ಕುಷ್ಟಗಿ: ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ಬರೆದಿರುವ ಬಸವ ಮಂಟಪ ಕೃತಿಯಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಸ್ತಾಪಿಸಿರುವುದನ್ನು ಖಂಡಿಸಿ, ಲೇಖಕ ರವಿ ಹಂಜ್ ಹಾಗೂ ವೇದಿಕೆ ಕಲ್ಪಿಸಿಕೊಟ್ಟ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಸವಪರ ಸಂಘಟನೆಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಕುರಿತು ವಿವಾದಾತ್ಮಕವಾಗಿ ಬರೆಯುವ ಮೂಲಕ ಪ್ರಚಾರ ಪಡೆಯುವ ಪ್ರವೃತ್ತಿ ಖಂಡನೀಯ. ರವಿ ಹಂಜ್ ಅವರು ತಮ್ಮ ಬಸವ ಮಂಟಪ ಕೃತಿಯಲ್ಲಿ ಪ್ರಸ್ತಾಪಿಸಿರುವ ವಿಚಾರಗಳು ಬಸವಾಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿವೆ ಎಂದರು.
ಬಸವಣ್ಣನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲ ಸಮುದಾಯಗಳನ್ನೂ ಸಮಾನತೆಯ ತಳಹದಿಯ ಮೇಲೆ ಒಗ್ಗೂಡಿಸಿ ಸಮಾಜ ಕಟ್ಟುವ ಸಂದೇಶ ಸಾರಿದವರು. ಅವರ ವಚನ ಸಾಹಿತ್ಯ ಹಾಗೂ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಒತ್ತಾಯಿಸಿದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ ಬಸವಣ್ಣನವರಿಗೆ ಮಾಡಿದ ಅಪಚಾರ ಕೇವಲ ಒಂದು ಸಮಾಜಕ್ಕೆ ಮಾಡಿದ ಅವಮಾನವಲ್ಲ. ಅದು ಮಾನವೀಯ ಮೌಲ್ಯಗಳಿಗೆ ಹಾಗೂ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಮಹಾನ್ ಚಿಂತನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದರು.
ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಬಸವಣ್ಣನವರ ಕುರಿತು ಬರೆಯುವವರು ಮೊದಲು ಅವರ ವಚನ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಬಸವಣ್ಣನವರು ಬಿಜ್ಜಳನ ರಾಜಕೋಶದ ಹಣ ಬಳಸಿ ದಾಸೋಹ ಮಾಡಿದರು ಎಂಬ ಆರೋಪಕ್ಕೆ ಅವರ ವಚನಗಳಲ್ಲಿಯೇ ಸ್ಪಷ್ಟ ಉತ್ತರ ದೊರೆಯುತ್ತದೆ. ದಾಸೋಹಕ್ಕಾಗಿ ಬಿಜ್ಜಳನ ಸಂಪತ್ತನ್ನು ಬಳಸದೆ, ದಾನಿಗಳಿಂದ ಬಂದ ದೇಣಿಗೆಯ ಮೂಲಕ ದಾಸೋಹ ನಡೆಸುತ್ತಿದ್ದುದನ್ನು ವಚನಗಳಲ್ಲಿ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಟಿ ಬಸವರಾಜ, ಮಹಾದೇವಪ್ಪ ಮಹಾಲಿಂಗಪೂರ, ಶಿವಸಂಗಪ್ಪ ಬಿಜಕಲ್, ಉಮಾಪತಿ ಅಕ್ಕಿ, ಲಾಡ್ಲೇಮಷಾಕ ದೋಟಿಹಾಳ, ಮುರ್ತಜಾ ಪೇಂಟರ್, ಶಶಿಧರ ಕವಲಿ, ಶಿವಾಜಿ ಹಡಪದ್, ವಿರೇಶ ಬಂಗಾರಶೆಟ್ಟರ್, ರಾಮನಗೌಡ ಪಾಟೀಲ್, ದೇವೆಂದ್ರಪ್ಪ ಬಳೂಟಗಿ, ಫಕೀರಪ್ಪ ಚಳಗೇರಿ, ಸಂಗನಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು.