ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷೀಯರಿಂದ ಆಕ್ರೋಶ

KannadaprabhaNewsNetwork |  
Published : Oct 04, 2026, 01:15 AM IST
 ಸಿಕೆಬಿ-3  ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿದರು | Kannada Prabha

ಸಾರಾಂಶ

ಚುನಾಯಿತ ಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಆದರೆ ಶಾಸಕರಿಗೆ ಶಾಸಕನಾಗಿ ಏನು ಮಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಅರಿವಿಲ್ಲದಂತಿದೆ ಎಂದು ಟೀಕಿಸಿದರು.

ಶಾಸಕನಾಗಿ ಏನು ಮಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಅರಿವಿಲ್ಲ: ಎಸ್.ಎಂ. ಮುನಿಯಪ್ಪ ವಾಗ್ದಾಳಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಾಸಕ ಪ್ರದೀಪ್ ಈಶ್ವರ್ ಅವರ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್‌ನ ಮಾಜಿ ಶಾಸಕ, ನಗರಸಭೆಯ ಮಾಜಿ ಸದಸ್ಯರು ಹಾಗೂ ಹಿರಿಯ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಮಾತನಾಡಿ, ಚುನಾಯಿತ ಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಆದರೆ ಶಾಸಕರಿಗೆ ಶಾಸಕನಾಗಿ ಏನು ಮಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಅರಿವಿಲ್ಲದಂತಿದೆ ಎಂದು ಟೀಕಿಸಿದರು. ಚಿಂತಾಮಣಿಯಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶದ ಹಳೆಯ ವಿಚಾರಗಳನ್ನು ಮತ್ತೆ ಮುನ್ನೆಲೆಗೆ ತಂದು ಪ್ರಚೋದನೆ ಉಂಟುಮಾಡುವ ಪ್ರಯತ್ನ ಶಾಸಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ತಮ್ಮ ಸ್ಥಾನದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಪ್ರಚಾರಕ್ಕಾಗಿ ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಗರದ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಈವರೆಗೆ ಅಧಿಕಾರಿಗಳ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.

ನಗರಸಭೆ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್ ಮಾತನಾಡಿ, ಶಾಸಕರಾಗಿ ಮೂರು ವರ್ಷಗಳ ಅವಧಿಯಲ್ಲಿ ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಶಾಸಕರ ಕೆಲವು ಹೇಳಿಕೆಗಳು ಹಾಗೂ ನಡೆಗಳಿಂದ ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿದರು.

ದಲಿತರ ಪರ ಎಂದು ಹೇಳಿಕೊಳ್ಳುವ ಶಾಸಕರು ಅಂಬೇಡ್ಕರ್ ಜಯಂತಿಯಂತಹ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಶಾಸಕರ ಹೇಳಿಕೆ ಹಾಗೂ ಕಾರ್ಯವೈಖರಿಯನ್ನು ಪಕ್ಷದ ಹೈಕಮಾಂಡ್ ಗಮನಿಸಬೇಕು. ಇಲ್ಲವಾದರೆ ಪಕ್ಷಕ್ಕೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ. ಅಧಿಕಾರದ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಮುಖಂಡರು ಎಚ್ಚರಿಸಿದರು

ನಗರಸಭೆ ಮಾಜಿ ಸದಸ್ಯ ಕಣಿತಹಳ್ಳಿ ವೆಂಕಟೇಶ್ ಮಾತನಾಡಿ, ಕ್ಷೇತ್ರದ ಮೊದಲ ವ್ಯಕ್ತಿಯಾಗಿರುವ ಶಾಸಕ ಪ್ರದೀಪ್ ಈಶ್ವರ್ ಅವರು ಅಭಿವೃದ್ಧಿಯತ್ತ ಗಮನಹರಿಸಬೇಕು. ಕ್ಷೇತ್ರದ ಸಮಸ್ಯೆಗಳ ಕುರಿತು ಸಮರ್ಪಕ ಸಭೆಗಳನ್ನು ನಡೆಸಿಲ್ಲ ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಚಿಂತಾಮಣಿಗೆ ತೆರಳಲು ಕಾತುರ ತೋರುವ ಶಾಸಕರು, ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯೊಂದರ ಕುರಿತು ಶಾಂತಿ ಸಭೆ ನಡೆಸಲು ಮುಂದಾಗಿಲ್ಲ. ರಾಜಕೀಯಕ್ಕೆ ಬಂದ ಆರಂಭಿಕ ದಿನಗಳಲ್ಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ದೊರೆಯಲು ಡಾ. ಎಂ.ಸಿ. ಸುಧಾಕರ್ ಅವರ ಪಾತ್ರವಿತ್ತು. ಇದೀಗ ಅವರ ವಿರುದ್ಧವೇ ರಾಜಕೀಯ ಸಮರಕ್ಕೆ ಮುಂದಾಗಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯೆ ನಾರಾಯಣಮ್ಮ, ದರಕಾಸ್ತು ಸಮಿತಿ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ಶಂಕರ್, ಕೃಷ್ಣಪ್ಪ ಮತ್ತಿತರರು ಇದ್ದರು.

ಸಿಕೆಬಿ-3 ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗೇಶಪುರವನ್ನು ಮಾದರಿ ಗ್ರಾಮವನ್ನಾಗಿಸುವ ಸಂಕಲ್ಪ
ಕಲಬುರಗಿ: ಟ್ಯಾಂಕರ್‌ನಲ್ಲಿ ನೀರು ಪೂರೈಕೆ