಿ, ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದ ಬಸವಾಭಿಮಾನಿಗಳು ರವಿ ಹಂಜ್ರ ಪ್ರತಿಕೃತಿ ದಹಿಸಿ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದರು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಜಮಾವಣೆಗೊಂಡ ವೀರಶೈವರು, ರವಿ ಹಂಜ್ ವಿರುದ್ದ ಧಿಕ್ಕಾರ ಕೂಗಿ, ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ, ಬಳಿಕ, ಭಾವಚಿತ್ರಕ್ಕೆ ಬೆಂಕಿ ಹಚ್ಚಿದರು.
ದಾವಣಗೆರೆಯಲ್ಲಿ ಜಯದೇವ ವೃತ್ತದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ, ಬಸವ ಬಳಗ, ರಾಷ್ಟ್ರೀಯ ಬಸವ ಸೇನೆ, ಬಸವ ಕೇಂದ್ರ, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ವಿವಿಧ ಸಮುದಾಯದವರು ಪ್ರತಿಭಟನೆ ನಡೆಸಿದರು. ಅಣಕು ಶವಯಾತ್ರೆ ಮಾಡಿದರು.ವಿಜಯಪುರ ಜಿಲ್ಲೆ ತಾಳಿಕೋಟೆಯಲ್ಲಿ ಪ್ರತಿಭಟನೆ ನಡೆಸಿದ ಬಸವ ಅಭಿಮಾನಿಗಳು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಲೇಖಕರ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಿದರು. ಲೇಖಕ ರವಿ ಹಂಜ್ ಪುಸ್ತಕವನ್ನು ಸಂಪೂರ್ಣವಾಗಿ ನಿಷೇಧಿಸಿ, ಲೇಖಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ, ಬೀದರ್, ಮೈಸೂರು, ಚಾಮರಾಜನಗರ, ಚನ್ನಗಿರಿ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.ಹಂಜ್ ಹತ್ಯೆಗೆ ₹5 ಲಕ್ಷ ಬಹುಮಾನ ಘೋಷಣೆ:‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರ ಕುರಿತ ವಿವಾದಿತ ಬರಹದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಆಕ್ರೋಶ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಕೃತಿಯ ಲೇಖಕ ರವಿ ಹಂಜ್ ಅವರ ಹತ್ಯೆ ಮಾಡುವವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಅಥಣಿಯ ಲಿಂಗಾಯತ ಸಮಾಜದ ಮುಖಂಡ ಪ್ರಕಾಶ ಮಹಾಜನ ಬಹಿರಂಗವಾಗಿ ಘೋಷಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಅಥಣಿಯ ಮೋಟಗಿ ಮಠದ ವತಿಯಿಂದ ಪ್ರತಿ ವರ್ಷ ನೀಡಲಾಗುವ ‘ಬಸವಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟರಿಗೆ ನೀಡಿದ್ದ ಪ್ರಶಸ್ತಿಯನ್ನು ಹಿಂಪಡೆಯುವುದಾಗಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಈ ವೇಳೆ ಘೋಷಿಸಿದರು. ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಬರೆದ ಆಕ್ಷೇಪಾರ್ಹ ಲೇಖನಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಬಸವಣ್ಣನವರಿಗೆ ಅವಮಾನಿಸಲಾಗಿದೆ. ಹೀಗಾಗಿ, ಲೇಖಕ ಹಾಗೂ ಪ್ರಕಾಶಕರನ್ನು ಸರ್ಕಾರ ಕೂಡಲೇ ಬಂಧಿಸಬೇಕು. ಈ ಹಿನ್ನೆಲೆಯಲ್ಲಿ ಮೋಟಗಿ ಮಠದಿಂದ ವಿಶ್ವೇಶ್ವರ ಭಟ್ಟರಿಗೆ ನೀಡಲಾಗಿದ್ದ ಬಸವಭೂಷಣ ಪ್ರಶಸ್ತಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಅವರು ಸಂದರ್ಶನವೊಂದರಲ್ಲಿ ಬಸವಣ್ಣನವರ ವ್ಯಕ್ತಿತ್ವದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ವೀರಶೈವ ಪಂಚಪೀಠಗಳ ಜಗದ್ಗುರುಗಳು ಖಂಡಿಸಿದ್ದಾರೆ.ಈ ಕುರಿತು ಸಂಯುಕ್ತ ಹೇಳಿಕೆ ನೀಡಿರುವ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶಿ ಪೀಠದ ಜಗದ್ಗುರುಗಳು, 12ನೇ ಶತಮಾನದ ಭಕ್ತ ಭಂಡಾರಿ ಬಸವಣ್ಣನವರ ಬಗ್ಗೆ ಹಗುರವಾದ ಮತ್ತು ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ಖಂಡನೀಯ. ಇಂತಹ ವ್ಯಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.