ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿತಾಲೂಕಿನ ಕುನ್ನೂರು ಗ್ರಾಮದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆಯಾಗಿದೆ. ಸಾಕಷ್ಟು ಮನೆಯ ನಳಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಗ್ರಾ.ಪಂ.ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ನೀರಿನ ಅಭಾವ ಸೃಷ್ಟಿಯಾಗುತ್ತಿದೆ.
ಕುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿ ಕುಡಿಯುವ ನೀರು ಪೂರೈಸಲು ೨೦೨೧-೨೨ನೇ ಸಾಲಿನಲ್ಲಿ ೮೬ ಲಕ್ಷ ರು.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಪೈಪ್‌ಲೈನ್ ಹಾಕದೇ ಕಳಪೆ ಕಾಮಗಾರಿ ನಡೆಸಿರುವುದು ಅಲ್ಲದೆ ಚರಂಡಿಯಲ್ಲಿ ಪೈಪ್‌ಲೈನ್ ಎಳೆಯಲಾಗಿದೆ. ಇದರಿಂದ ಏನಾದರೂ ಪೈಪ್‌ಲೈನ್ ಒಡೆದರೆ ಕೊಳಚೆಯ ನೀರು ಪೈಪ್‌ಲೈನ್‌ಗೆ ಬಂದು ಅದೇ ನೀರನ್ನು ಕುಡಿಯುವ ಅಪಾಯವಿದೆ.ನೀರು ಪೂರೈಕೆ ಮಾಡಲು ಅಳವಡಿಸಿರುವ ಪೈಪ್‌ಗಳು ಹಾಗೂ ಇತರ ಸಾಮಗ್ರಿಗಳು ಕಳಪೆಯಿಂದ ಕೂಡಿದ್ದು, ಈಗಾಗಲೇ ಅಲ್ಲಲ್ಲಿ ಶಿಥಿಲಗೊಂಡಿವೆ. ಅಸಮರ್ಪಕ ನಿರ್ವಹಣೆಯಿಂದ ಬೀದಿ ಬೀದಿಗಳಲ್ಲಿ ಶುದ್ಧ ಕುಡಿಯುವ ನೀರು ಪೋಲಾಗುತ್ತಿದೆ. ಪೈಪ್‌ಗಳು ಹಾಳಾಗಿ ನೀರು ಪೋಲಾಗಿದ್ದರೂ ಗ್ರಾಪಂ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ. ಕಾಮಗಾರಿ ಮುಕ್ತಾಯದ ವರದಿಯೂ ನೀಡಿರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಸ್ಪೀಡ್ ಬ್ರೇಕರ್:ಪೈಪ್‌ಲೈನ್‌ನಿಂದ ನಳಗಳಿಗೆ ಹೆಚ್ಚಿನ ಕುಡಿಯುವ ನೀರು ಹೋಗದಂತೆ ಸ್ಪೀಡ್ ಬ್ರೇಕರ್ ಹಾಕಿದ್ದಾರೆ. ಆದರೆ ಇವುಗಳನ್ನು ಶೇ ೪೦ರಷ್ಟು ನಳಗಳ ತೆಗೆದು ಹಾಕಿದ್ದಾರೆ. ಆದ್ದರಿಂದ ಕೆಲವರಿಗೆ ಕುಡಿಯುವ ನೀರು ಕಡಿಮೆ ಬರುತ್ತದೆ. ಉಳಿದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ನೀರಿನ ಸಮಸ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದೆ.ಈ ಕುರಿತು ಯಾವ ಅಧಿಕಾರಿಗಳನ್ನು ಕೇಳಿದರೂ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ.
ಗ್ರಾಪಂ ವ್ಯಾಪ್ತಿಯ ಕುನ್ನೂರು, ಮಮದಾಪುರ, ಹಳವ ತರ್ಲಘಟ್ಟ, ಹೊನ್ನಾಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹಾಗೂ ಕಾಮಗಾರಿ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವದು ಎಂದು ಆಯಾ ಗ್ರಾಮಗಳ ಯುವಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.ಕುನ್ನೂರ ವ್ಯಾಪ್ತಿಯ ಅಡವಿಸೋಮಾಪುರ ಗ್ರಾಮದಲ್ಲಿ ಚರಂಡಿ ತುಂಬಿ ನೀರು ಮನೆ ಒಳಗೆ, ಶಾಲೆಯ ಆವರಣದಲ್ಲಿ ಹೋದರೆ ಸಂಬಂಧಿಸಿದ ಪಿಡಿಒ ಅವರಿಗೆ ದುರಸ್ತಿ ಮಾಡಿ ಎಂದರೆ ಅಧ್ಯಕ್ಷರು ತಮ್ಮ ಊರಿನವರು ಇದ್ದಾರೆ. ಅಲ್ಲೆ ಕೇಳ್ಕೋಳ್ಳಿ ಎಂದು ಹಾರಿಗೆ ಉತ್ತರ ನೀಡುತ್ತಾರೆ ಎಂದು ಅಡವಿಸೋಮಾಪುರದ ಯುವ ಮುಖಂಡ ಈಶ್ವರಗೌಡ ಪಾಟೀಲ ಹೇಳುತ್ತಾರೆ.
ಪೈಪ್‌ಲೈನ್ ಅಳವಡಿಕೆ ಹಾಗೂ ಕಾಮಗಾರಿ ತಕ್ಷಣ ಮುಗಿಸುವ ಕುರಿತು ಗುತ್ತಿದಾರರಿಗೆ ಸಾಕಷ್ಟು ಬಾರಿ ಹೇಳಿದರೂ ಮೊಬೈಲ್‌ನಲ್ಲಿ ಕೂಡಾ ಮಾತನಾಡುತ್ತಿಲ್ಲ. ಅಲ್ಲದೆ ಪಂಚಾಯಿತಿ ಮುಂದಿನ ೧೦೦ ಮೀಟರ್ ಕಾಲುವೆಯ ಕಾಮಗಾರಿಯನ್ನು ತಕ್ಷಣವಾಗಿ ಮುಗಿಸುವದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಕುನ್ನೂರು ಪಿಡಿಒ ಎಸ್.ಎಸ್. ಪಾವೀನ ಹೇಳಿದ್ದಾರೆ.