ದೇಶ ನೋಡು, ಕೋಶ ಓದು ಎಂಬ ನುಡಿಮುತ್ತು ಇಂದಿಗೂ ಪ್ರಸ್ತುತ. ಸಾರ್ವಜನಿಕರು ಇದರ ಸದುಪಯೋಗವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು.

ಹೊನ್ನಾವರ: ಯುವಜನರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಹೊನ್ನಾವರ ಶಾಖಾ ಗ್ರಂಥಾಲಯವನ್ನು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಹೊನ್ನಾವರ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶ ನೋಡು, ಕೋಶ ಓದು ಎಂಬ ನುಡಿಮುತ್ತು ಇಂದಿಗೂ ಪ್ರಸ್ತುತ. ಸಾರ್ವಜನಿಕರು ಇದರ ಸದುಪಯೋಗವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದರು.

ರೋಟರಿ ಸದಸ್ಯ ದಿನೇಶ ಕಾಮತ ಮಾತನಾಡಿ, ಹೊನ್ನಾವರ ಶಾಖಾ ಗ್ರಂಥಾಲಯವು ಆಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಸಂಪೂರ್ಣ ಸ್ವಯಂಚಾಲಿತ ಗೇಟ್ ರಿಜಿಸ್ಟರ್, ಪುಸ್ತಕ ಎರವಲು- ವಾಪಸ್ ವ್ಯವಸ್ಥೆ ಹಾಗೂ ವೆಬ್‌ಸೈಟ್‌ನಲ್ಲಿ ಪುಸ್ತಕ ಹುಡುಕಾಟದ ಸೌಲಭ್ಯಗಳು ಓದುಗರ ಅಮೂಲ್ಯ ಸಮಯವನ್ನು ಉಳಿಸುತ್ತಿವೆ. ಇದರೊಂದಿಗೆ ಮುದ್ರಿತ ಅಕ್ಸೆಶನ್ ರಿಜಿಸ್ಟರ್ ಮತ್ತು ಸದಸ್ಯತ್ವ ರಿಜಿಸ್ಟರ್‌ಗಳು ಗ್ರಂಥಾಲಯದ ದಾಖಲೆಗಳನ್ನು ಶಾಶ್ವತವಾಗಿ ಸುರಕ್ಷಿತವಾಗಿಡಲು ನೆರವಾಗುತ್ತಿವೆ ಎಂದರು.

ಡಾ. ಆಶಿಕ್ ಹೆಗಡೆ ಮಾತನಾಡಿ, ಗ್ರಂಥಾಲಯವು ಎಲ್ಲರಿಗೂ ಜ್ಞಾನ ಮತ್ತು ಮನಃಶಾಂತಿ ನೀಡುವ ತಾಣವಾಗಿದೆ. ನಿರಂತರ ಓದುವ ಅಭ್ಯಾಸವು ಮನಸ್ಸಿಗೆ ಉಲ್ಲಾಸ ನೀಡುವುದರ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ರಾಜೇಶ ಸಾಳೆಹಿತ್ತಲ, ಕೃಷ್ಣ ಭಟ್ಟ, ಕಮಲಾ ನಾಯ್ಕ ಇದ್ದರು. ಗ್ರಂಥಪಾಲಕರಾದ ಜಿ.ಎಂ. ಹೆಗಡೆ ಹಾಗೂ ಸಿಬ್ಬಂದಿ ಸಹಕರಿಸಿದರು.

ಬಹುಮಾನ ವಿತರಣೆ: ಗ್ರಂಥಾಲಯದ ದಾಖಲೆಗಳ ಆಧಾರದ ಮೇಲೆ ಅತಿಹೆಚ್ಚು ಬಾರಿ ಗ್ರಂಥಾಲಯಕ್ಕೆ ಭೇಟಿ ನೀಡಿದ ಮತ್ತು ಉತ್ತಮ ಓದುಗರನ್ನು ಗುರುತಿಸಿ ಗೌರವಿಸಲಾಯಿತು. ವರ್ಷದ ಅತ್ಯುತ್ತಮ ಓದುಗ ಬಹುಮಾನ ತುಳಸಿದಾಸ ಡಿ. ನಾಯ್ಕ, ವಿನೋದ ವಿ. ನಾಯ್ಕ, ಬಾಬು ಡಿ. ಶೇಟ್ ಪಡೆದುಕೊಂಡರು. ಅತ್ಯುತ್ತಮ ರೆಫರೆನ್ಸ್ ಅಧ್ಯಯನ ಬಹುಮಾನವನ್ನು ಶ್ವೇತಾ ಗೌಡ ಮತ್ತು ನಾಗೇಶ ಮುಕ್ರಿ ಪಡೆದುಕೊಂಡರು.