ಭಗವಾನ್ ಹೇಳಿಕೆಗೆ ಒಕ್ಕಲಿಗರ ಸಂಘದಿಂದ ಆಕ್ರೋಶ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪ್ರೊ.ಕೆ.ಎಸ್.ಭಗವಾನ್ ಹೇಳಿಕೆಯನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿದೆ.
ಕೆ.ಆರ್.ಪೇಟೆ: ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪ್ರೊ.ಕೆ.ಎಸ್.ಭಗವಾನ್ ಹೇಳಿಕೆಯನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಭಗವಾನ್ ವಿವಾದಾತ್ಮಕ ಮಾತುಗಳನ್ನು ಆಡಿದ್ದರಿಂದ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿದ್ದರೂ ಇನ್ನೂ ಬುದ್ದಿ ಕಲಿತಿಲ್ಲ. ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸಮುದಾಯದ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಇಲ್ಲದಿದ್ದರೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ದೇಶಕ್ಕೆ ಅನ್ನ ನೀಡುವ ಒಕ್ಕಲಿಗ ಸಮುದಾಯ ಸುಸಂಸ್ಕೃತ ಸಮಾಜವಾಗಿದೆ. ಸಮಾಜದಲ್ಲಿ ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿದೆ. ಒಕ್ಕಲಿಗ ಮುನಿದರೆ ನಾಡೇ ಮುನಿಯುತ್ತದೆ ಎಂಬುದು ಅರಿವಿರಲಿ ಎಂದು ಸಲಹೆ ನೀಡಿದರು. ನೀವೊಬ್ಬ ಸುಶಿಕ್ಷಿತ ಸಮುದಾಯವನ್ನು ಬೆಂಬಲಿಸುವ ಕೆಲಸ ಮಾಡಬೇಕೇ ವಿನಃ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಪ್ರೊ. ಭಗವಾನ್ ಹೇಳಿರುವ ಈ ಮಾತಿಗೆ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ಮಹಿಳೆಯರೂ ಸೇರಿದಂತೆ ಉಗ್ರಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಉಪಾಧಕ್ಷ ಬೋರೇಗೌಡ, ಮಹಿಳಾ ಅಧ್ಯಕ್ಷೆ ಪ್ರೇಮನಾಗರಾಜು, ಉಪಾಧ್ಯಕ್ಷೆ ರೇಣುಕಚಂದ್ರು. ಕರವೇ ಸಂಘಟನಾ ಕಾರ್ಯದರ್ಶಿ ಗೋಪಿಗೌಡ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶೀಳನೆರೆ ಭರತ್, ಬಸವೇಗೌಡ, ಗಗನ್‌ಗೌಡ ಸೇರಿದಂತೆ ಹಲವರಿದ್ದರು.

Share this article